ದಲಿತರು ಇನ್ನೂ ಆಂಬೇಡ್ಕರ್ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು ಮೆಟ್ಟಿ ನಿಲ್ಲಲು ಅಂಬೇಡ್ಕರ್ ಒಂದೇ ದಾರಿ. ಅದನ್ನು ಅನುಸರಿಸದಿದ್ದರೆ ಮಂಡ್ಯದಂತಹ ಘಟನೆ ನಡೆಯುತ್ತಲೇ ಇರುತ್ತದೆ – ಆಕಾಶ್ ಆರ್ ಎಸ್, ಪತ್ರಕರ್ತರು.
“ಹಿಂದೂಧರ್ಮ ವಿಶ್ವಧರ್ಮ ಆಗಬೇಕಾಗಿದ್ದರೆ ವರ್ಣವ್ಯವಸ್ಥೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು ಹಿಂದೂಧರ್ಮ ಸಂಪೂರ್ಣವಾಗಿ ವಿಸರ್ಜಿಸಿದೆ ಎಂದು ಘೋಷಿಸಬೇಕು” ಎನ್ನುವ ಮಾತನ್ನು ಕುವೆಂಪು ಹೇಳಿದ್ದರು. ಆದರೆ ಈ ಧರ್ಮ ಇದ್ಯಾವುದನ್ನೂ ಬಿಟ್ಟು ಬಾಳುವ ಸೂಚನೆ ಇಲ್ಲ. ಯಾಕೆಂದರೆ ಶತಶತಮಾನಗಳು ಕಳೆದು ಆಧುನಿಕತೆ, ತಂತ್ರಜ್ಞಾನ ಎಲ್ಲವೂ ಮುಂದುವರೆದರು ಮನುಷ್ಯನೊಳಗಿನ ಧರ್ಮ ಮತ್ತು ಜಾತಿಯ ಅಮಲು ಇಳಿದಿಲ್ಲ. ಅದನ್ನು ಇತ್ತೀಚಿನ “ಮಂಡ್ಯದ ಹನಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರು ಕಾಲಭೈರವೇಶ್ವರ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಕ್ಕೆ ಸವರ್ಣೀಯರು ದೇವರನ್ನು ಹೊತ್ತೊಯ್ದ ಘಟನೆ” ಹಾಗೂ ಇನ್ನೊಂದು ಕಡೆ “ಸಮಸ್ತ ಭೂಮಂಡಲ ಸನಾತನ ಧರ್ಮದವರಿಗೆ ಸೇರಿದ್ದು. ಈ ಧರ್ಮದಿಂದ ದೂರ ಹೋದವರಿಗೆ ಭೂಮಂಡಲ ನನ್ನದು ಎಂದು ಹೇಳುವ ಅಧಿಕಾರವಿಲ್ಲ.” “ವಕ್ಛ್‌ಮಂಡಳಿ ಎಂಬ ಆಧುನಿಕ ಭಸ್ಮಾಸುರನನ್ನು ನಾಶ ಮಾಡಲು ಇಡೀ ಹಿಂದೂ ಸಮಾಜ ಸಂಘಟಿತವಾಗಿ ಎದ್ದು ನಿಲ್ಲಬೇಕಿದೆ” ಎಂದು ಸಿ.ಟಿ.ರವಿ ದತ್ತಮಾಲ ಅಭಿಯಾನದ ಭಾಷಣವು ಬಲವಾಗಿ ಸಾಕ್ಷೀಕರಿಸಿದೆ.
