2026 ಸೆಪ್ಟಂಬರ್ ವೇಳೆಗೆ ಹೆಬ್ಬಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಚಾರ ಆರಂಭ

Most read

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಬ್ಬಾಳ ನಡುವಿನ ನೀಲಿ ಮಾರ್ಗದ ಮೆಟ್ರೋ ಸಂಚಾರ 2026 ರ ಸೆಪ್ಟಂಬರ್ ವೇಳೆಗೆ ಆರಂಭವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೆಆರ್ ಪುರ ನಡುವಿನ 38 ಕಿಮೀ ಮೆಟ್ರೋ ಮಾರ್ಗ ಪೂರ್ಣಗೊಳ್ಳುವವರೆಗೂ ಕಾಯದೆ ಹೆಬ್ಬಾಳ -ಕೆಐಎ ವಿಮಾನ ನಿಲ್ದಾಣ ನಡುವಿನ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ.

ವಿಮಾನ ನಿಲ್ದಾಣ ತಲುಪುವ ಲಕ್ಷಾಂತರ ಪ್ರಯಾಣಿಕರು ಹೆಬ್ಬಾಳದಿಂದ ಸುಲಭವಾಗಿ ಪ್ರಯಾಣ ಮಾಡಬಹುದು. ಟ್ರಾಫಿಕ್, ಟೋಲ್ ಗಾಗಿ ಹೆಚ್ಚಿನ ಹಣ ಪಾವತಿ ಮಾಡುವ ಯಾವ ಕಿರಿಕಿರಿಯೂ ಇರುವುದಿಲ್ಲ. ಇಡೀ ಮಾರ್ಗದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಕೆಲವು ಸ್ಥಳಗಳ ಬಳಿ ವಿಳಂಬವಾಗುತ್ತಿದೆ. ಕಾಮಗಾರಿಯ ಸಮಯಕ್ಕೆ ಮಿತಿ ಹಾಕಿರುವುದರಿಂದ ಯಲಹಂಕ ಸಮೀಪದ ವಾಯುಪಡೆ ನಿಲ್ದಾಣದ ಹತ್ತಿರ ನಿಧಾನವಾಗಿ ಸಾಗುತ್ತಿದೆ. ಬೆಟ್ಟಹಲಸೂರು ನಿಲ್ದಾಣದ ಬಳಿಯೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. 2020ರಲ್ಲಿ ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಎಂಬೆಸಿ ಗ್ರೂಪ್ ಬಿಎಂಆರ್ ಸಿಎಲ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ನಿಲ್ದಾಣಕ್ಕೆ ಎಂಬೆಸಿ 140 ಕೋಟಿ ರೂ ಒದಗಿಸುತ್ತಿದೆ.

ಇನ್ನು ಹೆಬ್ಬಾಳ- ಕೆ ಆರ್ ಪುರ ನಡುವಿನ ಮೆಟ್ರೋ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದೆ. ಮೆಟ್ರೋ ಕಾಮಗಾರಿ ಹತ್ತಿರ ಅವಘಡ ಸಂಭವಿಸಿ ಇಬ್ಬರು ಜೀವ ತೆತ್ತ ನಂತರ ಕಳೆದ ಆರು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಎಚ್ ಬಿಆರ್ ಲೇಔಟ್ ಸಮೀಪ 18 ಮೀಟರ್ ಉದ್ದದ ಮೆಟ್ರೋ ಪಿಲ್ಲರ್ ನಿರ್ಮಾಣ ಮಾಡುವಾಗ ಕಬ್ಬಿಣದ ರಾಡ್ ಗಳು ತಾಯಿ ಮತ್ತು ಆಕೆಯ ಪುಟ್ಟ ಕಂದಮ್ಮನ ಮೇಲೆ ಬಿದ್ದು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೆಬ್ಬಾಳ-ಕೆ.ಆರ್. ಪುರ ನಡುವಿನ ಮಾರ್ಗ 2026 ರ ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಮೂಲಗಳು ತಿಳಿಸಿವೆ.

ನೀಲಿ ಮಾರ್ಗದಲ್ಲಿ ಮಾತ್ರ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರುವಂತೆ ಯೋಜನೆ ರೂಪಿಸಲಾಗಿದೆ. ಅತಿ ಹೆಚ್ಚು ವಾಹನದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ (ಒಆರ್ಆರ್) ದಟ್ಟಣೆ ಕಡಿಮೆ ಮಾಡುವಲ್ಲಿಯೂ ನೀಲಿ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article