ಬೆಂಗಳೂರು: ಗ್ಯಾರಂಟಿಗಳನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆ ಆಗುತ್ತಿವೆ ಎಂಬ ಸಚಿವರುಗಳ ಹೇಳಿಕೆಗಳ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲಿಯೂ ಸಿಎಂ ಹಾಗೂ ಡಿಸಿಎಂ ಅವರುಗಳು ರಾಜ್ಯದ ಜನತೆಗೆ ಒಂದು ಮಾತು ಕೊಟ್ಟಿದ್ದರು. ‘ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ’ ಅಂದಿದ್ದರು. ಐದು ಗ್ಯಾರಂಟಿಗಳನ್ನು ಕೊಡಿ ಎಂದು ಕಾಕಾ ಪಾಟೀಲ್ ಕೇಳಿಲ್ಲ, ಮಹದೇವಪ್ಪ ಅವರೂ ಕೇಳಿರಲಿಲ್ಲ, ರಾಜ್ಯದ ಜನರೂ ಕೇಳಿರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಐದು ಗ್ಯಾರಂಟಿಗಳ ಭರವಸೆ ಕೊಟ್ಟಿದ್ದು ಸಿಎಂ ಸಿದ್ದರಾಮಯ್ಯ ಅವರು. ಈಗಾಗಲೇ 15 ಬಜೆಟ್ ಮಂಡನೆ ಮಾಡಿದ್ದಾರೆ, ಅವರು ಅತ್ಯಂತ ಅನುಭವಿಗಳು. ನಾವು ಪ್ರತಿನಿತ್ಯ ನೋಡುತಿದ್ದೇವೆ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಪೆಟ್ರೋಲ್, ಡಿಸೇಲ್, ನೋಂದಣಿ, ಮುದ್ರಾಂಕ ಶುಲ್ಕ, ಅಬಕಾರಿ ಸುಂಕ ಸೇರಿ ಅನೇಕ ಕಡೆ ದರ ಹೆಚ್ಚಳ ಮಾಡುತ್ತಾ ಬಂದಿದೆ. ಮತ್ತೊಂದು ಕಡೆ ಭೂಮಿಗಳ ಮಾರ್ಗದರ್ಶಿ ಮೌಲ್ಯವನ್ನು (ಗೈಡೆನ್ಸ್ ವ್ಯಾಲೂ) 30% ಏರಿಕೆ ಮಾಡಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ಉದ್ದೇಶದಿಂದಲೇ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಟೀಕಿಸಿದರು.
ಜನರಿಗೆ ಧಮ್ಕಿ ಹಾಕುತ್ತಾರೆ:
ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುತ್ತದೆ. ಇವರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಧಮ್ಕಿ ಹಾಕಿದ್ದರು. ಇದೇ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಂಸದರನ್ನು ಆಯ್ಕೆ ಮಾಡಿಲ್ಲ ಎಂದರೆ
ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಜನರಿಗೆ ಬೆದರಿಕೆ ಒಡ್ಡಿತ್ತು. ಆದರೆ, ಈ ಗ್ಯಾರಂಟಿಗಳು ಯಾರಿಗೂ ತಲುಪುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬ್ಲಾಕ್ ಮೇಲ್
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಇವರ ರಾಜಕೀಯ ಸ್ವಾರ್ಥಕ್ಕೆ ಗ್ಯಾರಂಟಿಗಳನ್ನು ಕೊಟ್ಟರು. ಗ್ಯಾರಂಟಿಗಳನ್ನು ಕೊಡಿ ಎಂದು ರಾಜ್ಯದ ಜನತೆ ಯಾರು ಅಪೇಕ್ಷೆ ಮಾಡಿರಲಿಲ್ಲ. ಇವರು ಕೊಟ್ಟರು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ. ವಾಪಸ್ ಪಡೆಯುತ್ತೇವೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು ಅವರು.
ಹಾಲಿನ ಪ್ರೋತ್ಸಾಹ ಧನ ರೈತರಿಗೆ ಸಿಕ್ಕಿಲ್ಲ
ಹಾಲಿನ ಪ್ರೋತ್ಸಾಹ ಧನವೂ ರೈತರಿಗೆ ಸಿಕ್ಕಿಲ್ಲ. ಆದರೆ, ಹಾಲಿನ ದರ ಏರಿಕೆ ಮಾಡಿದ್ದಾರೆ. ಏರಿಕೆ ಲಾಭ ರೈತರಿಗೆ ಸಿಕ್ಕಿಲ್ಲ. ರೈತರೂ ಸಂಕಷ್ಟ ಎದುರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಹಣಕ್ಕೆ, ಸಂಪನ್ಮೂಲಕ್ಕೆ ಕೊರತೆ ಇಲ್ಲ. ಮೂರೂವರೆ ಲಕ್ಷ ಕೋಟಿಯಷ್ಟು ರಾಜ್ಯದ ಬಜೆಟ್ ಗಾತ್ರ ಇದೆ. ತೆರಿಗೆ ರೂಪದಲ್ಲಿ ಕಟ್ಟುವಂತಹ ರಾಜ್ಯದ ಜನತೆಯ ಹಣ ದುರ್ಬಳಕೆ ಆಗುತ್ತಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಿದೆವು. ವಾಲ್ಮೀಕಿ, ಮುಡಾ ಹಗರಣದ ತನಿಖೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದೆವು ಎಂದು ಅವರು ಹೇಳಿದರು.
ರೈತರಿಗೆ ನಷ್ಟ ಆಗಬಾರದು:
ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಮುರಿದಿರುವ ವಿಚಾರಕ್ಕೆ ಮಾತನಾಡಿದ ಅವರು; ನಮ್ಮ ರಾಜ್ಯವೂ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣಕ್ಕೆ ಕುಡಿಯುವುದಕ್ಕೆ, ಕೈಗಾರಿಕೆಗಳಿಗೆ, ರೈತರಿಗೆ ನೀರು ಈ ಜಲಾಶಯದಿಂದ ಹೋಗುತ್ತಿದೆ. ಈಗಾಗಲೇ 27 ಟಿಎಂಸಿ ನೀರು ಹರಿದುಹೋಗಿದೆ. ಎಷ್ಟು ನಷ್ಟ ಆಗಿದೆ ಎನ್ನುವುದನ್ನು ಸರ್ಕಾರ ಹೇಳಬೇಕು, ರೈತರಿಗೆ ಪರಿಹಾರ ಕೊಡಬೇಕು. 55 ಟಿಎಂಸಿ ನೀರು ಖಾಲಿ ಮಾಡಿ ಗೇಟ್ ಅಳವಡಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಇಲ್ಲವಾದರೆ ಹೊಸ ಗೇಟ್ ನಿರ್ಮಾಣ ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ಈಗ ಮತ್ತೆ ನೀರು ಬಿಡುವ ಸಂದರ್ಭದಲ್ಲಿ ಮೂರು ನಾಲ್ಕು ಜಿಲ್ಲೆಯ ರೈತರು ಬೆಳೆ ಬೆಳೆದಿದ್ದಾರೆ. ಆ ಬೆಳೆ ನಾಶವಾಗದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.