ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ರಾಜ್ಯಪಾಲರು ನೀಡಿರುವ ನೋಟಿಸ್ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಲ್ಲದೇ ಸಂಪುಟ ಸಭೆ ನಡೆದು, ಕಾನೂನು ಹೋರಾಟಕ್ಕೆ ತೀರ್ಮಾನಿಸಲಾಯಿತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟೀಸ್ ನಲ್ಲಿ ಬಳಸಲಾದ ಪದಗಳು ಮತ್ತು ಒಕ್ಕಣಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ನೋಟಿಸ್ ವಾಪಾಸ್ ಪಡೆಯಲು ಆಗ್ರಹಿಸಲು ಸಂಪುಟ ತೀರ್ಮಾನಿಸಿತು. ಸಚಿವ ಸಂಪುಟದ ತೀರ್ಮಾನವನ್ನು ರಾಜ್ಯಪಾಲರಿಗೆ ರವಾನೆ ಮಾಡಲು ನಿರ್ಧರಿಸಲಾಯಿತು.
ಸಚಿವ ಸಂಪುಟ ಸಭೆಯ ನಂತರ ನೋಟಿಸ್ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ನೀಡಿದ ನೋಟಿಸ್ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಈ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ತಿರಸ್ಕರಿಸಲು ನಿರ್ಣಯ ಮಾಡಿದ್ದೇವೆ. ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಅಧಿಕಾರದ ದುರುಪಯೋಗ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಮುಡಾ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಕೇಂದ್ರ ಹುನ್ನಾರ ನಡೆಸುತ್ತಿದೆ. ಅದಕ್ಕಾಗಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.