ಹಾಸನದ ಹಾಸನಾಂಬ ದೇಗುಲದಲ್ಲಿ ದೇವಿಯ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಅವಕಾಶವಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ನಿಯಂತ್ರಣ ಮಾಡಲಾಗದೆ ಸಿಬ್ಬಂದಿ ಪರದಾಡುವಂತಾಯಿತು. ಹೀಗಾಗಿ 1000 ರೂ. ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ಸೇರಿ ಎಲ್ಲಾ ರೀತಿಯ ಟಿಕೆಟ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ಬೆಂಗಳೂರು ಸೇರಿ ವಿವಿಧೆಡೆಯಿಂದ ಹಾಸನಾಂಬೆ ದರ್ಶನಕ್ಕೆಂದು ಹೊರಡಲು ಅನುವಾಗಿದ್ದ ನೂರಾರು ವಿಶೇಷ ಬಸ್ಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಜನರ ನಿಯಂತ್ರಣ ಸಾಧ್ಯವಾಗದೆ ಟಿಕೆಟ್ ವಿತರಣೆಯನ್ನೇ ರದ್ದು ಮಾಡಲಾಗಿದೆ.
ವಿಐಪಿ ಪಾಸ್ ಹಾಗೂ ವಿಶೇಷ ದರ್ಶನ ಟಿಕೆಟ್ ಪಡೆದು ಬಂದಿರುವ ಲಕ್ಷಾಂತರ ಮಂದಿ, ‘ಪಾಸ್ ಇದೆ, ಒಳಗೆ ಬಿಡಿ’ ಎಂದು ಪೊಲೀಸರ ಜೊತೆ ವಾಗ್ವಾದ ಮಾಡುತ್ತಿದ್ದಾರೆ. ಆರೇಳು ಗಂಟೆ ಕಳೆದರೂ ದರ್ಶನ ಸಿಗದೆ ಜನರು ಕಂಗಾಲಾಗಿದ್ದು, ರೊಚ್ಚಿಗೆದ್ದಿದ್ದಾರೆ. ರೊಚ್ಚಿಗೆದ್ದ ಭಕ್ತರನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.