ದೇವರು, ಧರ್ಮ ಮತ್ತು ಜಾತಿ ಈ ದೇಶದ ಮಣ್ಣಿನಲ್ಲಿ ಆಳವಾಗಿ ಅಡಕವಾಗಿದೆ. ಅದನ್ನು ಕಾಲಾನುಕ್ರಮವಾಗಿ ಸವರ್ಣೀಯರು ಬಳಕೆ ಮಾಡುತ್ತಲೆ ಇದ್ದಾರೆ. ಹಾಗೆ ನೋಡುವುದಾದರೆ ವರ್ಣಾಶ್ರಮ ವ್ಯವಸ್ಥೆಯನ್ನು ಬ್ರಾಹ್ಮಣ ಸಮುದಾಯಗಳು ಬಹಳ ಗಟ್ಟಿಯಾಗಿ ಪಾಲನೆ ಮಾಡಿಕೊಂಡು ಬಂದಿವೆ. ಕಾಲವೂ ೨೧ನೇ ಶತಮಾನಕ್ಕೆ ಕಾಲಿಡುವಷ್ಟರಲ್ಲಿ ಅದು ನಾನಾ ರೂಪ, ನಾನಾ ವರ್ಗಕ್ಕೆ ಸ್ಥಳಾಂತರಗೊಂಡು ಬ್ರಾಹ್ಮಣ್ಯ ರೂಪ ತಾಳಿ ಎಲ್ಲ ಸಮುದಾಯಗಳ ಹೊಟ್ಟೆಯೊಳಗೆ ಹೊಕ್ಕಿದೆ. ಈಗ ಮುಂದಿನ ಶತಮಾನಕ್ಕೆ ಮತ್ತಷ್ಟು ಮಾರ್ಪಾಡುಗೊಳ್ಳುತ್ತಿದ್ದು, ರಾಜಕೀಯ ಮತ್ತು ಜಾತಿಯ ಉಳಿವಿನ ಸ್ಥಿತ್ಯಂತರಕ್ಕೆ ಬಂದು ನಿಂತಿದೆ. ಅದಕ್ಕೆ ಮಂಡ್ಯ ಮತ್ತು ಚಿಕ್ಕಮಗಳೂರು ಘಟನೆಯೇ ಪ್ರತ್ಯಕ್ಷದರ್ಶಿ. ಯಾಕೆಂದರೆ ದಲಿತ ಸಮುದಾಯವೂ ಎರಡು ರೀತಿಯಲ್ಲಿ ಈ ಸಮಾಜವನ್ನು ಕಟ್ಟುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ಆದರೆ ಅವರು ಸಮಾನತೆಯನ್ನು ಪಡೆಯುವಲ್ಲಿ ಹೆಣಗುತ್ತಿದ್ದಾರೆ, ಅವರ ಮನಸ್ಥಿತಿಯು ಹಿಂದೂ ಧರ್ಮವನ್ನು ಅಪ್ಪಿಕೊಂಡಿರುವುದು ನಿಸ್ಸಂಶಯವಾಗಿ ಗೋಚರಿಸುತ್ತಿದೆ. ಹಾಗಾದರೆ ದಲಿತರು ಇನ್ನೂ ಶೋಷಣೆಗೆ ಒಳಗಾತ್ತಿರುವುದು ಯಾಕೆ? ನಾವೆಲ್ಲ ಹಿಂದೂ ಒಂದು ಎಂದರು ಕೂಡ ದೇವರು, ಧರ್ಮದಿಂದ ದಲಿತರು ದೂರವೇಕೆ?. ಇನ್ನೂ ದಲಿತರಿಗೆ ಅಂಬೇಡ್ಕರ್ ಅರಿವಾಗಿಲ್ಲವೇ?. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆಯೇ? ಅಂಬೇಡ್ಕರ್ ಹೇಳಿದಂತೆ ಹಿಂದೂ ಧರ್ಮ ದಲಿತರನ್ನು ನುಂಗುತ್ತಿದೆಯೇ?. ವರ್ತಮಾನದಲ್ಲಿ ಸಾಕಷ್ಟು ಚಿಂತನೆಗೆ ಒಳಪಡಿಸುವ ವಿಷಯಗಳಿವು.
