ಡೆಹರಾಡೂನ್: ಉತ್ತರಾಖಂಡದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ನೆರೆಯ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಬಿದ್ದಿವೆ, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಈ ನಡುವೆ ಕೇದಾರನಾಥ ಯಾತ್ರೆಗೆ ಬಂದಿದ್ದ 12 ಮಂದಿ ಭಕ್ತರು ಟ್ರಕಿಂಗ್ ಮಾರ್ಗದಲ್ಲಿ ಮಳೆಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ.
ಡೆಹರಾಡೂನ್, ಹಲ್ದ್ವಾನಿ, ಚಮೋಲಿಗಳಲ್ಲಿ ಹಲವರು ನೆರೆ ನೀರಿನಲ್ಲಿ ಕಣ್ಮರೆಯಾಗಿದ್ದಾರೆ.
ರಾಜಧಾಣಿ ಡೆಹ್ರಾಡೂನ್ ನಲ್ಲಿ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನರು ಭೀತಿಯಿಂದ ರಾತ್ರಿ ಕಳೆದಿದ್ದಾರೆ.
ಪ್ರಸಿದ್ಧ ಹರಿದ್ವಾರ ನಗರ ಸಂಪೂರ್ಣ ನೆರೆ ನೀರಿನಿಂದ ತುಂಬಿಕೊಳ್ಳುತ್ತಿದ್ದು, ಕಂಖಾಲ್ ಪೊಲೀಸ್ ಠಾಣೆಯೊಳಗೆ ನೀರು ನುಗ್ಗಿದೆ. ಭೂಪತ್ವಾಲಾ, ಹರಿದ್ವಾರ, ನಯಾ ಹದಿದ್ವಾರ, ಕಂಖಾಲ್ ಮತ್ತು ಜ್ವಾಲಾಪುರಗಳ ಮಾರುಕಟ್ಟೆಗಳೆಲ್ಲ ನೀರುಮಯವಾಗಿದ್ದು, ಜನರು ಮನೆಗಳಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ( ಎನ್ ಡಿಆರ್ ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ (ಎಸ್ ಡಿಆರ್ ಎಫ್) ಮಳೆಪೀಡಿತ ಸ್ಥಳಕ್ಕೆ ಆಗಮಿಸಿದ್ದು ಪರಿಹಾರ ಕಾರ್ಯಾಚರಣೆ ಆರಂಭಿಸಿವೆ.
ಕೇದಾರನಾಥ ಯಾತ್ರೆಗೆ ಹೋಗುವ ದಾರಿಯಲ್ಲಿ ಸುಮಾರು 200 ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಐಎಎಸ್ ಅಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ.
ಟ್ರಕ್ಕಿಂಗ್ ಮಾರ್ಗದಲ್ಲಿ ಇದ್ದ ಭಕ್ತರನ್ನು ವಿಶೇಷ ಹೆಲಿಪ್ಯಾಡ್ ಗಳಿಗೆ ಕರೆತರಲಾಗುತ್ತಿದ್ದು, ಅವರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಹ್ ಧಾಮಿ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.