156 FDC ಔಷಧಿಗಳನ್ನು ನಿಷೇಧಿಸಿದ​ ಕೇಂದ್ರ ಸರ್ಕಾರ: ಕಾರಣವೇನು ಗೊತ್ತೇ?

Most read

ಜ್ವರ, ಶೀತ, ಅಲರ್ಜಿಗಳಿಗೆ ಬಳಸುವಂತಹ ಬ್ಯಾಕ್ಟೀರಿಯಾ ವಿರೋಧಿ ಔಷಧಿಗಳಾದ 156 ಫಿಕ್ಸೆಡ್​​ ಡೋಸ್​ ಕಾಂಬಿನೇಷನ್​ ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಔಷಧಿಗಳು ಮನುಷ್ಯರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ಹೊಂದಿರು ಇದನ್ನು ಫಿಕ್ಸೆಡ್​​ ಡೋಸ್​​ ಕಾಂಬಿನೇಷನ್​ ಎಂದು ಕರೆಯಲಾಗುತ್ತದೆ. ಇದನ್ನು ಕಾಕ್​ಟೈಲ್​ ಡ್ರಗ್ಸ್​ ಎಂದೂ ಕೂಡ ಕರೆಯಲಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್​ 12ರಂದು ಹೊರಡಿಸಿರುವ ಗೆಜೆಟ್​​​ ಅಧಿಸೂಚನೆಯ ಪ್ರಕಾರ, ಕೆಲವು ಫಾರ್ಮಾ ಕಂಪನಿಗಳು ತಯಾರಿಸುವ ನೋವು ನಿವಾರಕ ಔಷಧಿಗಳಲ್ಲಿ ಒಂದಾದ ‘Aceclofenac 50mg + Paracetamol 125mg’ ಮಾತ್ರೆಯನ್ನು ಸರ್ಕಾರ ನಿಷೇಧಿಸಿದೆ.

ಇದಲ್ಲದೆ, ಮೆಫೆನಾಮಿಕ್ ಆಸಿಡ್ + ಪ್ಯಾರೆಸಿಟಮಾಲ್ ಇಂಜೆಕ್ಷನ್, ಸೆಟಿರಿಜಿನ್ ಹೆಚ್‌ಸಿಎಲ್ + ಪ್ಯಾರೆಸಿಟಮಾಲ್ + ಫೆನೈಲ್ಫ್ರಿನ್ ಎಚ್‌ಸಿಎಲ್, ಲೆವೊಸೆಟಿರಿಜಿನ್ + ಫೆನೈಲೆಫ್ರಿನ್ ಎಚ್‌ಸಿಎಲ್ + ಪ್ಯಾರೆಸಿಟಮಾಲ್, ಪ್ಯಾರೆಸಿಟಮಾಲ್ + ಕ್ಲೋರ್‌ಫೆನಿರಮೈನ್ ಮಲೇಟ್ + ಫೆನೈಲ್ ಪ್ರೊಪನೊಲಮೈನ್ ಮತ್ತು ಕ್ಯಾಮಿಲೋಫಿನ್ ಡೈಹೈಡ್ರೋಕ್ಲೋರೈಡ್ 25 ಮಿಗ್ರಾಂ ಮಾತ್ರೆಗಳನ್ನು ನಿಷೇಧಿಸಿದೆ.

ಎಫ್​ಡಿಸಿ ಔಷಧಿಗಳು ಮಾನವನಿಗೆ ಭಾರೀ ಅಪಾಯವನ್ನು ತಂದೊಡಡ್ಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕೇಂದ್ರವು ಸರಿಯಾಗಿ ಪರಿಗಣಿಸಿ ಅವುಗಳ ಮೇಲೆ ನಿಷೇಧ ಹೇರಿವೆ. ಇದರ ಜೊತೆಗೆ ಪ್ಯಾರೆಸಿಟಮಾಲ್​​, ಟ್ರಮಾಡಾಕ್​​​, ಟೌರಿನ್​ ಮತ್ತು ಕೆಫೀನ್​ ಜೊತೆಗೂಡಿ ತಯಾರಿಸುವ ಮಾತ್ರೆಗಳನ್ನು ಕೇಂದ್ರ ನಿಷೇಧಿಸಿದೆ.

ಮಾನವ ಜೀವ ಕಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಗುಣಗಳುಳ್ಳ ಔಷಧಗಳನ್ನು 1940ರ ಡ್ರಗ್‌ ಮತ್ತು ಕಾಸ್ಮೆಟಿಕ್ ಕಾಯಿದೆ ಸೆ.26ಎ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

2016 ರಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ರಚಿಸಲಾದ ತಜ್ಞರ ಸಮಿತಿಯ ಶಿಫಾರಸುಗಳ ನಂತರ ಸರ್ಕಾರವು 344 ಔಷಧ ತಯಾರಿಕೆ, ಮಾರಾಟ ಮತ್ತು ವಿತರಣೆಯ ಮೇಲೆ ನಿಷೇಧವನ್ನು ಘೋಷಿಸಿತು.

More articles

Latest article