ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರಕಾರವು ‘ಭಾರತರತ್ನ’ ಪುರಸ್ಕಾರ ಘೋಷಣೆ ಮಾಡಿದ್ದರ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಸತ್ ಅಧಿವೇಶನದ ಬಜೆಟ್ ಕಲಾಪದ ಕೊನೆಯ ದಿನವಾದ ಶನಿವಾರ ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು; “ಇಂಥ ಅನನ್ಯ ಸಾಧಕರಿಗೆ ಭಾರತರತ್ನ ಘೋಷಣೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಭಿನ್ನಾಭಿಪ್ರಾಯಗಳು ಬರಬಾರದು. ಇಡೀ ದೇಶವೇ ಅತ್ಯುನ್ನತ ಪುರಸ್ಕಾರಕ್ಕೆ ಈ ಮೂವರು ಮಹನೀಯರನ್ನು ಆಯ್ಕೆ ಮಾಡಿದ್ದಕ್ಕೆ ಸ್ವಾಗತಿಸಿ ಸಂತೋಷ ವ್ಯಕ್ತಪಡಿಸಿದೆ ಎಂದರು.
ಕೇಂದ್ರ ಸರಕಾರವು ಈ ಗೌರವಕ್ಕೆ ಅರ್ಹರು, ಮಹಾನ್ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆ ಮಾಡುವುದು ಅಥವಾ ಟೀಕಿಸುವುದು ಸರಿಯಲ್ಲ ಎಂದು ದೇವೇಗೌಡರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳು ಚರಣ್ ಸಿಂಗ್, ನರಸಿಂಹರಾವ್ ಹಾಗೂ ಸ್ವಾಮಿನಾಥನ್ ಅವರ ಜತೆಗಿನ ತಮ್ಮ ಒಡನಾಟವನ್ನು ಸ್ಮರಣೆ ಮಾಡಿಕೊಂಡರು.
ಈ ದೇಶವನ್ನು ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ:
ಇದೇ ವೇಳೆ ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ತಾವು ತಮ್ಮ ಧರ್ಮಪತ್ನಿ ಅವರ ಸಮೇತ ಹಾಜರಾದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿಗಳು; “ಈ ದೈವಕಾರ್ಯದಲ್ಲಿ ನಾನು ನನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಭಾಗಿಯಾಗಿದ್ದೆ. ಈ ದೇಶವನ್ನು ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ” ಎಂದರು.
ರಾಮಮಂದಿರ ನಿರ್ಮಾಣದಿಂದ ಕೋಟ್ಯಂತರ ಭಾರತೀಯರ ಕನಸು ಸಾಕಾರವಾಗಿದೆ. ಅದು ನನ್ನ ಪಾಲಿಗೆ ಭಕ್ತಿ ಪರವಶತೆಯ ಕ್ಷಣವಾಗಿತ್ತು. ಶ್ರೀರಾಮದೇವರು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇರುವವನು ಎನ್ನುವುದಕ್ಕೆ ಅದುವೇ ಸಾಕ್ಷಿ. ಶ್ರೀರಾಮರು ಸದ್ವಿಚಾರಗಳು ಮತ್ತು ದಯೆ, ಪ್ರೀತಿಯ ಪ್ರತೀಕ. ಹೀಗಾಗಿ ಪ್ರತಿಯೊಬ್ಬರಿಗೂ ಆ ರಾಮನು ಆರಾಧ್ಯ ದೈವವಾಗಿದ್ದಾನೆ ಎಂದು ಮಾಜಿ ಪ್ರಧಾನಿಗಳು ಬಣ್ಣಿಸಿದರು.
ಶ್ರೀರಾಮ ದೇವರ ತತ್ವಾದರ್ಶಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಪ್ರಭಾವಿತರಾಗಿದ್ದರು. ಅಲ್ಲದೆ, ಶ್ರೀರಾಮರನ್ನು ಬಾಪೂ ಅವರು ನಮ್ಮ ದೇಶದ ಸದ್ಗುಣಗಳ ಪ್ರತೀಕವನ್ನಾಗಿಸಿದರು. ಆ ರಾಮರ ಆಶೀರ್ವಾದ, ಕರುಣೆಯಿಂದಲೇ ಅವರು ಭಾರತವನ್ನು ಒಗ್ಗೂಡಿಸಿದರು ಎಂದು ದೇವೇಗೌಡರು ಪ್ರತಿಪಾದಿಸಿದರು.
ಶ್ರೀ ರಾಮಮಂದಿರವು ಜಗತ್ತಿಗೆ ಇಂಥ ಸದ್ಗುಣ, ಮೌಲ್ಯಾದರ್ಶಗಳನ್ನು ಪಸರಿಸುವ ಸಂಕೇತವಾಗಿ ಬೆಳಗಲಿ ಎಂದ ಅವರು; ಪ್ರಾಣಪ್ರತಿಷ್ಠೆ ಕಾರ್ಯವನ್ನು ನೆರೆವೇರಿಸಲು ಪ್ರಧಾನಿ ಮೋದಿ ಅವರು ಕೈಗೊಂಡ ವ್ರತ, ಉಪವಾಸ, ಮತ್ತಿತರ ಕಠಿಣ ನಿಯಮಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಪಡಿಸಿದರು.