ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ–2024 ಅನ್ವಯ ರಚನೆಯಾಗುವ ಹೊಸ ನಗರ ಪಾಲಿಕೆಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ (ಜಿಬಿಎ) ಆರ್ಥಿಕ ಬಲ ಬರಲಿದೆ. ಸಂಪನ್ಮೂಲದ ಕೊರತೆಯಿರುವ ನಗರ ಪಾಲಿಕೆಗಳಿಗೆ ಹೆಚ್ಚು ಅನುದಾನ ಸಿಗಲಿದೆ ಎಂದು ಬಿಬಿಎಂಪಿ ಸುಧಾರಣಾ ಸಮಿತಿಯ (ಬ್ರ್ಯಾಂಡ್ ಬೆಂಗಳೂರು ಸಮಿತಿ) ಸದಸ್ಯ ವಿ. ರವಿಚಂದರ್ ಅಭಿಪ್ರಾಯಪಟ್ಟಿದ್ದಾರೆ.
ಬಿಬಿಎಂಪಿ ಸುಧಾರಣಾ ಸಮಿತಿಯಿಂದ ನೀಡಲಾಗಿರುವ ಬಹುತೇಕ ಸಲಹೆಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಸಂವಿಧಾನದ 74ನೇ ತಿದ್ದುಪಡಿಯ ಆಶಯವನ್ನು ಕಡೆಗಣಿಸಲಾಗಿದೆ ಎಂದು ಕೆಲವರು ತಿಳಿಸಿದ್ದಾರೆ. ಸಂವಿಧಾನದ ಆಶಯದಂತೆಯೇ ನಾವು ಮಸೂದೆಯ ಕರಡನ್ನು ಸಿದ್ಧಪಡಿಸಿದ್ದೇವೆ. ಈ ಬಗ್ಗೆ ರಾಜ್ಯಪಾಲರು ಅಥವಾ ನ್ಯಾಯಾಲಯಗಳು ಸ್ಪಷ್ಟತೆ ನೀಡಬಹುದು ಎಂದರು.
ನಗರ ಪಾಲಿಕೆಗಳ ಯಾವುದೇ ಆರ್ಥಿಕ ಸಂಪನ್ಮೂಲದ ಸಂಗ್ರಹದ ಮೇಲೆ ಜಿಬಿಎ ನಿಯಂತ್ರಣ ಇರುವುದಿಲ್ಲ. ನಗರ ಪಾಲಿಕೆಗಳ ವ್ಯಾಪ್ತಿಯ ಆಸ್ತಿ ತೆರಿಗೆ, ಜಾಹೀರಾತು ತೆರಿಗೆಗಳೆಲ್ಲವೂ ಆಯಾ ಪಾಲಿಕೆಗಳೇ ಸಂಗ್ರಹಿಸುತ್ತವೆ. ಜಿಬಿಎ ಅಡಿಯ ಪಾಲಿಕೆಗಳಲ್ಲಿ ಕೆಲವು ಪಾಲಿಕೆಗಳಲ್ಲಿ ಆರ್ಥಿಕ ಕೊರತೆ ಉಂಟಾದರೆ, ಅಂತಹ ಪಾಲಿಕೆಗಳಿಗೆ ಕೇಂದ್ರ ಹಾಗೂ ರಾಜ್ಯದ ಅನುದಾನದಲ್ಲಿ ಹೆಚ್ಚಿನ ಪಾಲನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ನಗರದ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಅಧಿಕಾರ ಜಿಬಿಎ ಬಳಿಯೇ ಇರಲಿದೆ ಮತ್ತು ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದೆ. ಮೂಲಸೌಕರ್ಯ ಮತ್ತು ಇತರೆ ಯೋಜನೆಗಳನ್ನು ಸಮನ್ವಗೊಳಿಸುವುದು ಮತ್ತು ನಿರ್ವಹಿಸುವುದೂ ಜಿಬಿಎ ಹೊಣೆಯಾಗಿರುತ್ತದೆ. ಜಿಬಿಎಗೆ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೆ ಅದಕ್ಕೆ ಮನ್ನಣೆ ಇರುವುದಿಲ್ಲ. ಹೀಗಾಗಿ, ಅನುದಾನಗಳನ್ನು ಜಿಬಿಎ ನಿರ್ವಹಣೆ ಮಾಡುತ್ತದೆ ಎಂದು ಹೇಳಿದರು.