Saturday, April 12, 2025

ಜಾತಿವಾದಿಗಳ ಹೆಗಲೇರಿದ ಜಾತಿಗಣತಿ ಭೂತ

Most read

ಸಾಮಾಜಿಕ ನ್ಯಾಯ ಎನ್ನುವುದು ಸುಮ್ಮನೇ ದಕ್ಕುವುದಲ್ಲ, ಅದು ಶೋಷಿತ ಸಮುದಾಯಗಳ ಹಕ್ಕೂ ಆಗಿದೆ. ಕೊಡದೇ ಇದ್ದರೆ ಹೋರಾಟಗಳಿಂದಾದರೂ ಕಿತ್ತುಕೊಳ್ಳಬೇಕಿದೆ. ಜಾತಿಗಣತಿ ಮಂಡನೆಯಾಗುವ ಮುನ್ನವೇ ಖಂಡನೆ ಮಾಡುವ ಜಾತಿಗ್ರಸ್ಥ ಪ್ರಬಲ ಜಾತಿಯ ನಾಯಕರು ಹಾಗೂ ಆ ಜಾತಿ ಮಠ ಪೀಠದವರ ವಿರುದ್ಧ ಶೋಷಿತ ಜಾತಿ ವರ್ಗದವರು ಸಂಘಟಿತ ಹೋರಾಟವನ್ನು ರೂಪಿಸಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಇನ್ನೂ ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿಲ್ಲ, ಆ ವರದಿಯ ಕುರಿತು ಸದನದಲಿ ಚರ್ಚೆಯೂ ಆಗಿಲ್ಲಾ ಆದರೆ ಪ್ರಬಲ ಜಾತಿ ಸಮುದಾಯದ ಕೆಲವು ನಾಯಕರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಂದೋ ಜಾತಿ ಗಣತಿಯ ಅಂಕಿ ಅಂಶಗಳು ಸೋರಿಕೆಯಾಗಿದೆ ಎಂದು ನಂಬಿರುವ ಗಣತಿ ವಿರೋಧಿಗಳು ವೈಜ್ಞಾನಿಕವಾಗಿ ಜಾತಿಗಣತಿ ಮಾಡಲಾಗಿಲ್ಲ ಎಂದು ತಮ್ಮ ವಿರೋಧಕ್ಕೆ ಸಮರ್ಥನೆ ಕೊಡುತ್ತಿದ್ದಾರೆ.

2011 ರಲ್ಲೂ ಹೀಗೇ ಆಗಿತ್ತು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಭಾರತ ಸರಕಾರವು ದೇಶಾದ್ಯಂತ ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ ( SECO) ಸಮೀಕ್ಷೆ ಮಾಡಿಸಿತ್ತು. ಆಗಲೂ ಪ್ರಬಲ ಜಾತಿಯ ನಾಯಕರುಗಳು ಈ ಸಮೀಕ್ಷೆಯ ದತ್ತಾಂಶಗಳು ಅಪೂರ್ಣವಾಗಿವೆ ಎಂದು ವಿವಾದವನ್ನು ಹುಟ್ಟುಹಾಕಿದ್ದರು. ಇದರಿಂದಾಗಿ ಈ ಸಮೀಕ್ಷೆ ಮಂಡನೆ ಆಗದೇ ಇತಿಹಾಸದ ಕಸದ ಬುಟ್ಟಿಗೆ ಸೇರಿತು.

2023 ರಲ್ಲಿ ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಯನ್ನು ಅಲ್ಲಿಯ ರಾಜ್ಯ ಸರಕಾರ ನಡೆಸಿ ಪ್ರಕಟಿಸಿತು. ಇದು ದೇಶಾದ್ಯಂತ ವಿವಾದ ಹುಟ್ಟು ಹಾಕಿತು. ಮೇಲ್ಜಾತಿ ಜನರ ವಿರೋಧವೂ ಕೇಳಿ ಬಂತು. ಆದರೂ ವರದಿ ಮಂಡನೆ ಮಾಡಲಾಯ್ತು. ಕೆಲವರು ಹೈಕೋರ್ಟ್ ಮೆಟ್ಟಲೇರಿ ಸಮೀಕ್ಷೆ ಜಾರಿಗೆ ಅಡೆತಡೆ ಒಡ್ಡಿದರು. ಕೊನೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಾತಿಗಣತಿ ಸಮೀಕ್ಷೆ ಪ್ರಕಟಿಸಲಾಯ್ತು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 2015 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿದ್ದ ಕೆಂಪರಾಜ್ ರವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಸಾಮಾಜಿಕ ಆರ್ಥಿಕ ಸಮೀಕ್ಷೆ ಹೆಸರಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಮಾಡಿಸಲಾಯ್ತು. ಆಗಲೇ ಈ ಜಾತಿಗಣತಿ ಸಮೀಕ್ಷೆಗೆ ಪ್ರಬಲ ಸಮುದಾಯದ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಶಾಮನೂರು ಶಿವಶಂಕರಪ್ಪನವರಂತಹ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಹಾಗೂ ಲಿಂಗಾಯತ ಜಾತಿಯ ಪ್ರಬಲ ನಾಯಕರು ಬಹಿರಂಗವಾಗಿಯೇ ಈ ಸಮೀಕ್ಷೆಯನ್ನು ತಮ್ಮ ಜಾತಿ ಸಮಾವೇಶಗಳಲ್ಲಿ ವಿರೋಧಿಸಿದ್ದರು. ಅಷ್ಟರಲ್ಲಿ ಕೆಲವು ಊಹಾಪೋಹದ ಅಂಕಿ ಸಂಖ್ಯೆಗಳು ಸೋರಿಕೆಯಾಗಿ ಅವು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿದವು.

