ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಸಮಯದಲ್ಲಿ ತಾವು ಮಂಡ್ಯದಿಂದ ಸ್ಪರ್ಧಿಸುವ ಮೊದಲು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಯಾವುದೇ ಚರ್ಚೆ ಅಥವಾ ಒಪ್ಪಂದ ಆಗಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಗುರುವಾರ ಕಾರ್ಯಕರ್ತರ ಸಭೆಗೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಯೋಗೇಶ್ವರ್ ಅಥವಾ ಇನ್ನಾರಿಗೆ ಆಗಲಿ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂದು ಬಿಜೆಪಿ ವರಿಷ್ಠರ ಜತೆ ಒಪ್ಪಂದವಾಗಿರಲಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದರು.
ಚುನಾವಣೆ ಸಮೀಪಿಸುತ್ತಿದೆ. ಆವತ್ತು ಏನೇನು ನಡೆಯಿತು ಎಂದು ಹೇಳಲೇಬೇಕು. ಜನರಿಗೆ ಸತ್ಯ ಗೊತ್ತಾಗಬೇಕು ಎಂಬುದು ನನ್ನ ಉದ್ದೇಶ ಎಂದು ಸಚಿವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಾಸಭೆ ಕ್ಷೇತ್ರದಿಂದ ಡಾ ಸಿ.ಎನ್. ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಲು ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರೇ ಮೂಲ ಕಾರಣ. ಅವರ ಒತ್ತಾಯಕ್ಕೆ ಗೌರವ ಕೊಟ್ಟು, ಅವರ ಮಾತಿಗೆ ತಲೆಬಾಗಿ ಅವರನ್ನು ಅಭ್ಯರ್ಥಿ ಮಾಡಲಾಯಿತು. ಅದಕ್ಕೂ ಮೊದಲು ನಾನು ಯೋಗೇಶ್ವರ್ ಅವರೇ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದೆ. ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಪದೇಪದೆ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ಅಂದಿನ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಿದರು.
ಈ ಕ್ಷಣದ ತನಕ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕು ಎಂದು ನಾನು ನಿರ್ಧಾರ ಮಾಡಿಲ್ಲ. ಕಾರ್ಯಕರ್ತರ ಸಭೆಗಳನ್ನು ಮಾಡಲಾಗುತ್ತಿದೆ. ಅಂತಿಮವಾಗಿ ರಾಜ್ಯ ಮತ್ತು ದೆಹಲಿ ಮಟ್ಟದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು. ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಅದನ್ನು ತಪ್ಪು ಎಂದು ನಾನು ಹೇಳಲಾರೆ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಕಾರ್ಯಕರ್ತರ ಅಭಿಪ್ರಾಯದಂತೆ ನಾನು ನಿರ್ಧಾರ ಕೈಗೊಳ್ಳಬೇಕಿದೆ. ಏಕೆಂದರೆ ಕಾರ್ಯಕರ್ತರು ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಿಕೊಂಡಿದ್ದಾರೆ. ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ನಾನು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ನಾನು ಪ್ರಾಥಮಿಕ ಹಂತದಲ್ಲಿಯೇ ಯೋಗೇಶ್ವರ್ ಅವರಿಗೆ ಹೇಳಿದ್ದೆ. ಜೆಡಿಎಸ್, ಬಿಜೆಪಿ ಒಂದಾದರೆ ಇಲ್ಲಿ ಗೆಲ್ಲುವುದು ಕಷ್ಟವಲ್ಲ. ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಟ್ಟಿ ಹಾಕಲಾಗಿದೆ. ಅದೇ ರೀತಿ ಚನ್ನಪಟ್ಟಣದಲ್ಲಿಯೂ ಕಟ್ಟಿ ಹಾಕಬೇಕಿದೆ. ಒಮ್ಮತದ ಎನ್ ಡಿಎ ಅಭ್ಯರ್ಥಿ ಹಾಕಿದರೆ ಇದು ಸುಲಭ. ಈ ಮಾತನ್ನು ನಾನು ಯೋಗೇಶ್ವರ್ ಅವರಿಗೆ ಹೇಳಿದ್ದೇನೆ ಎಂಬುದಾಗಿ ಸಚಿವರು ಹೇಳಿದರು.
ಮೈತ್ರಿಗೆ ಮೂಲ ಕಾರಣರು ಯಾರು ಎಂಬುದನ್ನು ನಾನು ಬೀದಿಯಲ್ಲಿ ಚರ್ಚೆ ಮಾಡಲಾರೆ. ಹಾಗೆ ಮಾಡುವುದು ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದಂತೆಯೇ. ಯೋಗೇಶ್ವರ್ ಅವರು ಮೈತ್ರಿ ಬಗ್ಗೆ ಯಾರ ಜತೆ ಚರ್ಚೆ ನಡೆಸಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಅಭ್ಯರ್ಥಿ ಆಗಬೇಕು ಎಂದ ಯೋಗೇಶ್ವರ್ ಅವರು ಒಮ್ಮೆ ನನ್ನ ಬಳಿ ಬಂದಿದ್ದರು. ದೆಹಲಿಯಲ್ಲಿ ಚರ್ಚೆ ಮಾಡಿದ್ದರು. ಹಾಗಿದ್ದರೆ ತಾವು ಕ್ಷೇತ್ರದಲ್ಲಿನ ನಮ್ಮ ಮುಖಂಡರ ಜತೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದ್ದೆ. ಆಮೇಲೆ ನಡೆದಿದ್ದು ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿಯೂ ಅಭ್ಯರ್ಥಿ ಆಗಬೇಕು ಎಂದು ಅನೇಕ ನಾಯಕರು ಇದ್ದಾರೆ ಎಂದು ಅವರು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು ಈ ಚುನಾವಣೆಗೆ ನಿಲ್ಲಬೇಕು ಅಥವಾ ನಿಲ್ಲಿಸಬೇಕು ಎಂಬ ಬಗ್ಗೆ ಈ ಕ್ಷಣದವರೆಗೂ ಚರ್ಚೆ ನಡೆದಿಲ್ಲ, ನಾನು ತೀರ್ಮಾನ ಮಾಡಿಲ್ಲ. ನನ್ನ ಉದ್ದೇಶ ಇಲ್ಲಿ ಕಾಂಗ್ರೆಸ್ ಸೋಲಬೇಕು, ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಬೇಕು. ಈ ಹಿನ್ನೆಯಲ್ಲಿ ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಎರಡೂ ಪಕ್ಷಗಳ ರಾಷ್ಟ್ರ, ರಾಜ್ಯ ನಾಯಕರು ಕೂತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.