ಕಲರ್ಸ್ ಕನ್ನಡ ವಾಹಿನಿ ನಡೆಸುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶೋ ನಿಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಲು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ದೂರು ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಆಗಮಿಸಿ ದೂರು ನೀಡಿದ ಅವರು, ಚಿತ್ರನಟ-ಶೋ ನಿರೂಪಕ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟಿವಿ ಬಿಜಿನೆಸ್ ಹೆಡ್, ವಯಾಕಾಮ್ 18 ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಸೃಷ್ಟಿಸಲಾಗಿತ್ತು. ಒಟ್ಟು ಹದಿನೇಳು ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲೂ ಇರಿಸಲಾಗಿದೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನರಕ ನಿವಾಸಿಗಳನ್ನು ಜೈಲಿನ ಖೈದಿಗಳ ಹಾಗೆ ಒಂದು ಬ್ಯಾರಾಕ್ ನಲ್ಲಿ ಬಂಧಿ ಮಾಡಿ ಇಡಲಾಗಿದೆ. ಅವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ದಿನಾಂಕ: 2-10-2024ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನರಕವಾಸಿ ಸ್ಪರ್ಧಿಗಳು ತಮಗೆ ಬಂದಾಗಿಂದಲೂ ಕೇವಲ ಗಂಜಿ ಊಟ ಕೊಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನರಕವಾಸಿಗಳಿಗೆ ಶೌಚಕ್ಕೆ ಅವಸರವಾದಾಗ ಸ್ವರ್ಗವಾಸಿ ಸ್ಪರ್ಧಿಗಳು ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುವುದು, ಇದಕ್ಕೆ ನರಕವಾಸಿ ಸ್ಪರ್ಧಿಗಳು ಪ್ರತಿಭಟಿಸುವುದನ್ನು ಕೂಡ ಪ್ರಸಾರ ಮಾಡಲಾಗಿದೆ.
ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್ ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಹಣ, ಬಹುಮಾನದ ಆಸೆಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಸ್ಪರ್ಧಿಗಳು ಅಲ್ಲಿ ನಡೆಯುವ ಶೋಷಣೆಯನ್ನು ಹೊರಗೆ ಹೇಳದಂತೆ ಬಾಯಿಮುಚ್ಚಿಸಲಾಗಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಠಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಅತ್ಯಂತ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಈ ಶೋಷಣೆಗೆ ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಒಪ್ಪಿಗೆ ನೀಡಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೇಶದ ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಪೈಕಿ ಸಂವಿಧಾನದ 21ನೇ ಪರಿಚ್ಛೇದವು ಎಲ್ಲರಿಗೂ ಜೀವಿಸುವ ಹಕ್ಕನ್ನು ವಿವರಿಸುತ್ತದೆ. ಜೀವಿಸುವ ಹಕ್ಕು ಎಂದರೆ ಘನತೆಯಿಂದ ಬದುಕುವ ಹಕ್ಕು ಎಂದು ಪರಿಚ್ಛೇದವು