ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾದ ಸೌಜನ್ಯ ಪ್ರಕರಣದ ಕುರಿತು ವಿಸ್ತ್ರತ ವರದಿ ಮಾಡಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಯೂಟ್ಯೂಬರ್ ಸಮೀರ್ ವಿರುದ್ಧ ಇದೀಗ ಮಾನನಷ್ಟ ಮೊಕದ್ದಮೆ ದಾಖಲಾಗಿದೆ..
ಧರ್ಮಸ್ಥಳ ಹಾರರ್ ಎಂಬ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿದ್ದ ಸಮೀರ್ ಕೊಲೆಗಡುಕರು, ಅತ್ಯಾಚಾರಿಗಳ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ. ಆದರೆ ಇದೀಗ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ ಡಿ. ಎಂಬ ವ್ಯಕ್ತಿಗಳು ಹತ್ತು ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಧರ್ಮಸ್ಥಳ ಹಾರರ್ ಹೆಸರಿನ ವಿಡಿಯೋವನ್ನು ಕೋರ್ಟ್ ಆದೇಶ ಉಲ್ಲೇಖಿಸಿ ಯೂಟ್ಯೂಬ್ ನಿಂದ ತೆಗೆದುಹಾಕಲಾಗಿತ್ತಾದರೂ, ಅದು ಭಾರತದಿಂದ ಹೊರಗಿನ ದೇಶಗಳಲ್ಲಿ ಈಗಲೂ ವೀಕ್ಷಣೆಗೆ ಲಭ್ಯವಿದೆ. ಇದರ ಬೆನ್ನಲ್ಲೇ ಸಾಕ್ಷ್ಯ ನಾಶ ಎಂಬ ಎರಡನೇ ವಿಡಿಯೋವನ್ನು ಸಮೀರ್ ಬಿಡುಗಡೆ ಮಾಡಿದ್ದರು.
ಈ ವಿಡಿಯೋದಲ್ಲೂ ಕೊಲೆಗಡುಕರ, ಅತ್ಯಾಚಾರಿಗಳ ಹೆಸರುಗಳನ್ನು ಸಮೀರ್ ಉಲ್ಲೇಖಿಸಿರಲಿಲ್ಲ. ಆದರೆ ಡಿ.ಹರ್ಷೇಂದ್ರ ಕುಮಾರ್, ನಿಶ್ಚಲ್ ಡಿ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿರುವುದು ಅಚ್ಚರಿ ಮೂಡಿಸಿದೆ.
ನ್ಯಾಯಾಲಯವು ಯೂಟ್ಯೂಬರ್ ಗೆ ನೋಟೀಸ್ ಜಾರಿ ಮಾಡಿ, ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದು, ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಮಾಡಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಧರ್ಮಸ್ಥಳ ಪರ ರಾಜಶೇಖರ ಹಿಲ್ಯಾರ್ ಮಂಡಿಸಿದ ವಾದವನ್ನು ಆಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.