ಜಿಎಸ್‌ ಟಿ ವ್ಯವಸ್ಥೆ ರಾಜ್ಯಗಳ ಹಿತ ಕಾಪಾಡುವಂತಿರಬೇಕು: ಕೃಷ್ಣಭೈರೇಗೌಡ ಅಭಿಮತ

Most read

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸರಳೀಕರಣ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆಯಾದರೂ ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸಬೇಕು ಎಂದು ರಾಜ್ಯ ಸರ್ಕಾರ ಬಯಸುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ದೇಶದ ಹಲವು ರಾಜ್ಯಗಳು ಹಮ್ಮಿಕೊಂಡಿದ್ದ ಜಿಎಸ್‌ಟಿ  ಸಭೆಯಲ್ಲಿ ಭಾಗವಹಿಸಿ ಮರಳಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಎಸ್‌ ಟಿ ಸರಳೀಕರಣದ ಲಾಭ ಸಂಪೂರ್ಣವಾಗಿ ಜನರಿಗೆ ಸಿಗಬೇಕೇ ಹೊರತು ಕಂಪನಿಗಳಿಗೆ ಅಲ್ಲ. ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ ರೂ.70 ಸಾವಿರ ಕೋಟಿ ಕಡಿಮೆಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ಜಿಎಸ್‌ ಟಿ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿಯಾಗಿ ಮತ್ತೆ ರೂ. 15 ಸಾವಿರ ಕೋಟಿ ಖೋತಾ ಆಗಲಿದೆ. ಇದರಿಂದ ರಾಜ್ಯಕ್ಕೆ ವಾರ್ಷಿಕ 85 ಸಾವಿರ ಕೋಟಿ ರೂ  ನಷ್ಟ ಉಂಟಾಗಲಿದೆ ಎಂದು ವಿವರಿಸಿದರು.

ಉದ್ದೇಶಿತ ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ನಷ್ಟ ಆಗಬಹುದು ಎಂದು ಇದುವರೆಗೂ ಕೇಂದ್ರ ಸರ್ಕಾರ ಮಾಹಿತಿ ನೀಡಿಲ್ಲ. ಆದರೆ ಕೆಲವು ಸರ್ಕಾರಿ ಹಾಗೂ ಹಣಕಾಸು ಸಂಸ್ಥೆಗಳು ರೂ. 2.50 ಲಕ್ಷ ಕೋಟಿವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಿವೆ ಎಂದರು. ಹೊಸ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಸ್‌ಟಿ ಕೌನ್ಸಿಲ್ ಪರಿಹಾರ ನೀಡಬೇಕು ಎಂದೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಈಗಾಗಲೇ ಕರ್ನಾಟಕಕ್ಕೆ ಆದಾಯ ಖೋತಾ ಆಗುತ್ತಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತೆ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು 2016-17ರಿಂದ 2024-25ಕ್ಕೆ ಹೋಲಿಸಿದರೆ ವಾರ್ಷಿಕ ರೂ.21,977 ಕೋಟಿ ಕಡಿಮೆಯಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಕರ್ನಾಟಕಕ್ಕೆ ಬರುತ್ತಿರುವ ಅನುದಾನದಲ್ಲೂ ವಾರ್ಷಿಕ ರೂ.18,870 ಕೋಟಿ ಕಡಿತಗೊಂಡಿದೆ ಎಂದು ಹೇಳಿದರು.

ರಾಜ್ಯಗಳಿಗೆ ನಷ್ಟ ಹೆಚ್ಚಾದಷ್ಟೂ ಕೊನೆಗೆ ಆಯಾ ರಾಜ್ಯಗಳ ನಾಗರೀಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಆದಾಯದಲ್ಲಿ ಕೊರತೆ ಉಂಟಾಗಿ ಸರ್ಕಾರ ನಡೆಸಲು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗುವುದಾದರೆ ರಾಜ್ಯಗಳ ಸ್ವಾಯತ್ತತೆ ಎಂಬ ಪದವೇ ಅರ್ಥ ಕಳೆದುಕೊಳ್ಳಲಿದೆ‌ ಎಂದೂ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

More articles

Latest article