ಹೈದರಾಬಾದ್: ಮತಗಟ್ಟೆಗೆ ಬಂದ ಮುಸ್ಲಿಂ ಮಹಿಳೆಯರ ನಕಾಬ್ (ಮುಖವಸ್ತ್ರ) ತೆಗೆಸಿ, ಕಿರುಕುಳ ನೀಡಿದ ಹೈದರಾಬಾದ್ ಲೋಕಸಭಾ ಕ್ಷೇತ್ರದ ಮಾಧವಿ ಲತಾ ಅವರ ಮೇಲೆ FIR ದಾಖಲಾಗಿದೆ.
ಓಲ್ಡ್ ಸಿಟಿಯ ಮತಗಟ್ಟೆಯೊಂದರ ಬಳಿ ಬಂದ ಮಾಧವಿ ಲತಾ ಮತಗಟ್ಟೆಯ ಬಳಿ ಕುಳಿತಿದ್ದ ಇಬ್ಬರು ಮುಸ್ಲಿಂ ಮಹಿಳೆಯರ ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡುವ ನೆಪದಲ್ಲಿ ನಕಾಬ್ ಗಳನ್ನು ತೆಗೆಸಿ ಕಿರುಕುಳ ನೀಡುವ ವಿಡಿಯೋ ವೈರಲ್ ಆಗಿತ್ತು.
ಮಾಧವಿ ಲತಾ ಮೇಲೆ ಚುನಾವಣಾ ಆಯೋಗ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದರು.
ಮಾಲಕ್ ಪೇಟ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 171 ಸಿ, 186, 505(1)(ಸಿ) ಹಾಗು ಜನಪ್ರತಿನಿಧಿಗಳ ಕಾಯ್ದೆ 132ರ ಅನ್ವಯ ಮಾಧವಿ ಲತಾ ವಿರುದ್ಧ ದೂರು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾಧವಿ ಲತಾ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿರುವ All India Majlis-e-Ittehad-ul-Muslimeen (AIMIM) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ವಿರುದ್ಧ ಸ್ಪರ್ಧಿಸಿದ್ದಾರೆ. ಭಾರತೀಯ ಜನತಾ ಪಕ್ಷ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿದೆ.