ಮೈಸೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಹಳ್ಳಿಗಳ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕ್ಲುಲ್ಲಕ ಹೇಳಿಕೆಯ ಬೆನ್ನಲ್ಲೇ ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಗ್ಯಾರೆಂಟಿ ಯೋಜನೆಗಳ ಕೋಟ್ಯಂತರ ಫಲಾನುಭವಿಗಳನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿಗಳು ಭಯೋತ್ಪಾದಕರ ಗ್ಯಾರೆಂಟಿಗಳು. ಇವುಗಳು ಭಯೋತ್ಪಾದಕರನ್ನು ಉತ್ಪಾದನೆ ಮಾಡುತ್ತಿವೆ ಎಂದು ಜಿ.ಟಿ.ದೇವೇಗೌಡ ನಾಲಿಗೆ ಹರಿಬಿಟ್ಟು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಿರುಗಾಳಿಗೆ ಗ್ಯಾರೆಂಟಿ ಯೋಜನೆಗಳು ಗಾಳಿಗೆ ತೂರಿಹೋಗಲಿವೆ ಎಂದು ಹೇಳಿರುವ ಅವರು, ಹತ್ತು ತಿಂಗಳ ಆಡಳೀತದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳನ್ನು ಜಾರಿಗೆ ತಂದಿರುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಅವರು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ರಿಂದ 70 ಸ್ಥಾನಗಳಿಗೆ ತೃಪ್ತಪಟ್ಟುಕೊಳ್ಳಬೇಕಿದೆ. ಕಾಂಗ್ರೆಸ್ಗೆ ವಿರೋಧ ಪಕ್ಷದ ಮಾನ್ಯತೆಯೂ ದೊರೆಯುವುದಿಲ್ಲ ಎಂದು ಹೇಳಿದರು.