ಪ್ರಧಾನ ಸೇವಕ : ಕೇಳ್ರಪ್ಪೊ ಕೇಳಿ.. ಮಿತ್ರೊಂ.. ನಾಳೆ ನವರಾತ್ರಿ ದಿನದಿಂದ ಎಲ್ಲಾ ಸಸ್ತಾ, ಸಸ್ತಾ.. ಸಸ್ತಾ. ಏನೇ ಕೊಂಡರೂ ಕಡಿಮೆ ಬೆಲೆ. ಕೊಂಡು ಕೊಳ್ಳುವ ಎಲ್ಲಾ ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ ಮಾಡಿದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.
ಸಾಮಾನ್ಯ ಪ್ರಜೆ : ಮತ್ತೆ.. ಎಂಟು ವರ್ಷದಿಂದ ಅಧಿಕ ತೆರಿಗೆ ಜಾರಿಮಾಡಿದ್ದು ತಾವೇ ಅಲ್ವಾ ಪ್ರಧಾನ ಸೇವಕರೆ.. ನಿಮ್ಮ ಖಾಸಗಿ ಗೆಳೆಯರಾದ ಆದಾನಿ ಅಂಬಾನಿಗಳ ಖಜಾನೆ ತುಂಬಿದ ಮೇಲೆ, ನಿಮ್ಮ ಜನಪ್ರಿಯತೆ ಮುಕ್ಕಾಗಿ ಮೂರಾಬಟ್ಟೆ ಆದ ಮೇಲೆ ಈಗ ತೆರಿಗೆ ಕಡಿಮೆ ಮಾಡ್ತೀನಿ ಅಂತೀರಲ್ಲಾ.. ಇದೇನಾ ನಿಮ್ಮ ಜನ ಸೇವೆ? ಹೇಳ್ರಿ ಇದೇನಾ ನಿಮ್ಮ ದೇಶಪ್ರೇಮ?
ಇನ್ನೊಬ್ಬ : ಲೇ ತಮ್ಮಾ, ಯಾಕ್ಲಾ ಗಾಳಿ ಕೂಡಾ ಗುದ್ದಾಡಿ ಬಾಯಿ ಮೈ ನೋವು ಮಾಡ್ಕೊಳ್ತಿ.
ಸಾಮಾನ್ಯ ಪ್ರಜೆ : ನೀ ಸುಮ್ಕಿರಣ್ಣಾ. ಕಳೆದ ಎಂಟು ವರ್ಷದಲ್ಲಿ ಉಪ್ಪಿನಿಂದಾ ಹಿಡಿದು ಸೋಪು ಪೇಸ್ಟು ತುಪ್ಪ ಬೆಣ್ಣೆಗೆಲ್ಲಾ ತೆರಿಗೆ ಕಟ್ಟಿ ಕಟ್ಟಿ ಬದುಕೇ ಎಕ್ಕುಟ್ಟೋಗಿದೆ. ಹೋಟೆಲ್ನಲ್ಲಿ ತಿಂದರೂ ಟ್ಯಾಕ್ಸು, ಬೇಳೆ ಕಾಳು ಕೊಂಡರೂ ಟ್ಯಾಕ್ಸು. ಇವರ ತೆರಿಗೆ ಭಯೋತ್ಪಾದನೆಗೆ ಸಿಕ್ಕು ದೇಶದ ಜನ ಸೋತು ಸುಣ್ಣ ಆಗೋದ್ರು. ಈಗ ಒಂದೆರಡು ರಾಜ್ಯದಲ್ಲಿ ಚುನಾವಣೆ ಇರುವಾಗ ತೆರಿಗೆ ಇಳಿಸ್ತಾರಂತೆ.. ತೆರಿಗೆ.
ಇನ್ನೊಬ್ಬ : ಅದು ಹಾಗಲ್ವೋ..
