ಹಾಡು :
ಕಾಯಲೇಬೇಕು ಒಳ್ಳೆಯ ದಿನಕೆ
ನಾವು ನೀವು
ಭರವಸೆ ನಂಬಿ ಬದುಕಲೇ ಬೇಕು
ನಾವು ನೀವು
ಬೇರೆ ಏನಿದೆ ದಾರಿ ಸೇರುವವರೆಗೂ ಗೋರಿ
ಕಾಯಲೇ ಬೇಕು ನಾವು ನೀವು
(ಗಂಡ ಹೆಂಡತಿ ಟಿವಿ ನೋಡುತ್ತಾ ಸೋಫಾದ ಮೇಲೆ ಕುಳಿತು ವಾದಕ್ಕಿಳಿಯುತ್ತಾರೆ)
ಗಂಡ : ಅಲ್ಲಾ ಕಣೆ.. ಈ ಚೌಕೀದಾರ ಹೇಳೋದನ್ನ ಇನ್ನೂ ನಂಬ್ತಿ ಏನೇ?
ಹೆಂಡತಿ : ನಂಬಲೇ ಬೇಕ್ರಿ.. ಇವತ್ತಲ್ಲಾ ನಾಳೆ ಅಚ್ಚೇ ದಿನ್ ಬಂದೇ ಬರುತ್ತೆ ಅಂತಾ ನೀವೇ ಪುಂಗ್ತಾ ಇದ್ರಲ್ಲಾ, ಈಗ ಕಾಯಬೇಕಪ್ಪಾ.
ಗಂಡ : ಏನ್ ಅಚ್ಚೇ ದಿನ್, ಎಲ್ಲಿ ಅಚ್ಚೇ ದಿನ್ ಕಣೆ.. 2014 ಕ್ಕಿಂತಾ ಮೊದಲೇ ಇರೋದರಲ್ಲೇ ಒಂದಿಷ್ಟು ಅಚ್ಚೇ ದಿನ್ ಇತ್ತು.. ನಂತರ ಬರೀ ಬೂರೇ ದಿನ್ , ಬರೀ ಮಾತು ಮಾತು ಭರವಸೆ ಆಶ್ವಾಸನೆ ಅಷ್ಟೇ ಕಣೆ. ನನಗಂತೂ ಭಾರೀ ಭ್ರಮನಿರಸನ ಆಗಿಬಿಟ್ಟಿದೆ.
ಹೆಂಡತಿ : ಅಯ್ಯೋ, ಅಷ್ಟೊಂದು ಹತಾಶೆ ಯಾಕ್ರೀ.. ಕಾಯಬೇಕು ಕಣ್ರೀ.. ಕಾಯ್ತಾ ಇರಬೇಕು.
ಗಂಡ : ಇನ್ನೂ ಎಷ್ಟು ವರ್ಷ ಕಾಯಬೇಕೇ?. ಅವತ್ತು ಅಂದರೆ 2014. ಚೌಕಿದಾರರು ಆಗ ತಾನೆ ದೇಶ ಕಾಯೋಕೆ ಬಂದಿದ್ರಲ್ಲಾ, ಆವಾಗ ಏನು ಹೇಳಿದ್ರು ಅಂದ್ರೆ.. ( ಖುರ್ಚಿ ಮೇಲೆ ಹತ್ತಿ ನಿಂತು) ” ನೀವು ನನಗೆ ಆರು ತಿಂಗಳ ಸಮಯ ಕೊಡಿ, ನಿಮಗೆ ಸುಖ ನೆಮ್ಮದಿಯ ಜೀವನ ಕೊಡ್ತೇನೆ ಅಂತಾ ಮಾತು ಕೊಡಲು ನಾನು ಬಂದಿದ್ದೇನೆ” ಅಂತಾ ಹೇಳಿದ್ದು ನೆನಪಿದೆ ಏನೇ..
ಹೆಂಡತಿ : ಹೌದ್ರಿ.. ಚೆನ್ನಾಗಿ ನೆನಪಿದೆ. ನೀವೂ ಹತ್ತಾರು ಬಾರಿ ಅದನ್ನೇ ಹೇಳ್ತಾ ಇದ್ರಿ.
ಗಂಡ : ಆ ಆರು ತಿಂಗಳು ಹೋಗಿ ಎರಡು ವರ್ಷ ಆದಾಗ 2016 ರಲ್ಲಿ ಮತ್ತೆ ವಿಶ್ವಗುರುಗಳು ಏನ್ ಹೇಳಿದ್ರಪ್ಪಾ ಅಂದ್ರೆ “ದೇಶವಾಸಿಯೋ, ನಾನು ಕೇವಲ ಐವತ್ತು ದಿನ ಕೇಳ್ತಾ ಇದ್ದೇನೆ, ಐವತ್ತೇ ದಿನ. ಡಿಸೆಂಬರ್ 30 ರ ವರೆಗೆ ನನಗೆ ಅವಕಾಶ ಕೊಡಿ, ಡಿಸೆಂಬರ್ 30 ರ ನಂತರ ನನ್ನಿಂದ ಏನಾದ್ರೂ ಕೊರತೆ ಆದ್ರೆ, ನನ್ನಲ್ಲಿ ಏನಾದ್ರೂ ತಪ್ಪು ಕಂಡು ಬಂದ್ರೆ, ನೀವು ಯಾವ ಸರ್ಕಲ್ ನಲ್ಲಿ ನಿಲ್ಲು ಅಂದ್ರೆ ನಿಲ್ತೀನಿ, ನೀವೇನೇ ಶಿಕ್ಷೆ ಕೊಟ್ರೂ ಅದನ್ನ ಅನುಭವಿಸಲಿಕ್ಕೆ ನಾನು ಸಿದ್ದನಿದ್ದೇನೆ” ಅಂದ್ರು..
ಹೆಂಡತಿ : ಮೊದಲು ಹೇಳಿದ್ದು ಆರು ತಿಂಗಳು ಅಂತಾ, ಎರಡು ವರ್ಷದ ನಂತರ ಮತ್ತೆ ಐವತ್ತು ದಿನ ಕೇಳಿದ್ರಲ್ರಿ.. ಹೋಗಲಿ ಕೊಟ್ಟು ನೋಡಿದ್ರಾಯ್ತಪ್ಪಾ..
ಗಂಡ : ಇನ್ನೂ ಮುಂದೆ ಕೇಳೆ. ಆ ಐವತ್ತು ದಿನಾನೂ ಕಳೀತು ಏನೂ ಆಗಲೇ ಇಲ್ಲ. ಟುಸ್ ಪಟಾಕಿ. ಮತ್ತೆ 2023 ರಲ್ಲಿ ನಮ್ಮ ಪ್ರಧಾನಿಗಳು ” ನನ್ನ ಮೇಲೆ ಇನ್ನು ಐದು ವರ್ಷ ಭರವಸೆ ಇಡಿ, ಕೇವಲ ಐದೇ ವರ್ಷ. ಅವರೆಲ್ಲಾ ಎಷ್ಟು ಲೂಟಿ ಮಾಡಿದ್ದಾರೊ, ಅದನ್ನೆಲ್ಲಾ ನಿಮ್ಮ ಪಾದದಡಿ ತಂದು ಹಾಕ್ತೇನೆ”
ಹೆಂಡತಿ : ಹೋಗಲಿ ಬಿಡ್ರಿ.. ಇನ್ನೊಂದ್ ಐದು ವರ್ಷ ಟೈಂ ಕೊಟ್ರಾಯ್ತು.. ಇಷ್ಟು ವರ್ಷಾನೇ ಕಾದಿದ್ದೇವಂತಾ, ಇನ್ನೈದು ವರ್ಷ ಕಾಯೋಣಂತಾ ಸುಮ್ಕಿರಿ.
