ಬೆಂಗಳೂರು: ವರ್ಷದ ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸಿದ್ದಪಡಿಸಿದ ಭಾಷಣವನ್ನು ಓದದೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ವಿಧಾನಸೌಧದಿಂದ ನಿರ್ಗಮಿಸಿದ್ದರು. ನಂತರ ಮುಖ್ಯಮಂತರಿಗಳು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಂವಿಧಾನ ಉಲ್ಲಂಘಿಸಿದ ರಾಜ್ಯಪಾಲರು:
ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನದ ರೀತ್ಯ ಸನ್ಮಾನ್ಯ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ176 ಮತ್ತು 163 ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ. ಇಂದು ವರ್ಷದ ಮೊದಲ ಜಂಟಿ ಅಧಿವೇಶನ ಮತ್ತು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ವಿಬಿಜಿರಾಮ್ ಜಿ ( ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ ಎಂದರು.
ಕೆಲಸದ ಹಕ್ಕು ಖಾತ್ರಿಪಡಿಸುವ MGNREGA
ಮೊದಲನೆಯದಾಗಿ ಕಾಯ್ದೆಯಿಂದ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತಿತ್ತು ಎಂದರು.
ವಿಬಿ ಜಿ ರಾಮ್ ಜಿ : ವರ್ಷ ಪೂರ್ತಿ ಕೆಲಸದ ಭರವಸೆ ಇಲ್ಲ
ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಹಿಂದಿನ ಕಾಯ್ದೆಯಲ್ಲಿ ವರ್ಷದ 365 ದಿನಗಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೇ ಮತ್ತು ಪಂಚಾಯ್ತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ವಿವರಿಸಿದರು.
ಹೊಸ ಕಾಯ್ದೆಗೆ ಬಿಜೆಪಿ ಉದ್ದೇಶಪೂರ್ವಕ ಸಮರ್ಥನೆ:
ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಯಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಈ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು ಎಂದರು.
MGNREGA ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. MGNREGA ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು.
ರಾಜ್ಯಪಾಲರ ನಡೆ ಸಂವಿಧಾನದ ಉಲ್ಲಂಘನೆ:
ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದುವ ಮೂಲಕ ಸಂವಿಧಾನದ ವಿಧಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನದ ಕಲಂ 176 ಮತ್ತು 163 ರಂತೆ ಸಚಿವ ಸಂಪುಟ ಭಾಷಣವನ್ನು ಓದಲೇಬೇಕಾಗಿದ್ದು ವಾಸ್ತವ ಅಂಶ. ಇದು ಸಂವಿಧಾನ ಸ್ಥಾಪನೆಯಾದಾಗಿನಿಂದ ನಡೆದುಕೊಂಡಿರುವ ಪದ್ಧತಿ, ರಾಜ್ಯಪಾಲರ ಈ ನಡೆ, ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಸಂವಿಧಾನಬದ್ಧವಾದ ವಿಚಾರದ ಉಲ್ಲಂಘನೆಯಾಗಿದೆ ಎಂದರು.
ರಾಜ್ಯಪಾಲರ ನಡೆಯನ್ನು ಪಕ್ಷ ಮತ್ತು ಸರ್ಕಾರ ಮತ್ತು ಶಾಸಕರು, ಪ್ರತಿಭಟಿಸುತ್ತಾರೆ. ಇಡೀ ರಾಜ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ ಎಂದರು.
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಎಂಎಲ್ ಸಿಗಳಿಗೆ ವಿತರಿಸಲಾಗಿದೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮೊಕ್ಕದ್ದಮೆ ಹೂಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದರ ಬಗ್ಗೆ ಚರ್ಚಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