ಧರ್ಮ, ದೇವರು ಮತ್ತು ದಲಿತರು
ಧರ್ಮ, ದೇವರು ಈ ದೇಶದಲ್ಲಿನ ದೊಡ್ಡ ಭಯೋತ್ಪಾದನೆಯ ಒಂದು ರೂಪ. ಅದು ಈಗ ದಲಿತರ ಮೇಲೆ ಪ್ರಯೋಗವಾಗಿದೆ, ಆಗುತ್ತಲೂ ಇದೆ. ಆ ಮೂಲಕ ಇಂದಿಗೂ ದಲಿತರು ದೇವಸ್ಥಾನದ ಒಳ ಹೋಗುವುದು, ನೀರು ಮುಟ್ಟುವುದು, ಮತಾಂತರ ಆಗುವುದಕ್ಕೆ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. “ದಲಿತರು ಯಾವಾಗಲು ಗುಲಾಮರಾಗಿರಬೇಕು, ಶಿಕ್ಷಣದಿಂದ ವಂಚಿತರಾಗಬೇಕು, ಅಪೌಷ್ಠಿಕತೆಯಿಂದ ನರಳಬೇಕು ಎನ್ನುವ ಗೋಲ್ವಾಲ್ಕರ್”ನ ಮನುವಾದವನ್ನು ನಯವಾಗಿ RSS ಮತ್ತು BJP ಆಚರಣೆಗೆ ತರುವ ಮೂಲಕ ಹಿಂದೂ ಧರ್ಮದ ಅತಿಮಾನುಶ ನೀತಿ ಸೂತ್ರವನ್ನು ಪ್ರಚುರ ಪಡಿಸುತ್ತಿದೆ. ಸವರ್ಣೀಯರು ಅದನ್ನು ಅನುಸರಿಸುತ್ತಿದ್ದಾರೆ.
ದೇವರು, ಧರ್ಮ ಮತ್ತು ಅಧ್ಯಾತ್ಮಿಕ ಚಿಂತನೆ
ಒಳ್ಳೆಯದು ಮಾಡುವುದೇ ದೇವರು, ಪ್ರೀತಿಸುವುದನ್ನು ಕಲಿಸುವುದೇ ಧರ್ಮ. “ವಿಧವೆಯರ ಕಣ್ಣೀರು ಒರೆಸದ, ಹಸಿದವರಿಗೆ ಅನ್ನ ನೀಡದ ದೇವರಲ್ಲಾಗಲಿ ಧರ್ಮದಲ್ಲಾಗಲಿ ನನಗೆ ನಂಬಿಕೆ ಇಲ್ಲ ಎಂದು ಸ್ವಾಮಿ ವಿವೇಕಾನಂದರು ಕೂಗಿ ಹೇಳಿದ್ದರು. ಅವರನ್ನು ಹಿಂದೂ ವೀರಸನ್ಯಾಸಿ ಎಂದು ಕೊಂಡಾಡುವ ಸಮೂಹವೇ ಇದನ್ನು ಮರೆತು ಧರ್ಮ ಮತ್ತು ದೇವರನ್ನು ಅಸ್ಪೃಶ್ಯ ಆಚರಣೆಗೆ ಬಳಸಿಕೊಂಡಿದ್ದಾರೆ. ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ಎನಿಸಿಕೊಂಡಿರುವ ಭಗವದ್ಗೀತೆ ಕೂಡ ಅಸ್ಪೃಶ್ಯತೆಯನ್ನು ಬೋಧಿಸುತ್ತದೆ. ಈ ಗೀತೆಯೂ ಮನುಸ್ಮೃತಿಯ ಸಂಕ್ಷಿಪ್ತ ರೂಪವಾಗಿದೆ ಎಂದು ಅಂಬೇಡ್ಕರ್ ಖಂಡಿಸಿದ್ದರು. ಚಾತುರ್ವರ್ಣ ಹುಟ್ಟು ಹಾಕಿದವನು ನಾನೇ (ಗೀತೆ 4, 13 ) ಚಾತುರ್ವರ್ಣ ಅವನತಿ ಹೊಂದಿದ ಸಂದರ್ಭದಲ್ಲಿ ನಾನೇ ಸ್ವತಃ ಜನ್ಮವೆತ್ತಿ ಬಂದು ಅವನತಿಗೆ ಕಾರಣವಾದವರನ್ನು ಶಿಕ್ಷಿಸಿ ಧರ್ಮವನ್ನು ಪುನರ್ ಸ್ಥಾಪಿಸುವೆನು( ಗೀತೆ, 4,7-8) ಎಂದು ಹೇಳುವ ಪರಮಾತ್ಮ ಎನಿಸಿಕೊಂಡ ಶ್ರೀಕೃಷ್ಣನೂ ಕೂಡ ಇಲ್ಲಿ ಮನುವಾದಿಯ ಪ್ರವರ್ತಕನಾಗಿ ಕಾಣುತ್ತಾನೆ.
