ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ರಂಗಭೂಮಿ, ಸಾಹಿತ್ಯ ಕ್ಷೇತ್ರಗಳು ಯಾವಾಗಲೂ ಪ್ರಭುತ್ವದ ವಿರುದ್ಧದ ಪ್ರತಿಭಟನಾತ್ಮಕ ಮಾಧ್ಯಮಗಳು ಎನ್ನುವ ಅರಿವು ಸಾಂಸ್ಕೃತಿಕ ಲೋಕದ ಎಲ್ಲಾ ಸಾಹಿತಿ ಕಲಾವಿದರಿಗೆ ಇರಬೇಕಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಕರ್ನಾಟಕದ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಆಳುವ ಸರಕಾರಗಳ ಹಿಡಿತದಿಂದ ಮುಕ್ತಿ ಯಾವಾಗ? ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ದೊರಕುವುದು ಯಾವಾಗ? ಈ ಸಂಸ್ಥೆಗಳಿಗೆ ಅಧ್ಯಕ್ಷ ಸದಸ್ಯರ ಆಯ್ಕೆಯಲ್ಲಿ ಸರಕಾರಿ ಹಸ್ತಕ್ಷೇಪ ಹಾಗೂ ಪಕ್ಷಗಳು ನಿಯಂತ್ರಣ ಹೊಂದಿರುವುದಾದರೂ ಯಾಕೆ? ಯಾರು ಹಿತವರು ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಎಂದು ನಿರ್ಧರಿಸುವುದು ಆಯಾ ಕ್ಷೇತ್ರಗಳ ಪ್ರಮುಖರ ಆಯ್ಕೆ ಸಮಿತಿಯ ಕೆಲಸ ಅಲ್ಲವೇ? ಆಯ್ಕೆಗೊಂಡವರು ಆಳುವವರ ಮರ್ಜಿಯಲ್ಲೇ ಕೆಲಸ ಮಾಡಬೇಕೆ? ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಆಳುವ ರಾಜಕೀಯ ಪಕ್ಷದ ಒಲವು ನಿಲುವಿಗೆ ಸದಾ ನಿಷ್ಟರಾಗಿರಬೇಕೆ?
ಹೀಗೆ ಅನೇಕ ಪ್ರಶ್ನೆಗಳು ಮತ್ತೆ ಉದ್ಬವಿಸಲು ಕಾರಣ ಕಾಂಗ್ರೆಸ್ ಸರಕಾರದ ಈ ಕೆಳಗಿನ ಅನಪೇಕ್ಷಿತ ನಡೆಗಳು.
ಆಯ್ಕೆಯಾದವರ ಬದಲಾವಣೆ
ಸರಕಾರವು ಜೂನ್ 12 ರಂದು ಅಕಾಡೆಮಿ, ಪ್ರಾಧಿಕಾರಗಳಿಗೆ ಪರಿಷ್ಕೃತ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿತು. ಮಾರ್ಚ್ 15 ರಂದು ಕರ್ನಾಟಕ ಸರಕಾರವು 14 ಅಕಾಡೆಮಿ, 4 ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕಾತಿ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಈ ಆದೇಶಕ್ಕೂ ಮೊದಲು ಆಯ್ಕೆ ಸಮಿತಿಯನ್ನು ರಚಿಸಿತ್ತು. ಯಥಾಪ್ರಕಾರ ಆಯ್ಕೆ ಸಮಿತಿಯ ಶಿಫಾರಸ್ಸುಗಳನ್ನೂ ಪಕ್ಕಕ್ಕಿರಿಸಿ ಅನೇಕ ಹೆಸರುಗಳನ್ನು ಬದಲಾಯಿಸಿ ಸರಕಾರ ತನ್ನಿಚ್ಛೆಯಂತೆ ಅಂತಿಮ ಪಟ್ಟಿಯನ್ನು ತರಾತುರಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಒಂದು ದಿನ ಮೊದಲು ಬಿಡುಗಡೆ ಮಾಡಿದ್ದರಿಂದಾಗಿ ಯಾರೂ ಪದಗ್ರಹಣ ಮಾಡಲು ಸಾಧ್ಯವಾಗಿರಲಿಲ್ಲ.