ಗಂಡ : ಆಯ್ತು ಕಣೆ. ಆ ಐದು ವರ್ಷವೂ ಕಾದಿದ್ದಾಯ್ತು. ನಮ್ಮ ಪಾದದ ಕೆಳಗೆ ಸವಕಲು ಚಪ್ಪಲಿ ಇದ್ವೇ ಹೊರತು ಏನೂ ಬಂದು ಬೀಳಲೇ ಇಲ್ಲ. 2025 ರ ವರೆಗೂ ಕಾದಿದ್ದಾಯ್ತು. ಆಗ ಮತ್ತೆ ಪ್ರಧಾನ ಸೇವಕರು ಏನಂದ್ರಪಾ ಅಂದ್ರೆ “ರಾಷ್ಟ್ರೀಯ ಸುರಕ್ಷಾ ಕವಚ ವಿಸ್ತಾರ ಮಾಡಬೇಕು ಅಂತಿದ್ದೇನೆ. ಮಜಬೂತ್ ಮಾಡ್ಬೇಕು ಅಂತಿದ್ದೀನಿ, ಆಧುನಿಕ ಮಾಡ್ಬೇಕು ಅಂತಿದ್ದೀನಿ, ನನಗೆ ಕೇವಲ 2035 ರ ತನಕ ಸಮಯ ಕೊಡಿ ಸಾಕು”
ಹೆಂಡತಿ : ಮತ್ತೆ ಹತ್ತು ವರ್ಷ ಟೈಂ ಬೇಕಾ?. ಇಲ್ಲಾರಿ ಇನ್ಮೇಲೆ ಕಾಯೋಕಾಗೋದಿಲ್ಲಾ. ಭರೀ ಭರವಸೆ ನಂಬಿ ಬದುಕೋಕು ಆಗೋದಿಲ್ಲಾ. ವಿದೇಶದಿಂದ ಕಪ್ಪು ಹಣ ತಂದು ನಮ್ಮ ಖಾತೆಗೆ 15 ಲಕ್ಷ ಹಣ ಹಾಕ್ತೇನೆ ಅಂದ್ರು ಹಾಕಿದ್ರಾ…
ಗಂಡ : ಪ್ರತಿ ವರ್ಷ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡ್ತೀನಿ ಅಂದ್ರು ಕೊಟ್ರಾ..
ಹೆಂಡತಿ : ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ..
ಗಂಡ : ನೋಟ್ ಬಂಧಿ ಮಾಡಿ ಕಪ್ಪು ಹಣ ನಿರ್ಮೂಲನೆ ಮಾಡ್ತೀನಿ, ಭಯೋತ್ಪಾದನೆ ನಿಲ್ಲಿಸ್ತೀನಿ ಅಂದ್ರು, ಯಾವುದಾದ್ರೂ ನಿಲ್ತಾ?
ಹೆಂಡತಿ : ಇಲ್ರೀ ಈ ಸುಳ್ಳಬುರಕನ ಮಾತು ಇನ್ನೂ ನಂಬೋಕೆ ಆಗಾಕಿಲ್ಲಾ ಅಂದ್ರೆ ಆಗಾಕಿಲ್ಲ.
ಗಂಡ : ನಾವೇನೆ ಮಾಡೋಕಾಗುತ್ತೆ. ಇಂತಾ ಮಾತನ್ನ ನಂಬಿ ಮತ್ತೆ ಮತ್ತೆ ಮೋಸ ಹೋಗಿ ಓಟ್ ಹಾಕಿದ್ರಲ್ಲಾ ಅದಕ್ಕೆ ಜನ ಅನುಭವಿಸಬೇಕು ಕಣೆ, ಸಂಕಟ ಪಡಬೇಕು.
ಹೆಂಡತಿ : ನೀವೇ ಚೌಕಿದಾರನ ಪಕ್ಷಕ್ಕೆ ಓಟ್ ಕೊಡಿ, ಅಚ್ಚೇ ದಿನ್ ಬರುತ್ತೆ ಅಂತಾ ಎಲ್ರಿಗೂ ಹೇಳ್ತಾ ಇದ್ರಲ್ರೀ.. ಇನ್ನೂ ಎಷ್ಟು ದಿನ ಹಿಂಗೇರಿ.. ಅವರು ಟೈಂ ಕೊಡಿ ಅಂತಾನೇ ಇರಬೇಕು, ನಾವು ಕಾಯ್ತಾನೇ ಇರಬೇಕು.. ಇನ್ನೂ ಕಾಯೋದಿಕ್ಕೆ ಸಾಧ್ಯ ಇಲ್ಲಾರೀ.
ಗಂಡ : ಏನ್ ಮಾಡೋಕಾಗುತ್ತೆ.. ಓಟು ಕೊಡೋದಷ್ಟs ನಮ್ಮ ಕೆಲಸ. ಆಮೇಲೆ ಕಾಯೋದು ನಮ್ಮ ಕರ್ಮ. ಹೋಗೆ ಹೋಗಿ ಸ್ಟ್ರಾಂಗ್ ಆಗಿ ಚಾ ಮಾಡ್ಕೊಂಡ್ ಬಾ.
