ತುಮಕೂರು: ಪುಲ್ವಾಮಾ ದಾಳಿಯಾಗಿ ಐದು ವರ್ಷ ಕಳೆದರೂ ದಾಳಿಕೋರರನ್ನು ಕೇಂದ್ರ ಬಿಜೆಪಿ ಸರಕಾರ ಹಿಡಿದು ಶಿಕ್ಷಿಸಿಲ್ಲ. ಭಾರತದ ಬಲಿಷ್ಠ ಸೆಕ್ಯುರಿಟಿ ಇರುವ ಜಮ್ಮು ಕಾಶ್ಮೀರ ಅತ್ಯುನ್ನತ ಮಿಲಿಟರಿ ಓಡಾಡುವ ಸ್ಥಳದಲ್ಲೇ ದಾಳಿ ನಡೆದರೂ ಇದುವರೆಗೆ ಪುಲ್ವಾಮಾ ದಾಳಿ ಕುರಿತು ತನಿಖೆಯಾಗಿಲ್ಲ. ಹಾಗಾದರೆ ಈ ದಾಳಿಯ ಹಿಂದಿನ ಉದ್ದೇಶ ಏನಿರಬಹುದು ಎಂದು ಆಡಳಿತಾರೂಢ ಬಿಜೆಪಿ, ಪ್ರಧಾನಿ ಮೋದಿ ಉತ್ತರಿಸಲಿ ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ ಪ್ರಶ್ನೆ ಮಾಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹಂತಕರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲಾಗಿದೆ. ಆದರೆ ಪುಲ್ವಾಮಾ ದಾಳಿಕೋರರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಚುನಾವಣೆಗಾಗಿ ಅಪೂರ್ಣ ಶ್ರೀರಾಮಮಂದಿರ ಉದ್ಘಾಟನೆ ಮಾಡುತ್ತಾರೆ. ಒಂದೊಂದು ಚುನಾವಣೆಗೆ ಒಂದೊಂದು ಉದ್ದೇಶ ಇಟ್ಟುಕೊಂಡಿರುತ್ತಾರೆ. ಬಿಜೆಪಿ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ 10 ವರ್ಷ ಅವಧಿಯಲ್ಲಿ 1 ಡ್ಯಾಮ್, ಆಸ್ಪತ್ರೆ ಕಟ್ಟಿದ್ದಾರಾ? ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನ ಸತ್ತರೂ ಕೇರ್ ಮಾಡಿಲ್ಲ. ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.