ಅಂಬೇಡ್ಕರ್ ಮತ್ತು ಹಿಂದೂ ಧರ್ಮ
ಅಂಬೇಡ್ಕರ್ ಅವರು ನಾನು ಹಿಂದೂವಾಗಿ ಹುಟ್ಟಿದೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಹಿಂದೂಧರ್ಮದಲ್ಲಿನ ಅಸ್ಪೃಶ್ಯತೆ ಆಚರಣೆಗೆ ಬೇಸತ್ತು 1935ರಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಆ ಮೂಲಕ ತನ್ನ ಸಮುದಾಯಕ್ಕೆ ಹಿಂದೂ ಧರ್ಮದ ನೀತಿ ಮತ್ತು ನ್ಯಾಯದ ಬಗ್ಗೆ ಸದಾ ಎಚ್ಚರಿಸುತ್ತಿದ್ದರು.
ಅವರೇ ಹೇಳುವಂತೆ ಧರ್ಮ ಎಂದರೆ “ಮಾನವರು ಬಾಳುವಂತಹ ಸಾಮಾಜಿಕ ವ್ಯವಸ್ಥೆಯನ್ನು ಒಂದು ನೈತಿಕ ವ್ಯವಸ್ಥೆಯಾಗಿ ರೂಪಿಸುವ ಉದ್ದೇಶ ಮತ್ತು ಗುರಿಯನ್ನು ಹೊಂದಿರುವ ಆದರ್ಶಪ್ರಾಯ ದೈವಾಡಳಿತ ಪ್ರತಿಪಾದನೆ”. ಆದರೆ ಇದು ಹಾಗಾಗದೇ ದೈವಾಡಳಿತ ಪ್ರತಿಪಾದನೆ ಸಮಾಜವು ಅಲ್ಲ, ವ್ಯಕ್ತಿ ಅಲ್ಲ. ಅದರ ಕೇಂದ್ರ ಬಿಂದು ಬ್ರಾಹ್ಮಣರು ಎಂಬ ಅತಿಮಾನವ ವರ್ಗವಾಗುವಂತೆ ಮಾಡಿದೆ”,
“ಯಾವುದು ವ್ಯಕ್ತಿಗೆ ಅನ್ಯಾಯ ಉಂಟು ಮಾಡುತ್ತದೆಯೋ ಅದು ಸಮಾಜಕ್ಕೆ ಉಪಯುಕ್ತ ಆಗಲಾರದು. ಜಾತಿವ್ಯವಸ್ಥೆ ಇದನ್ನೇ ಮಾಡುತ್ತದೆ.”