ಹೇಳುತ್ತದೆ. ಈ ಪರಿಚ್ಛೇದವೇ ಭಾರತದಲ್ಲಿ ಮಾನವ ಹಕ್ಕುಗಳ ಕುರಿತ ವ್ಯಾಖ್ಯೆಯನ್ನು ಸ್ಪಷ್ಟಪಡಿಸುತ್ತದೆ. ಸಂವಿಧಾನದ 21ನೇ ಸೆಕ್ಷನ್ ಅಷ್ಟೇ ಅಲ್ಲದೆ ಭಾರತ ಸರ್ಕಾರ 1993ರಲ್ಲಿ The Protection of Human Rights Act ಜಾರಿಗೆ ತಂದಿದೆ. ಈ ಕಾಯ್ದೆ ದೇಶದ ಜನತೆಯ ಮಾನವಹಕ್ಕುಗಳನ್ನು ರಕ್ಷಿಸುವ ಕಾರ್ಯ ಮಾಡುತ್ತದೆ. ಈ ಕಾಯ್ದೆಯಡಿಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕು ಆಯೋಗಗಳನ್ನು ರಚಿಸಲಾಗಿದೆ. ಇದಲ್ಲದೆ ಭಾರತ ಸರ್ಕಾರವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕುರಿತ ಸಾರ್ವತ್ರಿಕ ಘೋಷಣೆಗೂ ಸಹಿ ಹಾಕಿದೆ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (UDHR) ಹುಟ್ಟುತ್ತಲೇ ಎಲ್ಲ ಮಾನವರು ಸ್ವತಂತ್ರರು ಮತ್ತು ಸಮಾನರು, ಘನತೆಯಿಂದ ಬದುಕುವ ಹಕ್ಕು ಅವರಿಗಿದೆ ಎಂದು ಹೇಳುತ್ತದೆ. ಈ ಘೋಷಣೆಯ ಆರ್ಟಿಕಲ್ 4ರ ಪ್ರಕಾರ ಯಾರನ್ನೂ ಗುಲಾಮಗಿರಿ ಅಥವಾ ಜೀತದಲ್ಲಿ ಇರಿಸುವಂತಿಲ್ಲ. ಆರ್ಟಿಕಲ್ 5ರ ಪ್ರಕಾರ ಯಾರಿಗೂ ಚಿತ್ರಹಿಂಸೆ ಅಥವಾ ಕ್ರೂರ ಚಿಕಿತ್ಸೆಗೆ ಒಳಪಡಿಸುವಂತಿಲ್ಲ. ಬಿಗ್ ಬಾಸ್ ಶೋನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಈ ಎಲ್ಲ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಬಿಗ್ ಬಾಸ್ ಶೋ ಮಾನವಹಕ್ಕುಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾಕೆಂದರೆ ಕಂಟೆಸ್ಟೆಂಟ್ ಒಬ್ಬರು ಹೇಳುವ ಪ್ರಕಾರ ಅವರಿಗೆ ಸತತ ಮೂರು ದಿನಗಳಿಂದ ಕೇವಲ ಗಂಜಿ ಊಟವನ್ನು ಕೊಡಲಾಗಿದೆ. ಅವರು ತಮ್ಮ ಊಟವನ್ನು ಪಡೆದುಕೊಳ್ಳದಂತೆ ಅವರನ್ನು ಕೂಡಿಹಾಕಿ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ ಅವರು ಶೌಚಕ್ಕೆ ಹೋಗಲೂ ಬೇರೆಯವರನ್ನು ಬೇಡುವಂಥ ಸ್ಥಿತಿ ನಿರ್ಮಿಸಲಾಗಿದೆ. ಈ ರೀತಿಯ ಟಾರ್ಚರ್ ಭಾರತದ ಜೈಲುಗಳಲ್ಲೂ ಸಹ ಇರಲು ಸಾಧ್ಯವಿಲ್ಲ. ಭಾರತದ ಜೈಲುಗಳಲ್ಲಿ ಶಿಕ್ಷೆಗೆ ಒಳಪಟ್ಟ ಖೈದಿಗಳಿಗೆ, ವಿಚಾರಣಾಧೀನ ಖೈದಿಗಳಿಗೆ ಕೊಡಬೇಕಾದ ಆಹಾರದ ಕುರಿತು ಕಟ್ಟುನಿಟ್ಟಿನ ನಿಯಮಗಳಿವೆ. ಎಲ್ಲ ಖೈದಿಗಳಿಗೆ ಒಬ್ಬ ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶಗಳನ್ನು ಉಳ್ಳ ಆಹಾರವನ್ನು ಗ್ರಾಂಗಳ ಲೆಕ್ಕದಲ್ಲಿ ಕೊಡಲಾಗುತ್ತದೆ. ಜೈಲಿನ ಅಧಿಕಾರಿಗಳು ಇದನ್ನು ಉಲ್ಲಂಘಿಸುವಂತಿಲ್ಲ. ಮಾನವ ಹಕ್ಕುಗಳ ಆಯೋಗವು ಆಗಾಗ ಜೈಲುಗಳಿಗೆ ಭೇಟಿ ನೀಡಿ ಖೈದಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ ಎಂದು ಪರಿಶೀಲಿಸುತ್ತದೆ. ಹೀಗಿರುವಾಗ ಬಿಗ್ ಬಾಸ್ ಶೋನಲ್ಲಿ ನಡೆದಿರುವ ಸಾರಾಸಗಟಾಗಿ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ.
