ಮಂಗಳೂರು: ಧರ್ಮ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾಷಣಗಳನ್ನು ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೂ ಕಾನೂನಿನಲ್ಲಿ ಕ್ರಮ ಕೈಗೊಳ್ಳುವ ಅವಕಾಶ ಇಲ್ಲ. ಈ ವಿಷಯದಲ್ಲಿ ಕಾನೂನು ದುರ್ಬಲವಾಗಿದ್ದು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಪ್ರಧಾನ ಖಾರ್ಯದರ್ಶಿ ಪದ್ಮರಾಜ ಆರ್. ಪೂಜಾರಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿ ನೀಡಿದವರ ವಿರುದ್ಧ ಎಫ್ ಐ ಆರ್ ದಾಖಲಿಸಿ, ಬಂಧಿಸಿದರೂ ಅವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಹಾಗಾಗಿ ದ್ವೇಷ ಹುಟ್ಟಿಸುವ ಭಾಷಣಗಳು ಮುಂದುವರೆಯುತ್ತಿವೆ. ಈಗಿನ ಕಾಲ ಘಟ್ಟದ ಅವಶ್ಯಕತೆಗೆ ಅನುಗುಣವಾಗಿ ಕಾನೂನು ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸರ್ಕಾರ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷ ಹುಟ್ಟಿಸುವವರ ಮೇಲೆ ನಿಗಾ ಇಟ್ಟಿರುವವರ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ದ್ವೇಷ ಮೂಡಿಸುವ ಸಂದೇಶ ಹಂಚಿಕೊಂಡು ಯಾರೂ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆಯೂ ತಂದೆ-ತಾಯಿ ಕುರಿತು ಗೌರವ ಮೂಡಿಸುವಂತೆ ಇರಲಿ ಎಂದು ಕಿವಿಮಾತು ಹೇಳಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಆಗಿರುವ ಅನಾಹುತಗಳು ಸಂಭವಿಸಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಕೇವಲ ಸರ್ಕಾರವನ್ನು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆಡಳಿತಾತ್ಮಕ ತೊಂದರೆಗಳಿದ್ದರೆ ಮುಖ್ಯಮಂತ್ರಿ ಅಥವಾ ಉಸ್ತುವಾರಿ ಸಚಿವರು ಭೇಟಿ ನೀಡಿದಾಗ ಅವರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು. ಮನೆ ಹಾಳುಮಾಡುವ ರಾಜಕೀಯ ಮಾಡುವುದನ್ನು ಬಿಟ್ಟು ಕಾಮತ್ ಅವರು ಮುಖ್ಯ ಮಂತ್ರಿಗಳು ಅಥವಾ ಸಚಿವರು ಭೇಟಿ ನೀಡಿದಾಗ ಅವರನ್ನು ಎಷ್ಟು ಭಾರಿ ಬೇಟಿ ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಮಳೆಯಿಂದ ಅನಾಹುತವಾದಾಗ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಭೇಟಿ ನೀಡಿ ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗಿ ಮನೆ ಕಳೆದುಕೊಂಡವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ಮಳೆ ಸಂತ್ರಸ್ತರಿಗೆ ನೆರವಾಗಲು ಕಾಂಗ್ರೆಸ್ ಪಕ್ಷದಿಂದಲೂ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.