ತಮಿಳುನಾಡು : ಸಂಗೀತ ಮಾಂತ್ರಿಕ, ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್‌ನಲ್ಲಿ ಇರುವ ಅಂಡಾಳ್ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರಾಕರಿಸಿದ ಘಟನೆಯು, ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಸಚಿವರಾದ ಎಚ್ ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ʼಎಕ್ಸ್ʼನಲ್ಲಿ #WeThePeople ಎಂಬ ಹ್ಯಾಶ್ ಟ್ಯಾಗ್ ಮೂಲಕ ಪೋಸ್ಟ್ ಮಾಡಿರುವ ಅವರು ʼಸಂಗೀತ ಮಾಂತ್ರಿಕ, ಹಾಲಿ ರಾಜ್ಯ ಸಭಾ ಸದಸ್ಯರಾದ ಇಳಯರಾಜ ಅವರನ್ನು ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆಯು ನಿಜಕ್ಕೂ ಅವಮಾನಕರ ಸಂಗತಿ ಆಗಿದ್ದು, ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆʼ ಎಂದು ಹೇಳಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ಯರಾಗಿ ಜೀವಿಸುತ್ತಿರುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಭಾರತೀಯ ಜನಗಳಾದ ನಾವು ಭ್ರಾತೃತ್ವ ಮತ್ತು ಐಕ್ಯತೆಯಿಂದ ಇರಬೇಕು ಎಂಬ ಸಂವಿಧಾನದ ಆಶಯವನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ್ದು ಈ ಹೊತ್ತಿನ ಜರೂರು ಎಂಬುದನ್ನು ಇಳಯರಾಜಾ ಅವರ ಈ ಘಟನೆಯು ನಮಗೆ ಮತ್ತೆ ಮತ್ತೆ ನೆನಪಿಸುತ್ತದೆ ಎಂದು ತಿಳಿಸಿದ್ದಾರೆ.