ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರವಷ್ಟೇ ಸಕ್ಕರೆ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಕ್ಟೋಬರ್ ನಿಂದ ಪ್ರಾರಂಭವಾಗಿರುವ 2025-26ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ಕೇಂದ್ರ ಸರ್ಕಾರವು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ ಮತ್ತು ಕೈಗಾರಿಕೆಗಳು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಹೇಳಿದ್ದರು.
2019ರ ಫೆಬ್ರುವರಿಯಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯು ಕೆಜಿಗೆ ರೂ. 31 ರಷ್ಟಿದ್ದು, ಇದುವರೆಗೂ ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಸಕ್ಕರೆ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಪ್ರತಿ ಕೆಜಿ ಸಕ್ಕರೆ ಬೆಲೆಯನ್ನು 40 ರೂ.ಗೆ ಹೆಚ್ಚಿಸುವಂತೆ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟವೂ (ಐಎಸ್ಎಂಎ) ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.
ಸಚಿವ ಜೋಶಿ ಅವರು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು 40 ರೂ.ಗೆ ಹೆಚ್ಚಿಸುವ ಬಗ್ಗೆ ಪರಿಗಣಿಸುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರವೂ ಪ್ರತಿ ಕೆಜಿ ಸಕ್ಕರೆಗೆ 41 ರೂ. ಹೆಚ್ಚಳ ಮಾಡುವಂತೆ ಕೋರಲಾಗಿತ್ತು. ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಕೇಂದ್ರ ಸರರ್ಕಾರ ಬೆಲೆ ಹೆಚ್ಚಳಕ್ಕೆ ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