ಆದರೆ ಈ ಪಟ್ಟಿಯಲ್ಲಿ ಕೆಲವು ಸಂಘ ಪರಿವಾರದ ಕಾರ್ಯಕರ್ತರ ಹೆಸರುಗಳೂ ಸೇರ್ಪಡೆಯಾಗಿದ್ದು ವಿವಾದಕ್ಕೆ ಕಾರಣವಾಗಿ ಆಕ್ಷೇಪಗಳು ವ್ಯಕ್ತವಾದವು. ಈಗ ಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿದು ಆಯ್ಕೆಗೊಂಡವರೆಲ್ಲಾ ಪದಗ್ರಹಣ ಮಾಡುವ ಮುನ್ನ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ ಸರಕಾರವು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮೂರು ಜನರ ಹೆಸರನ್ನು ಕೈಬಿಟ್ಟು ಹೊಸದಾಗಿ ಮೂವರನ್ನು ಸೇರಿಸಿ ಆದೇಶ ಹೊರಡಿಸಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ನಿಯೋಜನೆಗೊಂಡಿದ್ದ ಕೃಪಾ ಪಡಕಿಯವರನ್ನು ಬದಲಾಯಿಸಿ ಶುಭಾ ಧನಂಜಯ್ ರವರನ್ನು ನಾಮನಿರ್ದೇಶನ ಮಾಡಲಾಯ್ತು. ಅದೇ ರೀತಿ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಮಾಲೂರು ವಿಜಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯೆ ವಿಜಯಲಕ್ಷ್ಮಿ ಕೌಟಗಿರವರಿಗೆ ಸಕಾರಣವನ್ನು ತಿಳಿಸದೇ ಪದಚ್ಯುತ ಗೊಳಿಸಲಾಯ್ತು. ಪದಚ್ಯುತಿಗೆ ಕಾರಣ ಈ ಮೂವರೂ ಸಂಘ ಪರಿವಾರದ ಮೂಲದವರು ಎನ್ನುವುದು. ಯಾರು ಯಾವ ಮೂಲದವರು ಎನ್ನುವುದನ್ನು ಆಯ್ಕೆಗಿಂತಲೂ ಮುಂಚೆಯೇ ಯೋಚಿಸಬೇಕಿತ್ತು. ಆಯ್ಕೆ ಸಮಿತಿ ಅಂತಾ ಮಾಡಿದ್ದೇ ಇದಕ್ಕಲ್ಲವೇ? ಒಂದು ತಪ್ಪನ್ನು ಸರಿಪಡಿಸಲು ಇನ್ನೊಂದು ತಪ್ಪನ್ನು ಸರಕಾರ ಮಾಡಬಾರದಿತ್ತು. ಇಷ್ಟಕ್ಕೂ ಕೃಪಾ ಪಡಕಿ ಹಾಗೂ ಮಾಲೂರು ವಿಜಿ ಇಬ್ಬರೂ ಕಲಾವಿದರೇ ಆಗಿದ್ದರು. ಅವರವರ ಕ್ಷೇತ್ರಕ್ಕೆ ಕೊಡುಗೆಯನ್ನೂ ಕೊಟ್ಟವರು. ಮಾಲೂರು ವಿಜಿಯವರನ್ನು ನಾಟಕ ಅಕಾಡೆಮಿಯ ಅವಧಿ ಕೊನೆಗೊಳ್ಳುವ ಕೊನೆಯ ಮೂರ್ನಾಲ್ಕು ತಿಂಗಳ ಮುಂಚೆಯಷ್ಟೇ ಬಿಜೆಪಿ ಸರಕಾರ ನಾಟಕ ಅಕಾಡೆಮಿಯ ಸದಸ್ಯರನ್ನಾಗಿಸಿತ್ತು. ಇದೆಲ್ಲವನ್ನೂ ಕಾಂಗ್ರೆಸ್ ಸರಕಾರ ಮೊದಲೇ ಪರಿಶೀಲಿಸದೇ ನೇಮಕಾತಿ ಮಾಡಿ ಈಗ ಕೈಬಿಟ್ಟಿದ್ದು ಕೆಟ್ಟದಾದ ಪರಂಪರೆಯನ್ನು ಹುಟ್ಟು ಹಾಕುವಂತಹುದು.
ಇಂತಹುದೇ ಒಂದು ನಕಾರಾತ್ಮಕ ಪರಂಪರೆಯನ್ನು ಕಾಂಗ್ರೆಸ್ ಸರಕಾರದಲ್ಲಿ ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದ ಉಮಾಶ್ರೀಯವರು ಹುಟ್ಟು ಹಾಕಿದ್ದರು. ಬಿಜೆಪಿ ಸರಕಾರದಲ್ಲಿ ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆಯಾದವರ ಕಾಲಾವಧಿ ಇನ್ನೂ ಎರಡು ವರ್ಷಗಳಷ್ಟು ಇದ್ದಾಗಲೂ ರದ್ದು ಮಾಡಿದ್ದರು. ಮುಂದೆ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಆಡಳಿತದಲ್ಲಿ ಆಯ್ಕೆಯಾಗಿದ್ದವರನ್ನು ಅವಧಿಗೆ ಮುನ್ನವೇ ಮನೆಗೆ ಕಳುಹಿಸಿ ಅವಮಾನಿಸಿ ಸೇಡು ತೀರಿಸಿಕೊಂಡಿತು. ಇನ್ನು ಮೇಲೆ ಆಳುವ ಪಕ್ಷಗಳು ಬದಲಾದಂತೆಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳೂ ಬದಲಾಗುವ ಅನಧಿಕೃತ ಅನಿಷ್ಟ ಸಂಪ್ರದಾಯವೊಂದು ರೂಢಿಗತವಾಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಇದೇ ಕಾಂಗ್ರೆಸ್ ಸರಕಾರವು ಭಿನ್ನ ಸಿದ್ಧಾಂತದ ಕಲಾವಿದರು ಸರಕಾರಿ ಸಂಸ್ಥೆಯಲ್ಲಿ ಇರಲೇಬಾರದು ಎನ್ನುವ ಮತ್ತೊಂದು ಸಂಕಥನಕ್ಕೆ ನಾಂದಿಹಾಡಿತು.
ಪ್ರೊ.ಬರಗೂರರ ನೇತೃತ್ವದ ಸಾಂಸ್ಕೃತಿಕ ನೀತಿ ಅಧಿಕೃತವಾಗಿ ಸಚಿವ ಸಂಪುಟದಲ್ಲಿ ಮಾನ್ಯವಾಗಿ ಆರೇಳು ವರ್ಷಗಳಾಗಿದ್ದರೂ ಯಾವುದೇ ಪಕ್ಷದ ಸರಕಾರಗಳು ಅನುಷ್ಠಾನಕ್ಕೆ ತರಲು ಆಸಕ್ತಿ ಹೊಂದಿಲ್ಲ. ಯಾಕೆಂದರೆ ಆ ಸಾಂಸ್ಕೃತಿಕ ನೀತಿಯಲ್ಲಿ ಈ ಎಲ್ಲಾ ಸರಕಾರಿ ಸಂಸ್ಥೆಗಳಿಗೆ ಗರಿಷ್ಠ ಸ್ವಾಯತ್ತತೆ ನೀಡಲಾಗಿದೆ. ಒಮ್ಮೆ ಆಯ್ಕೆಯಾದವರನ್ನು ಮೂರು ವರ್ಷಗಳ ಕಾಲ ವಿನಾಕಾರಣ ಯಾವುದೇ ಸರಕಾರ ಬಂದರೂ ಬದಲಾಯಿಸಬಾರದು ಎಂಬ ನಿಬಂಧನೆ ಇದೆ. ಆ ನಿಬಂಧನೆ ಪಾಲಿಸಬೇಕಾಗುತ್ತಲ್ಲಾ, ಅಕಾಡೆಮಿ ಪ್ರಾಧಿಕಾರಗಳ ಮೇಲೆ ತಮ್ಮ ನಿಯಂತ್ರಣ ತಪ್ಪುತ್ತಲ್ಲಾ ಎನ್ನುವ ಕಾರಣಕ್ಕೆ ಸಾಂಸ್ಕೃತಿಕ ನೀತಿ ಇನ್ನೂ ಕೋಲ್ಡ್ ಸ್ಟೋರೇಜಿನಲ್ಲಿದೆ.
