ಬೆಂಗಳೂರು: ನಿನ್ನೆ ತಡರಾತ್ರಿ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದರೆ ಮತ್ತೆ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ರಾತ್ರಿ ಒಂದು ಗಂಟೆಯ ನಂತರ ನಗರದ ಹಲವು ಭಾಗಗಳಲ್ಲಿ ಮಳೆಯಾಯಿತು. ಬಿಳೇಕಹಳ್ಳಿ- 40.50 ಮೀ.ಮೀ ಮಳೆ, ದೊರೆಸಾನಿಪಾಳ್ಯದಲ್ಲಿ 38 ಮೀ.ಮೀ, ಬಿಟಿಎಂ ಬಡಾವಣೆಯಲ್ಲಿ 31 ಮೀ.ಮೀ, ಬೊಮ್ಮನಹಳ್ಳಿಯಲ್ಲಿ 26.50 ಮೀ.ಮೀ, ಅರೆಕೆರೆಯಲ್ಲಿ 25.50ಮೀ.ಮೀ , ಗೊಟ್ಟಿಗೆರೆಯಲ್ಲಿ14 ಮೀ.ಮೀ, ನಾಯಂಡಹಳ್ಳಿಯಲ್ಲಿ 11.50 ಮೀ.ಮೀ, ವಿದ್ಯಾಪೀಠ ಸುತ್ತಮುತ್ತ 13 ಮೀ.ಮೀ ಮತ್ತು ಸಿಂಗಸಂಧ್ರದಲ್ಲಿ 22.50 ಮೀ.ಮೀ ಮಳೆಯಾಗಿರುವ ವರದಿಯಾಗಿದೆ.
ಶನಿವಾರ ತಡರಾತ್ರಿ ಸುರಿದಿದ್ದ ಭಾರೀ ಮಳೆಯಿಂದಾಗಿ ತಗ್ಗುಪ್ರದೇಶದ ಮನೆಗಳ ನಿವಾಸಿಗಳು ಎಲ್ಲಿ ಮಳೆನೀರು ನುಗ್ಗುವುದೋ ಎಂಬ ಭೀತಿಯಲ್ಲೇ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿತ್ತು. ಶನಿವಾರ ರಾತ್ರಿ ಕೆಂಗೇರಿ ಭಾಗದಲ್ಲಿ 100 ಮಿ.ಮೀ ಗೂ ಹೆಚ್ಚು ಭರ್ಜರಿ ಮಳೆಯಾಗಿತ್ತು.
ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ದೊಡ್ಡ ಪ್ರಮಾಣದಲ್ಲಿ ಮುಂಗಾರುಪೂರ್ವ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತಿದೆ. ಎಲ್ಲಾ ಎಂಟೂ ವಲಯಗಳ ನೋಡಲ್ ಅಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ವಾಡಿಕೆಯಂತೆ ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಲಿದ್ದು, ಬೆಂಗಳೂರಿನಲ್ಲಿ ಮುಂಗಾರುಪೂರ್ವ ಮಳೆಯಿಂದಾಗಿರುವ ಸಮಸ್ಯೆಗಳ ಕುರಿತು ಇಂದು ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.