ಬೆಂಗಳೂರು: ಸಾವನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಯಾವಾಗ ಎಲ್ಲಿ ಹೇಗೆ ಸಂಭವಿಸುತ್ತದೆ ಎಂದು ಯಾರೂ ಹೇಳಲಾಗದು. ಈ ರೀತಿಯ ಅನಿರೀಕ್ಷಿತ ಸಾವಿಗೆ ಮತ್ತೊಂದು ಉದಾಹರಣೆ ಬೆಂಗಳೂರಿನಲ್ಲಿ ಸಂಭವಿಸಿದೆ. ನಗರದ ಬ್ರೂಕ್ ಫಿಲ್ಡ್ ನ ಐಟಿಪಿಎಲ್ ರ ಸ್ತೆಯಲ್ಲಿ ಐಟಿ ಉದ್ಯೋಗಿಯೊಬ್ಬರು ಅನಿರೀಕ್ಷಿತವಾಗಿ ಅಸು ನೀಗಿದ್ದು ಹತ್ತು ಗಂಟೆಗಳ ನಂತರ ತಿಳಿದು ಬಂದಿದೆ.
ಐಟಿ ಉದ್ಯೋಗಿ ಸಂತೋಷ್ ಪ್ರಸಾದ್ ಎಂಬುವರು ಎಂದಿನಂತೆ ತಮ್ಮ ಕಾರಿನಲ್ಲಿ ಕಚೇರಿಗೆ ಹೊರಟಿದ್ದರು. ಹೈ ಶುಗರ್ ನಿಂದ ಬಳಲುತ್ತಿದ್ದ 37 ವರ್ಷದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದಾರೆ. ಆದರೆ ಸಂಜೆವರೆಗೆ ಅವರು ಕಾರಿನಿಂದ ಕೆಳಗೆ ಇಳಿದೇ ಇರಲಿಲ್ಲ.
ಬೆಳಗ್ಗೆ ನಿಲ್ಲಿಸಿದ ಕಾರು ಇಲ್ಲಿಯೇ ಇದೆ. ಕಾರಿನಲ್ಲಿದ್ದ ಯಾರೂ ಕೆಳಗೆ ಇಳಿದಿಲ್ಲ ಎಂದು ಅನುಮಾನಗೊಂಡ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿ ಮಾಲೀಕ ಕಾರಿನ ಬಳಿ ಹೋಗಿ ಒಳಗೆ ಯಾರಿದ್ದೀರಿ ಎಂದು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಾರಿನ ಗ್ಲಾಸ್ ಒಡೆದಿದ್ದಾರೆ. ಒಳಗೆ ಇದ್ದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಅವರು ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಹೆಚ್ಎಎಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರಿನಲ್ಲಿ ಸಿಕ್ಕ ಐಡಿ ಕಾರ್ಡ್, ಕಾರ್ ನಂಬರ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ಹೆಚ್ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತೋಷ್ ಪ್ರಸಾದ್ ಇಂದಿರಾನಗರಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು ಎಂದು
ಗೊತ್ತಾಗಿದೆ.