“ದುರದೃಷ್ಟವಶಾತ್ ಅಸಮಾನತೆ ಮತ್ತು ಅನ್ಯಾಯದ ತತ್ವದ ಮೇಲೆ ನಿಂತಿರುವ ಹಿಂದೂ ಧರ್ಮವು ಉತ್ಸಾಹ ತುಂಬಲು ಸಾಧ್ಯವಿಲ್ಲ. ಅಸ್ಪೃಶ್ಯರು ಹಿಂದೂ ಧರ್ಮ ನೆರಳಿನಲ್ಲಿ ಗುಲಾಮಗಿರಿ ನಡೆಸುವ ತನಕ ಅವರ ಜೀವನ ಉತ್ತಮಪಡಿಸಿಕೊಳ್ಳಲು ಯಾವುದೇ ಭರವಸೆ, ಉತ್ಸಾಹ ಹುಟ್ಟುವುದಿಲ್ಲ. ಹೆಚ್ಚೆಂದರೆ ಅವರು ತಮ್ಮ ಹೊಟ್ಟೆ ತುಂಬಿಕೊಳ್ಳುವತ್ತ ಗಮನ ಕೊಟ್ಟಾರು.” (ಭೀಮಯಾನ, ಅಂಬೇಡ್ಕರ್ ಚಿಂತನೆಗಳು)
“ಅಸಮಾನತೆಯೇ ಹಿಂದೂ ಧರ್ಮದ ಜೀವಾಳ. ಕನಿಷ್ಠ ಮಾತುಗಳಲ್ಲಿ ಹೇಳುವುದಾದರೆ ಹಿಂದೂ ಧರ್ಮ ಒಂದು ಅನೈತಿಕ, ಅಮಾನೀಯ ಧರ್ಮ”. (ಹಿಂದೂ ಧರ್ಮದ ತತ್ವ ಪುಸ್ತಕದಿಂದ, ಅಂಬೇಡ್ಕರ್, ಸುರೇಶ್ ಭಟ್ ಬಾಕ್ರಬೈಲ್)
“ಹಿಂದೂಧರ್ಮವು ಮನುಷ್ಯರನ್ನು ದೇವರಿಂದ ಬೇರ್ಪಡಿಸಿ ಅವರು ದೇವರೊಂದಿಗೆ ಆಧ್ಯಾತ್ಮಿಕ ಸಂಸರ್ಗ ಹೊಂದದಂತೆ ನೋಡಿಕೊಳ್ಳುತ್ತದೆ. ಹೀಗಿದೆ ಹಿಂದೂ ಧರ್ಮದ ತತ್ವ. ಅತಿಮಾನವರ ಪಾಲಿಗೆ ಸ್ವರ್ಗ. ಜನಸಾಮಾನ್ಯರ ಪಾಲಿಕೆ ನರಕ” ಎಂದು ಹೇಳಿದ್ದಾರೆ. ಇದೆಲ್ಲರ ಅಧ್ಯಯನದಿಂದ ಅಂಬೇಡ್ಕರ್ ಹಿಂದೂ ಧರ್ಮದ ತತ್ವ ನ್ಯಾಯ ಮತ್ತು ಉಪಯುಕ್ತತೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಇರುವುದಕ್ಕೆ ಕಾರಣ ಇದೇ ಆಗಿದೆ ಎಂದು ಸ್ವಷ್ಟೀಕರಿಸಿದ್ದರು. ಅವರ ದೂರದೃಷ್ಟಿ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಆದರೆ ಇದನ್ನು ದಲಿತರು ಅರಿಯುವಲ್ಲಿ ಸೋತಿದ್ದಾರೆ.
