ಆಗ್ರಾ: ಕಳೆದ ಡಿಸೆಂಬರ್ ನಲ್ಲಿ ಪತ್ನಿಯ ಕಿರುಕುಳ ದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ಹೇಳೀಕೆ ನೀಡಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಪ್ರಕರಣ ಮರೆಯುವ ಮುನ್ನವೇ ಅಂತಹುದ್ದೇ ಪ್ರಕರಣ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಟೆಕ್ಕಿ ಮಾನವ್ ಶರ್ಮಾ ಮೃತ ದುರ್ದೈವಿ. ಮಾನವ್ ಮುಂಬೈನಲ್ಲಿ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಜ.30ರಂದು ನಿಕಿತಾ ಎನ್ನುವ ಯುವತಿಯೊಂದಿಗೆ ಮಾನವ್ ವಿವಾಹವಾಗಿತ್ತು ಎಂದು ವರದಿ ತಿಳಿಸಿದೆ.
ಮಾನವ್ ಅವರ ತಂದೆ ನರೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಫೆ.23 ರಂದು ಮಾನವ್ ಮತ್ತು ನಿಕಿತಾ ಆಗ್ರಾಗೆ ಬಂದಿದ್ದರು. ನಂತರ ಮಾನವ್, ನಿಕಿತಾ ಆಕೆಯ ಪೋಷಕರ ಮನೆಗೆ ಹೋಗಿದ್ದರು, ಅಲ್ಲಿ ಮಾನವ್ ನನ್ನು ಅವಮಾನಿಸಿದ್ದಾರೆ. ಮನೆಗೆ ಹಿಂದಿರುಗಿದ ಬಳಿಕ ಫೆ. 24ರಂದು ಬೆಳಗಿನ ಜಾವ ಮಾನವ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಆತ್ಮಹತ್ಯೆಗೂ ಮುನ್ನ ಮೊಬೈಲ್‌ನಲ್ಲಿ ವಿಡಿಯೊ ಮಾಡಿರುವ ಮಾನವ್, ಈ ನಿರ್ಧಾರ ತಗೆದುಕೊಳ್ಳಲು ನನ್ನ ಹೆಂಡತಿಯೇ ಕಾರಣ ಎಂದು ಹೇಳಿದ್ದಾನೆ. ಮಾನವ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ನಿಕಿತಾ ವಿಡಿಯೊ ಹಂಚಿಕೊಂಡು, ಮಾನವ್ ಕುಡಿದ ಅಮಲಿನಲ್ಲಿದ್ದಾಗ ನನ್ನನ್ನು ನಿಂದಿಸುತ್ತಿದ್ದ, ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಪ್ರತಿ ಹೇಳಿಕೆ ನೀಡಿದ್ದಾಳೆ.
ಮಾನವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿಕಿತಾ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರ ಸಂಬಂಧದಲ್ಲಿ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಸಿಪಿ ವಿನಾಯಕ್ ಭೋಸ್ಥೆ ಮಾಹಿತಿ ನೀಡಿದ್ದಾರೆ.