ಬಿಗ್ ಬಾಸ್ ನಲ್ಲಿ ಹೀಗೆ ಜನರನ್ನು ಕೂಡಿಡುವುದೇ ಒಂದು ಅಪರಾಧವಾಗುತ್ತವೆ. ಯಾಕೆಂದರೆ ಯಾವ ಮನುಷ್ಯನನ್ನೂ ಅವನ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಕೂಡಿ ಹಾಕುವುದು ಅಪರಾಧವಾಗುತ್ತದೆ. ಬಿಗ್ ಬಾಸ್ ನಿರ್ಮಾಪಕರು ಮುಂದೆ ಕಾನೂನು ತೊಡಕು ಬಾರದೇ ಇರಲಿ ಎಂದು ಹಲವಾರು ನಿಬಂಧನೆಗಳು ಇರುವ ಕಾಗದಪತ್ರಗಳಿಗೆ ಸ್ಪರ್ಧಿಗಳ ಬಳಿ ಸಹಿ ಹಾಕಿಸಿಕೊಂಡಿರುತ್ತಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೇಲ್ಕಂಡ ರೀತಿಯಲ್ಲಿ ನಡೆಯುತ್ತಿರುವ ಎಲ್ಲ ಅಮಾನವೀಯ ಚಿತ್ರ ಹಿಂಸೆ, ಕ್ರೌರ್ಯಗಳನ್ನು ದೃಶ್ಯ ಮಾಧ್ಯಮದ ಮೂಲಕ ಭಿತ್ತರಿಸುವುದೂ ಕೂಡ ಘೋರ ಅಪರಾಧವಾಗಿರುತ್ತದೆ. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಜನರು ನೋಡುತ್ತಿರುವುದರಿಂದ ಅವರ ಮಾನಸಿಕತೆಯ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಈ ಕಾರ್ಯಕ್ರಮದ ಪ್ರೇರಣೆಯಿಂದ ಇಂಥದ್ದೇ ಕ್ರೌರ್ಯ, ಹಿಂಸೆಗಳು ಸಮಾಜದಲ್ಲೂ ಘಟಿಸುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಬಹಳ ತುರ್ತು ಅಗತ್ಯವಾಗಿರುತ್ತದೆ ಎಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದಾಗ ಶೋಷಿತರೇ ದೂರು ನೀಡಬೇಕೆಂದಿಲ್ಲ. THE PROTECTION OF HUMAN RIGHTS ACT, 1993 ರ Article 12 (A) ಪ್ರಕಾರ ಯಾರು ಬೇಕಾದರೂ ದೂರು ನೀಡಬಹುದಾಗಿದೆ. ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿ, ಕೂಡಲೇ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅಕ್ರಮವಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ ಸ್ಪರ್ಧಿಗಳನ್ನು ಹೊರಗೆ ತರಬೇಕು ಎಂದು ಎಂ. ನಾಗಮಣಿ ಮಾನವ ಹಕ್ಕುಗಳ ಆಯೋಗವನ್ನು ಕೋರಿದ್ದಾರೆ.
ಕಳೆದ ಐದಾರು ದಿನಗಳಿಂದ ಶೂಟ್ ಮಾಡಲಾದ ಎಲ್ಲ ಫುಟೇಜ್ ಗಳನ್ನೂ, ಹಾರ್ಡ್ ಡಿಸ್ಕ್ ಗಳನ್ನೂ ವಶಪಡಿಸಿಕೊಂಡು ಸಾಕ್ಷ್ಯನಾಶವಾಗದಂತೆ ಕಾಪಾಡಬೇಕು. ಅದೇ ರೀತಿ ಇದರಲ್ಲಿ ಪಾಲ್ಗೊಂಡಿರುವ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖಾ ಏಜೆನ್ಸಿಗೆ ತನಿಖೆ ನಡೆಸಲು ಆದೇಶಿಸಬೇಕೆಂದು ಅವರು ಕೋರಿದ್ದಾರೆ.