ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಹಿಂಗಾರು ಅಬ್ಬರ ಮತ್ತಷ್ಟು ಹೆಚ್ಚಾಗಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಇರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ತತ್ತರಿಸಿದ್ದು, ಇಂದು ಬೆಳ್ಳಂಬೆಳಿಗ್ಗೆ ಸಹ ಜಡಿ ಮಳೆ ಆರಂಭವಾಗಿದೆ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ಇದ್ದು, ಜನರು ಹೈರಾಣಾಗಿದ್ದಾರೆ.
ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ, ಕರ್ನಾಟಕದ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮತ್ತು ಸಾಧಾರಣ ಮಳೆಯಾಗಲಿದೆ. ಅಕ್ಟೋಬರ್ 14ರಿಂದ 18ರ ತನಕ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಹಾಕಲಾಗಿದೆ.
ಅಕ್ಟೋಬರ್ 17ರಂದು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 17ರಂದು ಉತ್ತರ ಒಳನಾಡಿನಲ್ಲಿ ಮಳೆ ಇರುವುದಿಲ್ಲ ಎಂದು ಐಎಂಡಿ ಮಾಹಿತಿ ನೀಡಿದೆ. ಮುಂಗಾರಿನಂತೆ ಹಿಂಗಾರು ಅಬ್ಬರ ಕೂಡ ಹೆಚ್ಚಾದ ಹಿನ್ನೆಲೆ ಜಲಾಶಯಗಳು ಭರ್ತಿಯಾಗಿವೆ.
ಕರಾವಳಿ ಕರ್ನಾಟಕದಲ್ಲಿ 35 ಕಿಲೋ ಮೀಟರ್ನಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಚಂಡಮಾರುತದ ವಾತಾವರಣ ಇರಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.