ಹೆಂಡತಿ : ನೋ.. ಇನ್ಮೇಲೆ ಈ ಮನೇಲಿ ಚಾ ಬಂದ್.
ಗಂಡ : ಯಾಕೆ ಏನಾಯ್ತು?
ಹೆಂಡತಿ : ಈ ಚಾ ದಿಂದಲೇ ಇಷ್ಟೆಲ್ಲಾ ಆಗಿದ್ದು. ಚಾ ಮಾರ್ಕೊಂಡಿದ್ದ ಅನಕ್ಷರಸ್ಥನಿಗೆ ದೇಶ ಕೊಟ್ರೆ ಇನ್ನೇನ್ರೀ ಆಗುತ್ತೆ.
ಗಂಡ : ಕಾಗೆಗೆ ಅಧಿಕಾರ ಕೊಟ್ರೆ ಕಚೇರಿ ತುಂಬಾ ಕಕ್ಕಾ ಮಾಡುತ್ತೆ.
ಹೆಂಡತಿ : ಯಸ್.. ಅದಕ್ಕೆ ಇನ್ಮೇಲೆ ಅಚ್ಚೇ ದಿನ್ ಬರುವವರೆಗೂ ಚಾ ಬಂದ್.
ಗಂಡ : ಲೆ ಲೇ.. ಅಚ್ಚೇ ದಿನ್ ಬರೋದಿಲ್ಲಾ ಕಣೆ.. ಬರೋದಿಲ್ಲಾ. ತಲೆ ಸಿಡೀತಿದೆ ಚಾ ಮಾಡಿ ಕೊಡೆ.
ಹೆಂಡತಿ : ನೊ ಅಂದ್ರೆ ನೋ.. ನೀವೇ ತಾನೆ ಆ ಚಾಯ್ ವಾಲಾನ ಪಾರ್ಟಿಗೆ ಓಟ್ ಹಾಕಿದ್ದು, ನನಗೂ ಹಾಕು ಅಂತಾ ಒತ್ತಾಯ ಮಾಡಿದ್ದು. ಅಚ್ಚೇ ದಿನ್ ಬರುತ್ತೆ ಅಂತಾ ಹೇಳಿದ್ದು. ಈಗ ಅನುಭವಿಸ್ರಿ.. ನಂದು ಈಗಿಂದಾ ಚಾಯ್ ಬಂದ್ ಚಳುವಳಿ.
ಗಂಡ : (ಪ್ಯಾಥೊ ಸಾಂಗ್) ಏನು ಮಾಡಿದೆನೆಂದು ಈ ಗತಿ ತಂದೆಯೋ ಚಾಯ್ ವಾಲಾ,
ಎನಿತು ಕಾಲ ಕಾಯುತಿರೆ ಅಚ್ಚೇ ದಿನ್ ಬರುವುದೋ ಚೌಕೀದಾರಾ
( ತಲೆ ಮೇಲೆ ಕೈ ಹೊತ್ತು ಕೂಡುವನು, ಹೆಂಡತಿ ಒಂದು ಟಾವಲ್ ತೆಗೆದು ಆತನ ತಲೆ ಮೇಲೆ ಹಾಕುವಳು)
ಹಿನ್ನೆಲೆಯಲ್ಲಿ ಹಾಡು :
ನಂಬಿ ಕೆಟ್ಟೆವೋ ಶಿವನೇ
ಅಂಬಿಗನ ನಂಬಿ ಕೆಟ್ಟೆವೋ..
ಅಮೃತ ಹೋಗಲಿ ಅಂಬಲಿಯೂ ಸಿಗಲಿಲ್ಲ
ಕೈಗೆ ಚೆಂಬು ಹಣೆಗೆ ನಾಮ
ಅಚ್ಚೇ ದಿನ್ ಕನ್ನಡಿಯ ಗಂಟಾಯಿತೋ
ನಂಬಿ ಕೆಟ್ಟೆವೋ ನಾವೆಲ್ಲಾ
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಟಿಕೆಟ್ ಬೇಕು ಟಿಕೆಟ್