ಪಕ್ಷದ ಹಿತಾಸಕ್ತಿಗಾಗಿ ಸಾಂಸ್ಕೃತಿಕ ಸಂಸ್ಥೆಗಳ ದುರ್ಬಳಕೆ
ಹಾಲಿ ಕಾಂಗ್ರೆಸ್ ಸರಕಾರ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ಅನಿಷ್ಠ ಪದ್ಧತಿಯನ್ನು ಹುಟ್ಟು ಹಾಕಿದೆ. ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳನ್ನೆಲ್ಲಾ ಜೂನ್ 14 ರಂದು ಕಾಂಗ್ರೆಸ್ ಕಚೇರಿಗೆ ಕರೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರು ” ನಿಮ್ಮ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿವೆ” ಎಂದು ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದೂ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ಇಲ್ಲಿಯವರೆಗೂ ಯಾವುದೇ ಪಕ್ಷದ ಸರಕಾರವಿದ್ದರೂ ಪಕ್ಷದ ಕಚೇರಿಯಲ್ಲಿ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಸಭೆ ಕರೆದಿರಲಿಲ್ಲ. ಯಾಕೆಂದರೆ ಈ ಸಂಸ್ಥೆಗಳು ಸರಕಾರದ ಆಧೀನದಲ್ಲಿವೆಯೇ ಹೊರತು ಯಾವುದೇ ಪಕ್ಷದ ಆಧೀನದಲ್ಲಿಲ್ಲ. ಹೆಚ್ಚಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳು ಕನ್ನಡ ಭವನದಲ್ಲಿ ಸಭೆ ಕರೆಯುವ ಸಂಪ್ರದಾಯವಿತ್ತು. ಸಿ.ಟಿ.ರವಿಯವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾಗ ವಿಧಾನಸೌಧದಲ್ಲಿ ಸಭೆ ಕರೆದಿದ್ದರು. ಆದರೆ ಈ ಎಲ್ಲಾ ಶಿಷ್ಟಾಚಾರಗಳನ್ನೂ ಬದಿಗಿಟ್ಟು ಈ ಸಲ ಸಂಸ್ಕೃತಿ ಸಚಿವರೂ ಅಲ್ಲದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರರು ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಸಭೆ ಕರೆದಿದ್ದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ರಾಜಮಾರ್ಗವಾಗಿದೆ. ಸಾಂಸ್ಕೃತಿಕ ಸಂಸ್ಥೆಗಳನ್ನು ಕಾಂಗ್ರೆಸ್ಸೀಕರಣ ಮಾಡುವ ಹುನ್ನಾರವಾಗಿದೆ. ಸಾಹಿತಿ ಕಲಾವಿದರುಗಳನ್ನು ಪಕ್ಷದ ಕಾರ್ಯಕರ್ತರನ್ನಾಗಿಸುವ ಕಾರ್ಯತಂತ್ರವಾಗಿದೆ.