ಸಾಮಾನ್ಯ ಪ್ರಜೆ : ಅದು ಹಾಗೂ ಅಲ್ಲಾ.. ಹೀಗೂ ಅಲ್ಲಾ. ಇವರೆಲ್ಲಾ ಜಿಗಣಿಗಳೇ ಬಡವರ ನೆತ್ತರಿಗೆ. ಆದಾನಿ ಅಂಬಾನಿಯಾದಿಯಾಗಿ ಕಾರ್ಪೋರೇಟ್ ಕಂಪನಿ ಉತ್ಪಾದನೆಗಳು ಮಾರಾಟ ಆಗ್ತಿಲ್ವಾ. ನಿರುದ್ಯೋಗ ಅತಿಯಾದಾಗ ಯಾರ್ರೀ ಅವರ ಸಾಮಾನು ಕೊಂಡ್ಕೋತಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸ್ತೇನೆ ಅಂತಾ ಬುರಡೇ ಬಿಟ್ರಿ. ಕೆಲಸ ಕೇಳಿದ್ರೆ ಪಕೋಡಾ ಮಾರಿ ಬದುಕ್ರಿ ಅಂತಾ ಬಿಟ್ಟಿ ಸಲಹೆ ಕೊಟ್ಟು ಇರೋ ಉದ್ಯೋಗಗಳಿಗೂ ತಿರುಪತಿ ನಾಮ ಹಾಕಿದ್ರಿ.
ಇನ್ನೊಬ್ಬ : ಲೇ ಸ್ವಲ್ಪ ಕೂಲಾಗಿರೋ. ನೀ ಎಷ್ಟೇ ಜೋರಾಗಿ ಹೇಳಿದ್ರೂ ಆ ಯಪ್ಪನಿಗೆ ಕೇಳಿಸೋದಿಲ್ಲಾ. ಕೇಳಿಸಿದ್ರೂ ಉತ್ತರ ಕೊಡೋದಿಲ್ಲ. ಕೊಡಬೇಕೆಂದರೂ ಆತನ ಬಳಿ ಉತ್ತರ ಇರೋದಿಲ್ಲ.
ಸಾಮಾನ್ಯ ಪ್ರಜೆ : ಪ್ರಜೆಗಳ ನೋವು ಸಂಕಟಕ್ಕೆ ಸ್ಪಂದನೆ ಮಾಡದ ಪ್ರಭು ಇದ್ದರೆಷ್ಟು ಇರದಿದ್ದರೆಷ್ಟಯ್ಯಾ. ನಮ್ಮ ಸಮಾಧಾನಕ್ಕಾದರೂ ನಮ್ಮ ಸಂಕಟ ಒದರ್ತೀವಿ. ಅದು ಬಿಟ್ಟು ಬೇರೆ ಮಾರ್ಗ ನಮಗೇನೈತಿ. ಯೋಯ್ ಆಳುವ ದೊರೆಯೇ ರೈತರ ಆದಾಯ ದ್ವಿಗುಣ ಮಾಡ್ತೀನಿ ಅಂದೆ ಮಾಡಲಿಲ್ಲ. ಓದಿದವರಿಗೆ ಉದ್ಯೋಗ ಕೊಡಲಿಲ್ಲ. ಕಪ್ಪು ಹಣ ವಾಪಸ್ ತಂದು ಹಂಚ್ತೇನೆ ಅಂದೆ ಹಂಚಲಿಲ್ಲ. ನಂಬರ್ ಒನ್ ಆರ್ಥಿಕತೆ ಮಾಡ್ತೀನಿ ಅಂದೆ, ಹಸಿದವರ ಲಿಸ್ಟಲ್ಲಿ ಕೊನೇ ನಂಬರಗೆ ಈ ದೇಶವನ್ನ ಕೊಂಡೊಯ್ದೆಯಲ್ಲಾ. ಇದು ನ್ಯಾಯಾನಾ..ಇದು ನೀತಿನಾ..? ಬರೀ ಸುಳ್ಳು ಹೇಳ್ಕೊಂಡು ಇನ್ನೂ ಎಷ್ಟು ವರ್ಷ ಖುರ್ಚಿಗೆ ಅಂಟಕೊಂಡಿರ್ತೀ.. ಮಾತೆತ್ತಿದ್ರೆ ದೇಶಪ್ರೇಮ, ದೇಶಭಕ್ತಿ ಮಾಡೋದೆಲ್ಲಾ ದೇಶವಾಸಿಗಳ ಸುಲಿಗೆ, ಕಾರ್ಪೋರೇಟ್ ದಲ್ಲಾಳಿಗಳಿಂದಾ ಲೂಟಿ.
ಇನ್ನೊಬ್ಬ : ಅಯ್ಯೋ ಸಾಕು ಸುಮ್ಕಿರಲೇ ತಮ್ಮಾ..ಬೇಡಾ ಬೇಡಾ.. ಬಂಡೆಗೆ ತಲೆ ಚಚ್ಕೋಬೇಡಾ..