ದಲಿತರು ಮತ್ತು ಅಂಬೇಡ್ಕರ್
ಅಂಬೇಡ್ಕರ್ ಕೊನೆಯ ದಿನಗಳಲ್ಲಿ ತಮ್ಮ ಶಿಷ್ಯ ನಾನಕ್ ಚಂದ್ ಬಳಿ “ ನನ್ನ ಜನರಿಗೆ ಹೇಳು. ನಾನು ಏನೆಲ್ಲ ಸಾಧಿಸಿದ್ದೇನೋ ಅದನ್ನೆಲ್ಲ ಅಸಂಖ್ಯಾತ ಕಷ್ಟಕೋಟಲೆಗಳನ್ನು ಎದುರಿಸುತ್ತಾ, ಈ ನನ್ನ ಏಕಾಂಗಿ ಕೈಗಳಿಂದ ನಾನೊಬ್ಬನೇ ಸಾಧಿಸಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ಈ ದೇಶಕ್ಕಾಗಿ, ಇಲ್ಲಿನ ದಮನಿತರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ತುಂಬ ಕಷ್ಟಪಟ್ಟು ಈ ಬಂಡಿಯನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಈ ಬಂಡಿ ಎಲ್ಲ ಅಡೆತಡೆಗಳನ್ನು ದಾಟಿ ಮುಂದುವರಿಯಲಿ. ನನ್ನ ಜನ ಹಾಗೂ ನನ್ನ ಜೊತೆಯವರು ಈ ಬಂಡಿಯನ್ನು ಮುಂದೊಯ್ಯಲು ಆಗದಿದ್ದರೆ, ಕೊನೆಯ ಪಕ್ಷ ಅದು ಈಗ ಎಲ್ಲಿದೆಯೋ ಅಲ್ಲೇ ಇರಲಾದರೂ ಬಿಡಲಿ. ಆದರೆ ಯಾವ ಕಾರಣಕ್ಕೂ ಅವರು ಈ ಬಂಡಿ ಹಿಂದೆ ಹೋಗಲು ಬಿಡದಿರಲಿ. ಇದು ನನ್ನ ಸಂದೇಶ” ಎಂದು ತಿಳಿಸಿದ್ದರು. ಅಂಬೇಡ್ಕರ್ “ಈ ದೇಶವನ್ನು ಅಲ್ಪಸಂಖ್ಯಾತ ಮತ್ತು ದಲಿತರು ಆಳಬೇಕೆಂಬ ಆಸೆ ಪಟ್ಟಿದ್ದರು”, “ದೇವರ ದೃಷ್ಟಿಯಲ್ಲಿ ಎಲ್ಲರು ಸಮಾನರಾಗಬೇಕಿಲ್ಲ, ಮನುಷ್ಯ ದೃಷ್ಟಿಯಲ್ಲಿ ಸಮಾನರಾಗಬೇಕು”, “ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂತಸದಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾರೆ, ಆದರೆ ನನ್ನ ಜನ ಇನ್ನೂ ಮಲಗಿದ್ದಾರೆ. ಹಾಗಾಗಿ ನಾನು ಎಚ್ಚರದಲ್ಲಿದ್ದೇನೆ” ಎಂದಿದ್ದರು.
ಆದರೆ ಈಗ ಆ ಬಂಡಿ ಎತ್ತ ಸಾಗುತ್ತಿದೆ ಎಂಬುದನ್ನು ಈ ದಮನಿತರು ಆಲೋಚಿಸ ಬೇಕಾಗಿದೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ದಲಿತ ಸಮುದಾಯ ಬಹಳಷ್ಟು ವಿಫಲವಾಗಿದೆ ಎಂದರೆ ತಪ್ಪೇ ಇಲ್ಲ. ಬಾಬಾ ಸಾಹೇಬರ ಅನುಯಾಯಿಗಿಂತ ಅಭಿಮಾನಿಗಳೇ ಹೆಚ್ಚು. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಹಾದಿಯನ್ನೇ ಮರೆತಿರುವ ಈ ಸಮುದಾಯ ಮೌಢ್ಯ, ದೇವರು, ಧರ್ಮ, ಆಚರಣೆ ಎಂಬ ಪುರೋಹಿತ ಶಾಹಿಗಳ ಹೋಮ ಹವನದಲ್ಲಿ ಲೀನವಾಗುತ್ತಿದೆ. ರಾಜಕಾರಣದಿಂದ ಹಿಡಿದು ಜನಸಾಮಾನ್ಯರವರೆಗೂ ಇಲ್ಲಿ ಅಂಬೇಡ್ಕರ್ ರವರ ಫಲ ಉಂಡು ಜೀವಿಸುತ್ತಿದ್ದಾರೆ.
