ಬೆಂಗಳೂರು: ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಬೆಂಗಳೂರಿನ 64 ನೇ ಸಿಸಿಎಚ್ ನ್ಯಾಯಾಲಯ ವಜಾ ಮಾಡಿದೆ. ಮಂಗಳವಾರ ಜಾಮೀನು ಅರ್ಜಿಯ ವಿಚಾರಣೆ ನಡೆದು ವಾದ–ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು, ಆದೇಶವನ್ನು ಕಾಯ್ದಿರಿಸಿದ್ದರು.
ಮತ್ತೊಬ್ಬ ಆರೋಪಿ ತರುಣ್ ಕೊಂಡೂರು ರಾಜ್ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಪರ ವಕೀಲರು ಸಮಯಾಕಾಶ ಕೇಳಿದ್ದು, ವಿಚಾರಣೆಯನ್ನು ಮಾರ್ಚ್ 29ಕ್ಕೆ ಮುಂದೂಡಲಾಗಿದೆ.
ಆರೋಪಿ ರನ್ಯಾ ರಾವ್ ಗೆ ಪ್ರಭಾವಿ ವ್ಯಕ್ತಿಗಳ ಸಂಬಂಧ ಇರುವುದು ತನಿಖೆ ನಡೆಸುವಾಗ ಸಾಬೀತಾಗಿದೆ. ರನ್ಯಾಗೆ ಜಾಮೀನು ಮಂಜೂರು ಮಾಡಿದರೆ ತನಿಖೆಯ ಹಾದಿಯನ್ನು ತಪ್ಪಿಸುವ ಸಾಧ್ಯತೆಗಳಿವೆ. ಸಾಕ್ಷ್ಯ ನಾಶಪಡಿಸಿ, ವಿದೇಶಕ್ಕೂ ಪರಾರಿ ಆದರೂ ಆಗಬಹುದು. ಈ ಅನುಮಾನವೂ ಇದೆ. ಒಂದು ವರ್ಷದ ಅವಧಿಯಲ್ಲಿ ಆರೋಪಿ 25ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿರುವುದು ಅನುಮಾನ ಹುಟ್ಟಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೆ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಡಿಆರ್‌ಐ ಪರ ವಕೀಲರು ವಾದಿಸಿದ್ದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮಾರ್ಚ್ 3ರಂದು ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ಬಂಧಿಸಿ, 14 ಕೆ.ಜಿ. ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ರನ್ಯಾ ರಾವ್ ಅವರು ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸೌಲಭ್ಯ ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ಡಿಆರ್‌ಐ ತನಿಖೆ ವೇಳೆ ಬಯಲಾಗಿತ್ತು.