ಹುಬ್ಬಳ್ಳಿ: ಗೋವಾ ರಾಜ್ಯಕ್ಕೆ ಹೆದರಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ಯೋಜನಗೆ ಅನುಮತಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಎಸ್ ಸಿ ಪರೀಕ್ಷೆಯಲ್ಲಿನಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಪ್ರಹ್ಲಾದ್ ಜೋಶಿ ಮೊದಲು ಮಹದಾಯಿ ಬಗ್ಗೆ ಮಾತಾಡಲಿ. ಮಹದಾಯಿ ಯೋಜನೆಗೆ ಪರಿಸರ ಇಲಾಖೆಯಿಂದ ಏಕೆ ಅನುಮತಿ ಕೊಡಿಸುತ್ತಿಲ್ಲ? ಗೋವಾಕ್ಕೆ ಹೆದರಿಕೊಂಡು ಮೋದಿ ಅವರು ಅನುಮತಿ ಕೊಡುತ್ತಿಲ್ಲ. ಪ್ರಲ್ಹಾದ್ ಜೋಶಿ ಆ ಬಗ್ಗೆ ಪ್ರಧಾನಿ ಮೋದಿ ಮುಂದೆ ಮಾತಾಡುತ್ತಿಲ್ಲ. ನಾವು ಅನೇಕ ಸಲ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಕೇಂದ್ರ ಸಚಿವ ಸಂಪುಟದ ಹಿರಿಯ ಸದಸ್ಯರಾಗಿ ಜೋಶಿ ಅವರು ದೀರ್ಘಕಾಲದಿಂದ ಬಾಕಿ ಇರುವ ಯೋಜನೆಗೆ ಅಗತ್ಯವಾದ ಅನುಮೋದನೆಗಳನ್ನು ಪಡೆಯಲು ತಮ್ಮ ಪ್ರಭಾವವನ್ನು ಬಳಸಬೇಕು. ಮಹದಾಯಿ ಯೋಜನೆ ಕುರಿತು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ತಿರುಗೇಟು ನೀಡಿದರು.
ಹಾನಗಲ್ ನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ 650 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು. ದೇಶದ ಇತಿಹಾಸದಲ್ಲಿ 5 ಗ್ಯಾರಂಟಿ ಕೊಟ್ಟ ಮೊದಲ ಸರಕಾರ ಕರ್ನಾಟಕದ ಕಾಂಗ್ರೆಸ್ ಸರಕಾರ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹ ಲಕ್ಷ್ಮೀ , ಯುವನಿಧಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದರು.
ಗ್ಯಾರಂಟಿ ಕೊಟ್ಟು ಖಜಾನೆ ಖಾಲಿ ಆಗಿದೆ, ದುಡ್ಡಿಲ್ಲ ಎಂದು ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ನ ಆಧಾರರಹಿತ ಹೇಳಿಕೆಗಳಿಗೆ ಕಿವಿಗೊಡಬೇಕಿಲ್ಲ. 2024-25 ರಲ್ಲಿ 3.71 ಲಕ್ಷ ಕೋಟಿ, ಪ್ರಸಕ್ತ ವರ್ಷಕ್ಕೆ 4.09 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದೇವೆ. ಹಣ ಇಲ್ಲದಿದ್ದರೆ ಇಷ್ಟು ದೊಡ್ಡ ಬಜೆಟ್ ಮಂಡನೆ ಹೇಗೆ ಸಾಧ್ಯ? ಬಂಡವಾಳ ವೆಚ್ಚವು 31,000 ಕೋಟಿ ರೂ.ಗಳಷ್ಟು ಏರಿಕೆಯಾಗಿ 83,000 ಕೋಟಿ ರೂ.ಗಳಿಗೆ ತಲುಪಿದೆ. ಹೆಚ್ಚುವರಿಯಾಗಿ ಗ್ಯಾರಂಟಿ ಯೋಜನೆಗಳಿಗಾಗಿ ನಾವು ನಿರ್ದಿಷ್ಟವಾಗಿ 50,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಒಟ್ಟಾರೆಯಾಗಿ, ಅಭಿವೃದ್ಧಿಗಾಗಿ 1.33 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹಾನಗಲ್ ತಾಲೂಕಿನಲ್ಲಿ 650 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದೇವೆ. ಇದು ಹೇಗೆ ಸಾಧ್ಯವಾಗುತ್ತಿತ್ತು? ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.