“ದೇವಾಲಯ ಪ್ರವೇಶವು ನಿಮ್ಮ ಆಹಾರಕ್ಕೆ, ಉಡುವ ಬಟ್ಟೆಗೆ, ಶಿಕ್ಷಣಾವಕಾಶಕ್ಕೆ, ರೋಗದ ಮದ್ದಿಗೆ ಹಣ ನೀಡುವುದಿಲ್ಲ. ಆದ್ದರಿಂದ ನಿಮ್ಮ ಹೋರಾಟ ರಾಜಕೀಯ ಮತ್ತು ಆರ್ಥಿಕ ಶಕ್ತಿ ಬೆಳೆಸಿಕೊಳ್ಳುವತ್ತ ಇರಲಿ”. “ಯಾವ ವ್ಯವಸ್ಥೆ ನನ್ನನ್ನು ಕೀಳಾಗಿ ಕಂಡಿದೆಯೋ ಅದರ ಬಗ್ಗೆ ನಾನೇಕೆ ಹೆಮ್ಮೆ ಪಡಲಿ? ಜಾತಿ ವ್ಯವಸ್ಥೆ ಹೀಗೇ ಮುಂದುವರೆಯುವುದಾದರೆ ದೇವಾಲಯ ಪ್ರವೇಶದಿಂದ ಏನೂ ಲಾಭವಿಲ್ಲ. ಅಸ್ಪೃಶ್ಯರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಉನ್ನತಿ ಸಾಧಿಸಿದರೆ ದೇವಾಲಯ ಪ್ರವೇಶ ತಾನೇ ತಾನಾಗಿ ಸಾಧ್ಯವಾಗುತ್ತದೆ ( ಹರಿಜನ ಮೊದಲ ಸಂಚಿಕೆ 1933 ಫೆ.11) ಎಂದು ಹೇಳಿದರು. ದಲಿತರು ಇನ್ನೂ ಆಂಬೇಡ್ಕರ್ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು ಮೆಟ್ಟಿ ನಿಲ್ಲಲು ಅಂಬೇಡ್ಕರ್ ಒಂದೇ ದಾರಿ. ಅದನ್ನು ಅನುಸರಿಸದಿದ್ದರೆ ಮಂಡ್ಯದಂತಹ ಘಟನೆ ನಡೆಯುತ್ತಲೆ ಇರುತ್ತದೆ. ಅಸ್ಪೃಶ್ಯತೆ ಬಗ್ಗೆ ಧ್ವನಿ ಎತ್ತದ ಸಿ.ಟಿ. ರವಿಯಂತವರು ತಮ್ಮ ಲಾಭಕ್ಕಾಗಿ ಹಿಂದೂ ಸಮಾಜ ಒಂದಾಗಬೇಕೆಂದು ಹೇಳುತ್ತಲೆ, ಜಾತಿ ಪದ್ಧತಿ ಮತ್ತು ಚಾತುರ್ವರ್ಣ ಪೋಷಣೆ ಮಾಡುತ್ತಾ ದಲಿತರ ಅವನತಿ ಮಾಡುತ್ತಲೆ ಇರುತ್ತಾರೆ.
ಆಕಾಶ್. ಆರ್.ಎಸ್,
ಪತ್ರಕರ್ತರು.
ಇದನ್ನೂ ಓದಿ- ಜ್ಯೋತಿ ಬಾಫುಲೆ ಅವರ ʻʻಗುಲಾಮಗಿರಿʼʼ ಕಾರ್ಯಕ್ರಮದ ದೃಶ್ಯಗಳು