ಬೆಂಗಳೂರು: ತೆರಿಗೆದಾರ ಜನತೆ ಮತ್ತು ವ್ಯಾಪಾರಿ ವರ್ಗದ ಮೇಲಿನ ಆರ್ಥಿಕ ಭಾರ ಮತ್ತು ಅನುಷ್ಠಾನದ ಜಂಜಾಟವನ್ನು ತಗ್ಗಿಸಲು ಅತ್ಯಗತ್ಯವಾಗಿದ್ದ ತೆರಿಗೆ ಸುಧಾರಣೆಯನ್ನು ಜಾರಿಗೆ ತರುವ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿ.ಎಸ್.ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಇದು ನರೇಂದ್ರ ಮೋದಿ ಸರ್ಕಾರದ ಹೊಸ ಅವಿಷ್ಕಾರವೇನಲ್ಲ. ಅತ್ಯಂತ ಅವಸರದಲ್ಲಿ ಎನ್ ಡಿ ಎ ಸರ್ಕಾರ 2017ರಲ್ಲಿ ದೋಷಪೂರ್ಣ ಜಿ.ಎಸ್.ಟಿ ಯನ್ನು ಜಾರಿಗೊಳಿಸಿದಾಗಲೇ ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರು ಜಿ.ಎಸ್.ಟಿ ಗೆ ಮಾಡಲೇಬೇಕಾಗಿದ್ದ ಸುಧಾರಣೆಗಾಗಿ ಒತ್ತಾಯಿಸಿದ್ದರು.
“ಗಬ್ಬರ್ ಸಿಂಗ್ ತೆರಿಗೆ” ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶ ಮಾಡಲಿದೆ. ತೆರಿಗೆ ಪಾವತಿ ವ್ಯವಸ್ಥೆಯ ಸಂಕೀರ್ಣತೆ ಮತ್ತು ವೆಚ್ಚದ ಹೊರೆ ಅವರ ಬದುಕನ್ನು ಸರಣಿ ಕಷ್ಟಗಳ ಸರಮಾಲೆಗೆ ಸಿಲುಕಿಸಲಿದೆ ಎಂದು ಕಳೆದ ಎಂಟು ವರ್ಷಗಳಿಂದ ನಾವು ಹೇಳುತ್ತಲೇ ಬಂದಿದ್ದೆವು. ಆದರೆ ನರೇಂದ್ರ ಮೋದಿಯವರು ನಮ್ಮ ಮಾತಿಗೆ ಕಿವಿಗೊಡದೆ ನಿರ್ಲಕ್ಷಿಸುತ್ತಲೇ ಬಂದಿದ್ದರು.
ವಾಸ್ತವದಲ್ಲಿ ಜಿ.ಎಸ್.ಟಿ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು ರಾಜ್ಯ ಸರ್ಕಾರಗಳು ಅಸಹಾಯಕತೆಯಿಂದ ನರಳಾಡುವುದರ ಹೊರತಾಗಿ ಬೇರೇನನ್ನೂ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮೂರನೇ ಒಂದರಷ್ಟು ಮತದಾನದ ಹಕ್ಕು ಇದ್ದರೆ, ರಾಜ್ಯಗಳಿಗೆ ಮೂರನೇ ಎರಡರಷ್ಟಿದೆ. ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸುಧಾರಣೆಯನ್ನು ಮಾಡಬೇಕಾದರೆ ನಾಲ್ಕನೇ ಮೂರರಷ್ಟು ಬಹುಮತ ಅಗತ್ಯವಾಗಿದೆ. ಈ ಸ್ಥಿತಿಯಲ್ಲಿ ದೇಶದ ಎಲ್ಲ ರಾಜ್ಯಗಳು ಒಂದುಗೂಡಿ ತೆರಿಗೆ ಸುಧಾರಣೆಗೆ ಪ್ರಯತ್ನಿಸಿದರೂ ಅದನ್ನು ಕೇಂದ್ರ ಸರ್ಕಾರ ತಡೆಯಬಹುದಾಗಿದೆ. ಕಳೆದ ಎಂಟು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ಇದನ್ನೇ ಮಾಡುತ್ತಾ ಬಂದಿದೆ.
ಈಗ ಜಿ.ಎಸ್.ಟಿ ಕೌನ್ಸಿಲ್ ಕೈಗೊಂಡಿರುವ ಜಿ.ಎಸ್.ಟಿ ಸುಧಾರಣೆಯ ಪ್ರಯತ್ನಕ್ಕೆ ಕೇಂದ್ರ ಸರ್ಕಾರವು ಬೆಂಬಲ ಕೊಟ್ಟಿರುವುದಕ್ಕೆ ಜನತೆಯ ಮೇಲಿನ ಅವರ ಕಾಳಜಿಗಿಂತಲೂ, ರಾಜ್ಯ ಸರ್ಕಾರಗಳು ಸತತವಾಗಿ ಹೇರುತ್ತಾ ಬಂದಿರುವ ಒತ್ತಡ ಮುಖ್ಯ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಪ್ರಾರಂಭದಲ್ಲಿಯೇ ಮಾಡಿದ್ದರೆ ದೇಶದ ಜನತೆ ‘’ಗಬ್ಬರ್ ಸಿಂಗ್ ತೆರಿಗೆ” ವ್ಯವಸ್ಥೆಯಿಂದ ಪಡಬಾರದ ಕಷ್ಟಗಳನ್ನು ಪಡಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ.
ಈಗ ಜಿ.ಎಸ್.ಟಿ ಸುಧಾರಣೆಯ ಲಾಭ ಬಳಕೆದಾರ ಜನತೆಗೆ ತಲುಪುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ)ಯ ಜವಾಬ್ದಾರಿಯಾಗಿದೆ. ಈ ತೆರಿಗೆ ಸುಧಾರಣೆಯನ್ನು ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಲಾಭಾಂಶವನ್ನು ಹೆಚ್ಚುಮಾಡಲು ದುರುಪಯೋಗ ಮಾಡದಂತೆ ತಡೆಯುವ ಹೊಣೆ ಕೂಡಾ ಕೇಂದ್ರ ಸರ್ಕಾರದ್ದಾಗಿದೆ.
ಈಗಿನ ಲೆಕ್ಕಾಚಾರದ ಪ್ರಕಾರ ಈಗಿನ ಜಿ.ಎಸ್.ಟಿ ಸುಧಾರಣೆಯಿಂದಾಗಿ ಕರ್ನಾಟಕ ಸರ್ಕಾರ ವಾರ್ಷಿಕ ₹15,000 ದಿಂದ ₹20,000 ಕೋಟಿಯಷ್ಟು ವರಮಾನವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿ.ಎಸ್.ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಜನತೆಯ ಖರೀದಿ ಸಾಮರ್ಥ್ಯದ ಹೆಚ್ಚಳ ಮತ್ತು ತೆರಿಗೆ ಪಾವತಿದಾರರ ಜಾಲದ ವಿಸ್ತರಣೆಯ ಮೂಲಕ ಆರ್ಥಿಕ ಅಭಿವೃದ್ದಿಯನ್ನು ಸಾಧಿಸಿ ಸರ್ವರಿಗೂ ಸಮೃದ್ದಿಯ ಪಾಲು ಸಿಗುವಂತೆ ಮಾಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.