ಮುಂಬೈ: ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಜೆ.ಎನ್.ಸಾಯಿಬಾಬಾ ಮತ್ತು ಐವರನ್ನು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಪ್ರಕರಣದಲ್ಲಿ ನಿರ್ದೋಷಿ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ವಿನಯ್ ಜೋಷಿ, ವಾಲ್ಮೀಖಿ ಮೆನೆಜಸ್ ಅವರನ್ನೊಳಗೊಂಡ ವಿಭಾಗೀಯ ಪೀಠ ನಾಗಪುರ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. 2017ರಲ್ಲಿ ನಾಗಪುರ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ ಅವರನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿತ್ತು.
2022ರ ಅಕ್ಟೋಬರ್ 14ರಂದು ಬಾಂಬೆ ಹೈಕೋರ್ಟ್ ಜಿ.ಎನ್.ಸಾಯಿಬಾಬಾ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ ಪರಿಣಾಮವಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿತ್ತು. ಈಗ ವಿಭಾಗೀಯ ಪೀಠದ ತೀರ್ಪಿನಿಂದ ಸಾಯಿಬಾಬಾ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ನಡೆದಾಡಲು ಸಾಧ್ಯವೇ ಇಲ್ಲದ ಅಂಗವೈಕಲ್ಯ ಹೊಂದಿರುವ 54 ವರ್ಷ ವಯಸ್ಸಿನ ಜಿ.ಎನ್.ಸಾಯಿಬಾಬಾ ಅವರು ತಮ್ಮ ಓಡಾಟಕ್ಕೆ ವೀಲ್ ಚೇರ್ ಬಳಸುತ್ತಾರೆ. ಅವರನ್ನು ಈಗ ನಾಗಪುರ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿದೆ.
ಮಾವೋವಾದಿ ನಕ್ಸಲರೊಂದಿಗೆ ಸೇರಿ ದೇಶದ ಮೇಲೆ ಯುದ್ಧ ಹೂಡುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ ಅವರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ಗಡ್ಚಿರೋಲಿ ಸೆಷನ್ಸ್ ಕೋರ್ಟ್ ಸಾಯಿಬಾಬಾ ಮತ್ತು ಇತರರನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿತ್ತು.