ರಾಜ್ಯಪಾಲರ ನೋಟಿಸ್: ಕೆಂಡಾಮಂಡಲರಾದ ಡಿಕೆಶಿ, ಇದು ಪ್ರಜಾಪ್ರಭುತ್ವದ ಕಗ್ಗೊಲೆ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರು ನೀಡಿರುವ ನೋಟಿಸ್ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಸಿದ್ಧರಾಮಯ್ಯ ಅನುಪಸ್ಥಿತಿಯಲ್ಲಿ ಇಂದು ಸಚಿವ ಸಂಪುಟ ಸಭೆಯ ನೇತೃತ್ವ ವಹಿಸಿದ್ದ ಡಿ.ಕೆ.ಶಿವಕುಮಾರ್, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವು ನ್ಯಾಯಾಂಗ ತನಿಖೆಗೆ ಪ್ರಕರಣವನ್ನು ವಹಿಸಿದ್ದೇವೆ. ನ್ಯಾಯಾಂಗ ತನಿಖೆಗೂ ಮುನ್ನವೇ ಏಕಿಷ್ಟು ತರಾತುರಿ? ತನಿಖೆಗೆ ಮುನ್ನವೇ ಸಿಎಂಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ನಿಮ್ಮ ಮೇಲೆ ತನಿಖೆ ಮಾಡ್ತೀವಿ ಎಂದು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

ಸಿಎಂಗೆ ತರಾತುರಿಯಲ್ಲಿ ನೋಟಿಸ್ ನೀಡುವ ಉದ್ದೇಶ ಏನಿತ್ತು? ರಾಜ್ಯಪಾಲರನ್ನ ಕೇಂದ್ರ ಸರ್ಕಾರ ಬಳಸಿಕೊಂಡಿದೆ. ಮುಡಾದವರೇ 50:50 ನಿಯಮದಡಿ ಸೈಟ್ ಹಂಚಿದ್ದಾರೆ. ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಇದೆಲ್ಲಾ ನಡೆದಿದೆ. ಇದೆಲ್ಲಾ ನಡೆದಾಗ ಸಿದ್ದರಾಮಯ್ಯನವರು ಇಲ್ಲವೇ ಇಲ್ಲ. ಮುಡಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಎಲ್ಲ ಪಕ್ಷದವರು ಇದ್ದರು. ಎಲ್ಲ ಪಕ್ಷದವರ ನಿರ್ಧಾರದಂತೆ ನಿವೇಶನ ಹಂಚಿಕೆ ಆಗಿದೆ ಎಂದು ಅವರು ನುಡಿದರು.

ಯಾವ ದೊಡ್ಡ ಅಪರಾಧ ಆಗಿದೆ? ಏನು ಲೂಟಿಯಾಗಿದೆ ಎಂದು ಬಿಜೆಪಿಗರಿಗೆ ಪ್ರಶ್ನಿಸಿದ ಅವರು, ಈ ಸೈಟ್ ಹಂಚಿಕೆ ಬಗ್ಗೆ 2 ವರ್ಷದ ಹಿಂದೆಯೇ ಸುದ್ದಿ ಬಂದಿತ್ತು. ಆಗ ಯಾಕೆ ಬಿಜೆಪಿಯವರು ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ನೋಟಿಸ್ ಹಿಂಪಡೆಯುವಂತೆ ಕ್ಯಾಬಿನೆಟ್ ನಿರ್ಣಯ ಕೈಗೊಂಡಿದೆ. ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಅವರು ನುಡಿದರು.

136 ಸ್ಥಾನ ನೀಡಿ ಕರ್ನಾಟಕ ಜನ ನಮ್ಮನ್ನು ಆಶೀರ್ವಾದಿಸಿದ್ದಾರೆ. 136 ಶಾಸಕರ ಬೆಂಬಲದಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಸರಿಯಿಲ್ಲ. ಸಿಎಂಗೆ ನೀಡಿದ ನೋಟಿಸ್ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಇದು ರಾಜಕೀಯ ನಡೆ: ಕೃಷ್ಣಬೈರೇಗೌಡ

ರಾಜ್ಯಪಾಲರ ನಡೆ ಕಾನೂನಾತ್ಮಕವಾಗಿಲ್ಲ, ರಾಜಕೀಯ ನಡೆಯಾಗಿದೆ. ದೂರುದಾರರು ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕಿತ್ತು. ರಾಜ್ಯಪಾಲರ ಬಳಿ ಬಂದಿರೋದೇ ಕಾನೂನು ಬಾಹಿರ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಈ ಹಿಂದೆ ಸಚಿವೆ ಶಶಿಕಲಾ ಜೊಲ್ಲೆ ಹಗರಣದಲ್ಲಿ ಸಿಲುಕಿದ್ದರು. ಆಗಲೂ ರಾಜ್ಯಪಾಲರ ಬಳಿ ಹೋಗಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಲಾಗಿತ್ತು. ಆದೃ 2 ವರ್ಷಗಳಿಂದ ಮನವಿ ಹಾಗೇ ಇಡಲಾಗಿತ್ತು. ಈಗ ಅಬ್ರಹಾಂ ಎಂಬುವವರು ದೂರು ಕೊಟ್ಟ ಒಂದೇ ದಿನಕ್ಕೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

More articles

Latest article