ಹೌದು.. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ಆ ಪಕ್ಷದ ಪರವಾಗಿರುವವರನ್ನು ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಆಯ್ಕೆ ಮಾಡಲಾಗುತ್ತಲೇ ಬಂದಿದೆ. ಇದಕ್ಕೆ ಗಂಜೀ ಕೇಂದ್ರವೆಂದು ಬಿಜೆಪಿಗರು ಹಂಗಿಸುತ್ತಿದ್ದರು. ಬಿಜೆಪಿ ಸರಕಾರ ಬಂದಾಗ ಅವರೂ ಸಾಂಸ್ಕೃತಿಕ ಸಂಸ್ಥೆಗಳನ್ನು ಗಂಜೀ ಕೇಂದ್ರವನ್ನಾಗಿಸಿದರು. ಮೊದಲಿನಿಂದಲೂ ಕಾಂಗ್ರೆಸ್ ಸರಕಾರ ನಕಾರಾತ್ಮಕವಾದ ಹೊಸ ಪರಂಪರೆಗಳನ್ನು ಹಾಕಿಕೊಡುತ್ತಲೇ ಬಂದಿದೆ. ಅದನ್ನೇ ಬಿಜೆಪಿ ಸರಕಾರ ಬಂದಾಗ ಮುಂದುವರೆಸುತ್ತದೆ. ಮುಂದೆ ಎಂದಾದರೂ ಮತ್ತೆ ಬಿಜೆಪಿ ಸರಕಾರ ಬಂದಾಗ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರ ಸಭೆಯನ್ನು ಕೇಶವಕೃಪಾದಲ್ಲಿ ಕರೆಯಲಾಗುತ್ತದೆ. ಆಗ ಕಾಂಗ್ರೆಸ್ ಹಾಗೂ ಅದರ ಸಮರ್ಥಕರ ಬಾಯಿಗೆ ಬೀಗ ಬಿದ್ದಿರುತ್ತದೆ.
ಕಲೆ ಸಾಹಿತ್ಯಕ್ಕೆ ಬದ್ಧರಾದ ಕಲಾವಿದ ಸಾಹಿತಿಗಳು ಪಕ್ಷವೊಂದರ ಸರಕಾರದಿಂದ ಆಯ್ಕೆಯಾಗಿದ್ದಾರೆ ಎಂದರೆ ಆ ಪಕ್ಷದ ಕಾರ್ಯಕರ್ತರಂತೆ ಕಾರ್ಯನಿರ್ವಹಿಸಬೇಕೆಂದೇನಿಲ್ಲ. ರಾಜಕೀಯ ಪಕ್ಷಗಳು ಸಾಹಿತಿ ಕಲಾವಿದರನ್ನು ಗುಲಾಮರನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ ಅಂತಹುದಕ್ಕೆಲ್ಲಾ ಬಗ್ಗದೇ ತಮ್ಮತನವನ್ನು ಕಾಪಾಡಿಕೊಳ್ಳುವವರು ಮಾತ್ರ ಕಲೆ ಸಾಹಿತ್ಯ ಸಂಸ್ಕೃತಿಗೆ ನ್ಯಾಯ ಒದಗಿಸಲು ಸಾಧ್ಯ. ಪಕ್ಷದ ಕಚೇರಿಯಲ್ಲಿ ಸಭೆ ಕರೆದಾಗಲೇ ಅಧ್ಯಕ್ಷರುಗಳು ವಿರೋಧಿಸಬೇಕಿತ್ತು. ಹೋಗಲಿ ‘ಈ ಸಾಂಸ್ಕೃತಿಕ ಹುದ್ದೆಗಳು ರಾಜಕೀಯಕ್ಕೆ ಮೆಟ್ಟಿಲುಗಳು’ ಎಂದು ಡಿಸಿಎಂ ಹೇಳಿದಾಗಲಾದರೂ ಪ್ರತಿರೋಧಿಸಬಹುದಾಗಿತ್ತು. ಆದರೆ ಯಾರೊಬ್ಬರೂ ಹಾಗೆ ಮಾಡದೆ ಪಕ್ಷವೊಂದರ ಆಜ್ಞಾವರ್ತಿಯಂತೆ ವರ್ತಿಸಿದ್ದು ಸಾಂಸ್ಕೃತಿಕ ಲೋಕಕ್ಕೆ ಆಘಾತಕರ ಸಂಗತಿ. ನಿಗಮಗಳ ಅಧ್ಯಕ್ಷರುಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು