ರಾಮನಗರ: ಕಾಂಗ್ರೆಸ್ ಮುಖಂಡ ಮಾಜಿ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಕೊಂಡಿದ್ದ ಶಿಕ್ಷಕಿ ಪವಿತ್ರ ಅವರನ್ನು ರಾಮನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲ್ಲೂಕಿನ ಇಲವಾಲದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಇವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ತಾನು ಬೆಂಗಳೂರು ಗ್ರಾಮಾಂತರ ಲೋಕಸಭೆಯ ಮಾಜಿ ಸದಸ್ಯ ಡಿಕೆ ಸುರೇಶ್ ಅವರ ಪತ್ನಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದರು. ತನ್ನದೇ ಚಿತ್ರಗಳನ್ನು ಸುರೇಶ್ ಅವರ ಚಿತ್ರಗಳೊಂದಿಗೆ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಮೂಲದ ಪವಿತ್ರ ಪತಿಯಿಂದ ಡೈವೋರ್ಸ್ ಪಡೆದಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನ ನಂತರ ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ವಾಸವಿದ್ದ ಮನೆಯ ನೆರೆಹೊರೆಯವರನ್ನು ಬೆದರಿಸಲು ಡಿ.ಕೆ. ಸುರೇಶ್ ಪತ್ನಿ ಎಂದು ಪವಿತ್ರ ಹೇಳಿಕೊಳ್ಳುತ್ತಿದ್ದರು. ಸುರೇಶ್ ಪತ್ನಿ ಎಂದು ಹೇಳುವ ವಿಡಿಯೋವನ್ನೂ ಹಂಚಿಕೊಂಡಿದ್ದರು. ಈಕೆಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಮೈಸೂರಿಗೆ ತೆರಳಿ ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದ ಪವಿತ್ರ, ಎರಡೂ ಜಾಲತಾಣಗಳಲ್ಲಿ ಏ. 8ರಂದು ವಿಡಿಯೊ ಹಂಚಿಕೊಂಡಿದ್ದರು.
ನಾನು ಮೊದಲು ಡಿ.ಕೆ. ಸುರೇಶ್ ಅವರ ಅಭಿಮಾನಿ. ಏಕೆಂದರೆ ಅವರು ಮೂರು ಬಾರಿ ಎಂ.ಪಿ.ಯಾಗಿ ಯಾರೂ ಮಾಡದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ವಿಡಿಯೊದಲ್ಲಿ ಹೇಳಿದ್ದರು.
ವಿಡಿಯೋ ವಿಷಯ ತಿಳಿಯುತ್ತಿದ್ದಂತೆ ಸುರೇಶ್ ಅವರ ವಕೀಲ ಪ್ರದೀಪ್ ಅವರು, ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದುರುದ್ದೇಶದಿಂದ ತಾನು ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಅಪಪ್ರಚಾರ ನಡೆಸುತ್ತಿದ್ದಾರೆ. ಆದ್ದರಿಂದ ಪವಿತ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.