ಸಾಮಾನ್ಯ ಪ್ರಜೆ : ಇದೆಲ್ಲಾ ನಾನು ಮಾತಾಡೋದಲ್ಲಾ, ನನ್ನೆದೆಯೊಳಗಿನ ಸಂಕಟ ನೋವು ಮಾತಾಡಿಸ್ತಾ ಇರೋದು. ಮಾಡೋವಷ್ಟು ಲೂಟಿ ಮಾಡಿ ಈಗ ತೆರಿಗೆ ಕಡಿಮೆ ಮಾಡ್ತಾರಂತೆ ತೆರಿಗೇನಾ. ನಾಚಿಕೆ ಮಾನ ಮರ್ಯಾದೆ ಬಿಟ್ಟು ತೆರಿಗೆ ಕಡಿಮೆ ಮಾಡಿದ್ದೇನೆ ಅಂತಾ ಪುಂಗಿ ಊದ್ತಾ ಇದ್ದಾನಲ್ಲಾ ಸ್ವಲ್ಪವಾದರೂ ಸಂಕೋಚ ಬೇಡ್ವಾ? ಮೊದಲು ಎಂಟು ವರ್ಷದಿಂದ ಸುಲಿಗೆ ಮಾಡಿದ ಜಿಎಸ್ಟಿ ತೆರಿಗೆ ಹಣ ಎಲ್ಲರಿಗೂ ವಾಪಸ್ ಕೊಡ್ಲಿ. ಇಲ್ಲಾಂದ್ರೆ ನಾನಂತೂ ಬಿಡೋದಿಲ್ಲಾ. ಕಂಡಲ್ಲೆಲ್ಲಾ ಹೀಗೆ ಕಲ್ಲು ಹೊಡೀತೇನೆ ಕಲ್ಲು. ( ಎನ್ನುತ್ತಾ ಒಂದು ಕಲ್ಲನ್ನು ಎತ್ತಿ ಬಲವಾಗಿ ಬಿಸಾಕುತ್ತಾನೆ. ಟಳ್ಳ ಅಂತಾ ಸದ್ದು)
ಇನ್ನೊಬ್ಬ : ಲೋ ಏನೋ ಮಾಡಿದೆ.. ಟಿವಿಗೆ ಯಾಕೋ ಕಲ್ಲು ಹೊಡೆದು ಚಿಂದಿ ಮಾಡಿದೆ.
ಸಾಮಾನ್ಯ ಪ್ರಜೆ : ಅಯ್ಯೋ.. ಇದೇನಾಯ್ತೋ. ಈ ಟಿವಿ ಕೊಂಡಿರೋ ಕಂತುಗಳಿನ್ನೂ ಮುಗಿದಿಲ್ಲಾ. ಟಿವಿಯಲ್ಲಿ ಪ್ರಧಾನ ಸೇವಕ ಮಾಡುವ ಭಾಷಣ ಕೇಳ್ತಾ ಸಿಟ್ಟಿಗೆದ್ದು ನನ್ನ ಟಿವಿ ನಾನೇ ಒಡೆದು ಹಾಕಿದೆನಲ್ಲಾ. ಅಯ್ಯೋ..
ಇನ್ನೊಬ್ಬ : ಅದಕ್ಕೆ ಹೇಳೋದು ಬಡವನ ಕೋಪ ದವಡೆಗೆ ಮೂಲ ಅಂತಾ. ಈಗ ಹೇಗೂ ತೆರಿಗೆ ಕಡಿಮೆ ಮಾಡಿದ್ದಾರಂತಲ್ಲಾ, ಹೋಗಿ ಹೊಸ ಟಿವಿ ಖರೀದಿ ಮಾಡು.
ಸಾಮಾನ್ಯ ಪ್ರಜೆ : ಈಗಿರೋ ಕಂತುಗಳೇ ಇನ್ನೂ ಮುಗಿದಿಲ್ಲಾ. ಇನ್ನು ಹೊಸ ಟಿವಿಗೆ ಹಣ ಎಲ್ಲಿಂದಯ್ಯಾ ತರಲಿ. ಇವರ ಟ್ಯಾಕ್ಸ್ ಮನೆ ಹಾಳಾಗಲಿ. ನನ್ನ ಬಂಗಾರದಂತಾ ಟಿವಿ ಒಡೆದೋಯ್ತಲ್ಲಾ. ದೇವರೇ..
ಶಶಿಕಾಂತ ಯಡಹಳ್ಳಿ
ರಂಗ ಕರ್ಮಿ