ನಂದಿನಿ  ಬ್ರ್ಯಾಂಡ್‌ನ ಪ್ರೋಟೀನ್‌ ಆಧಾರಿತ ಇಡ್ಲಿ ಮತ್ತು ದೋಸೆ  ಹಿಟ್ಟಿಗೆ ಭರ್ಜರಿ ರೆಸ್ಪಾನ್ಸ್‌ !

Most read

ಬೆಂಗಳೂರು: ಡಿಸೆಂಬರ್‌ 25 ರಂದು ಲೋಕಾರ್ಪಣೆಗೊಂಡಿದ್ದ ನಂದಿನಿ ಬ್ರ್ಯಾಂಡ್‌ನ ‘ರೆಡಿ ಟು ಕುಕ್’ ನಂದಿನಿ ವೇ ಪ್ರೋಟೀನ್‌ ಆಧಾರಿತ ಇಡ್ಲಿ ಮತ್ತು ದೋಸೆ  ಹಿಟ್ಟಿಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರ ಸ್ಪಂದನೆ ಉತ್ತಮವಾಗಿದ್ದು, ಬಿಡುಗಡೆಯಾದ ಐದೇ ದಿನಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. ಕಳೆದ ಎರಡು ಮೂರು ದಿನದಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ, ದೋಸೆ ಹಿಟ್ಟು ಮಾರಾಟವಾಗಿದೆ. ನಂದಿನ ಹಿಟ್ಟಿನಲ್ಲಿ ಶೇ.ಐದರಷ್ಟು ಪ್ರೋಟೀನ್ ಇರುವುದರಿಂದ ಗ್ರಾಹಕರು ಹೆಚ್ಚಿನ ಸಮಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ಸ್ಪೂರ್ತಿಗೊಂಡಿರುವ ನಂದಿನಿ ಮತ್ತಷ್ಟು ದೋಸೆ ಮತ್ತು ಇಡ್ಲಿ ಹಿಟ್ಟು ಸರಬರಾಜು ಮಾಡಲು ಮುಂದಾಗಿದೆ. ಇಡ್ಲಿ ಹಿಟ್ಟು ವಿತರಣೆಗೆ ಪ್ರಸ್ತುತ 5-6 ವಾಹನಗಳಿದ್ದು, ಶೀಘ್ರದಲ್ಲೇ ಇನ್ನೂ 18 ವಾಹನ ಖರೀದಿಗೆ ಕೆಎಂಎಫ್ ಚಿಂತನೆ ನಡೆಸಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲೂ ನಿರ್ಧರಿಸಿದೆ. ‌

ಡಿಸೆಂಬರ್‌ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್), ಇದೇ ಮೊದಲ ಬಾರಿಗೆ ಪರಿಚಯಿಸಿರುವ ನಂದಿನಿ ಬ್ರ್ಯಾಂಡ್ ನ ಪ್ರೋಟೀನ್‌ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.. ಕೆಎಂಎಫ್ ಬಿಡುಗಡೆ ಮಾಡಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಶೇ 5 ರಷ್ಟು ಪ್ರೋಟೀನ್‌ ಅಂಶವನ್ನು ಮಿಶ್ರ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಎರಡು ವಿಧದ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 450 ಗ್ರಾಂ. ತೂಕದ ಪ್ಯಾಕೆಟ್‌ಗೆ ರೂ.40 ಹಾಗೂ 900 ಗ್ರಾಂ. ತೂಕದ ಪ್ಯಾಕೆಟ್‌ಗೆ ರೂ.80 ಗರಿಷ್ಠ ಮಾರಾಟ ದರ ನಿಗದಿಪಡಿಸಲಾಗಿದೆ. ಎಲ್ಲ ಸುರಕ್ಷತಾ ಮಾನದಂಡಗಳನ್ನೂ ಪರಿಶೀಲಿಸಿ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಗುಣಮಟ್ಟದ ಬಗ್ಗೆ ಸಂಪೂರ್ಣ ಎಚ್ಚರಿಕೆ ವಹಿಸಿದ್ದೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮಾರುಕಟ್ಟೆಯಲ್ಲಿರುವ ಇತರ ಎಲ್ಲ ಬ್ರ್ಯಾಂಡ್‌ಗಳನ್ನೂ ಹಿಂದಿಕ್ಕಿ ಮಾರಾಟ ವಿಸ್ತರಿಸುವ ಗುರಿ ನಮ್ಮ ಮುಂದಿದೆ  ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ತಿಳಿಸಿದ್ದರು.

More articles

Latest article