ಅವರ ಬಗ್ಗೆ ಆಕ್ಷೇಪವೇನಿಲ್ಲ. ಆದರೆ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರಲ್ಲಿ ಯಾರೂ ಕಾಂಗ್ರೆಸ್ ಪಕ್ಷದ ಅಧಿಕೃತ ಕಾರ್ಯಕರ್ತರಲ್ಲ. ಬಹುತೇಕರು ಬಿಜೆಪಿ ಪಕ್ಷದ ಸರ್ವಾಧಿಕಾರಿ ಧೋರಣೆ ಹಾಗೂ ಕೋಮುದ್ವೇಷ ಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅನಿವಾರ್ಯತೆಗೆ ಒಳಗಾದವರು. ಹಾಗಂತ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸ್ವಾಭಿಮಾನವನ್ನು ಒತ್ತೆ ಇಡುವುದು ಎಷ್ಟು ಸಮಂಜಸ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಲೆ ಸಾಹಿತ್ಯ ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯಬೇಕಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಚೆನ್ನಪ್ಪ ಕಟ್ಟಿಯವರು ಮಾತ್ರ ಈ ಕಾಂಗ್ರೆಸ್ ಪಕ್ಷ ಪ್ರಾಯೋಜಿತ ಸಭೆಗೆ ಹೋಗದೇ ಸಾಂಸ್ಕೃತಿಕ ಲೋಕದ ಘನತೆಯನ್ನು ಕಾಪಾಡಿದ್ದಾರೆ.
ಪಕ್ಷ ರಾಜಕಾರಣಿಗಳು ಇರುವುದೇ ಸಾಂಸ್ಕೃತಿಕ ಲೋಕದವರ ನಿಷ್ಠೆಯನ್ನು ಭ್ರಷ್ಟಗೊಳಿಸಲು. ಸರಕಾರಿ ಸಂಸ್ಥೆಗಳಿಗೆ ಬಹುತೇಕರು ತಮ್ಮ ಅರ್ಹತೆ ಅನುಭವ ಮತ್ತು ಸೇವೆಯ ಮಾನದಂಡದ ಮೇಲೆ ಆಯ್ಕೆಯಾಗಿರುತ್ತಾರೆ. ಕನಿಷ್ಠ ಅರ್ಹತೆಯೇ ಇಲ್ಲದವರ ಆಯ್ಕೆಯನ್ನು ಸಾಂಸ್ಕೃತಿಕ ಲೋಕವೇ ವಿರೋಧಿಸುತ್ತದೆ. ಹೀಗಾಗಿ ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ರಂಗಭೂಮಿ, ಸಾಹಿತ್ಯ ಕ್ಷೇತ್ರಗಳು ಯಾವಾಗಲೂ ಪ್ರಭುತ್ವದ ವಿರುದ್ಧದ ಪ್ರತಿಭಟನಾತ್ಮಕ ಮಾಧ್ಯಮಗಳು ಎನ್ನುವ ಅರಿವು ಸಾಂಸ್ಕೃತಿಕ ಲೋಕದ ಎಲ್ಲಾ ಸಾಹಿತಿ ಕಲಾವಿದರಿಗೆ ಇರಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತರು.
ಇದನ್ನೂ ಓದಿ- http://“ಸೆಲೆಬ್ರಿಟಿ ಮೋಹವೆಂಬ ರಹಸ್ಯ ಲೋಕ” https://kannadaplanet.com/the-secret-world-of-celebrity-infatuation/