ಬೆಂಗಳೂರು: ಧರ್ಮಸ್ಥಳ ಗ್ರಾಮದಿಂದ ತಮ್ಮ ಪುತ್ರಿ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪತ್ರ ಬರೆದಿದ್ದಾರೆ.
ಕಳೆದ ಹಲವು ದಿನಗಳಿಂದ ಸುಜಾತಾ ಭಟ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ನಿರಂತರವಾಗಿ ಹಿಂಬಾಲಿಸುತ್ತಿದ್ದಾರೆ. ಜತೆಗೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ನಾಗಲಕ್ಷ್ಮೀ ಚೌಧರಿ ಅವರು ಎಸ್‌ಐಟಿಗೆ ಸೂಚನೆ ನೀಡಿದ್ದಾರೆ.
ಕೆಲವು ಮಾಧ್ಯಮಗಳು ಸುಜಾತಾ ಭಟ್ ಅವರ ಮಾನಹಾನಿ ಆಗುವ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಹಗಲು ರಾತ್ರಿಯೆನ್ನದೆ ಅವರ ನಿವಾಸದ ಮುಂದೆ ಕ್ಯಾಮೆರಾಗಳನ್ನು ಹಾಕಿಕೊಂಡು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾರೆ. ಮಾಧ್ಯಮಗಳ ಕಾರಿನಲ್ಲಿ ಕೂರಿಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರಿಂದ ತನಿಖೆಯ ಹಾದಿ ತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ಎಸ್ ಐಟಿ ಅಧಿಕಾರಿಗಳಿಗೆ ಪತ್ರದಲ್ಲಿ ವಿವರಿಸಿದ್ದಾರೆ.
ಸುಜಾತಾ ಭಟ್ ಅವರು ಮಾಧ್ಯಮಗಳ ಒತ್ತಡದಿಂದ ಮಾನಸಿಕ ಹಾಗೂ ದೈಹಿಕವಾಗಿ ಜರ್ಝರಿತರಾಗುವ ಸಾಧ್ಯತೆಗಳಿದ್ದು, ಈ ವಿಷಯವನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಕಾರಣಕ್ಕಾಗಿ ಸುಜಾತಾ ಭಟ್ ಅವರಿಗೆ ಭದ್ರತೆ ನೀಡಬೇಕಾಗಿದೆ. ಈ ಬಗ್ಗೆ ಕೈಗೊಂಡ ಕ್ರಮ ಕುರಿತ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂದೂ ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣ ಕುರಿತು ಸಂತ್ರಸ್ತರು ಯಾವುದೇ ಅಳುಕು ಅಥವಾ ಭಯ ಇಲ್ಲದೆ ಇಲ್ಲದೆ ದೂರು ಸಲ್ಲಿಸಲು ಎಸ್ ಐ ಟಿ ಅವಕಾಶ ಕಲ್ಪಿಸಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಟ್ಟು ಅವರಿಗೆ ರಕ್ಷಣೆ ನೀಡಬೇಕು ಎಂದೂ ಮಹಿಳಾ ಆಯೋಗ ಸಲಹೆ ನೀಡಿದೆ.