ಸಮೀಕ್ಷೆ ಮುಗಿದು ವರದಿ ಸಲ್ಲಿಕೆ ಆಗುವುದರೊಳಗೆ ಕಾಂಗ್ರೆಸ್ ಸರಕಾರವೇ ಪತನವಾಗಿತ್ತು. ನಂತರ ಬಂದ ಸರಕಾರಗಳು ಕೆಂಪರಾಜ್ ರವರ ಸಮೀಕ್ಷಾ ವರದಿಯನ್ನು ನಿರ್ಲಕ್ಷಿಸಿದವು. ಮತ್ತೆ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ಆಯ್ಕೆಯಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆದಾಗ ಕೆಂಪರಾಜ್ ವರದಿಗೆ ಮತ್ತೆ ಜೀವ ಬಂದಿತು. ಕೆಳ ತಳ ಸಮುದಾಯಗಳ ನಾಯಕರುಗಳು ಜಾತಿಗಣತಿ ಮಂಡನೆ ಆಗಲೇ ಬೇಕೆಂದು ಒತ್ತಾಯಿಸತೊಡಗಿದರು. ಆದರೆ ಎಲ್ಲಾ ಪಕ್ಷದೊಳಗಿನ ಪ್ರಬಲ ಜಾತಿಯ ನಾಯಕರು ವಿರೋಧಿಸ ತೊಡಗಿದರು. ವಿರೋಧಕ್ಕೆ ಇಲ್ಲಸಲ್ಲದ ಸಮರ್ಥನೆಗಳನ್ನು ಕೊಡತೊಡಗಿದರು.

ಜಾತಿ ವಿನಾಶ ಆಗಬೇಕೆಂಬುದು ಅಂಬೇಡ್ಕರ್ ರವರ ಹಾಗೂ ಸಂವಿಧಾನದ ಆಶಯ. ಹೀಗಿರುವಾಗ ಜಾತಿಗಣತಿ ಯಾಕೆ ಬೇಕು? ಎಂಬುದು ಕೆಲವರ ಪ್ರಶ್ನೆ. ಆದರೆ ಈ ದೇಶದಲ್ಲಿ ಜಾತಿ ಎಂಬುದು ನಿರಾಕರಿಸಲಾಗದ ಸತ್ಯ. ಎಲ್ಲಿಯವರೆಗೂ ಜಾತಿವಿನಾಶ ಆಗಿ “ಮನುಜ ಕುಲಂ ಒಂದೇ ವಲಂ” ಆಗುವುದಿಲ್ಲವೋ ಅಲ್ಲಿಯವರೆಗೂ ಶೋಷಿತ ಜಾತಿ, ದುರ್ಬಲ ವರ್ಗ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ, ಅನುಕೂಲಗಳು ಹಂಚಿಕೆಯಾಗಬೇಕು. ಇದೇ ಸಾಮಾಜಿಕ ನ್ಯಾಯ. ಆದರೆ ಜಾತಿಗ್ರಸ್ಥ ಮೇಲ್ಜಾತಿ ವರ್ಗದವರು ಈಗ ಬಳಸಿಕೊಳ್ಳುತ್ತಿರುವ ಸರಕಾರಿ ಸವಲತ್ತುಗಳು ಹಾಗೂ ಯೋಜನೆಗಳ ಪ್ರಯೋಜನೆಗಳನ್ನು ಶೋಷಿತ ಜಾತಿ ಸಮುದಾಯಗಳಿಗೆ ಬಿಟ್ಟು ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿ ಜನಾಂಗದ ನಾಯಕರುಗಳು, ಮಠಪೀಠಗಳ ಸ್ವಾಮಿಗಳು ಜಾತಿವಾದಿಗಳಾಗಿ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ.

ಆದರೆ ನೇರವಾಗಿ ವಿರೋಧಿಸಿದರೆ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಹಾಗೂ ಅದರ ಪರಿಣಾಮವನ್ನು ಚುನಾವಣೆಗಳಲ್ಲಿ ಅನುಭವಿಸಬೇಕಾಗುತ್ತದೆ ಎನ್ನುವ ಆತಂಕದಿಂದ ಬಹಿರಂಗವಾಗಿ ಜಾತಿಗಣತಿ ಬೇಡವೇ ಬೇಡ ಎಂದು ಹೇಳಲಾಗದೆ ವೈಜ್ಞಾನಿಕವಾಗಿ ಗಣತಿ ಮಾಡಲಾಗಿಲ್ಲ, ದತ್ತಾಂಶಗಳು ಸರಿಯಾಗಿಲ್ಲ ಎಂದೆಲ್ಲಾ ನೆಪಗಳನ್ನು ಹೇಳುವ ಮೂಲಕ ಹೇಗಾದರೂ ಮಾಡಿ ಜಾತಿಗಣತಿ ಮಂಡನೆ ಆಗದ ಹಾಗೆ ಮಾಡುವ ಪ್ರಯತ್ನಗಳು ಸ್ವಪಕ್ಷೀಯ ಹಾಗೂ ಪ್ರತಿಪಕ್ಷಗಳಲ್ಲಿರುವ ಜಾತಿವಾದಿ ನಾಯಕರುಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಇಂತಹ ಪ್ರಬಲ ಜಾತಿಯವರ ಪ್ರತಿರೋಧದಿಂದಾಗಿಯೇ 1931 ನೇ ಇಸವಿಯಿಂದ ಇಲ್ಲಿಯವರೆಗೂ ಈ ದೇಶದಲ್ಲಿ ಒಮ್ಮೆಯೂ ಸಂಪೂರ್ಣವಾಗಿ ಜಾತಿಗಣತಿ ನಡೆಯಲೇ ಇಲ್ಲ. 1871-72 ರಲ್ಲಿ ಬ್ರಿಟಿಷರು ಜಾತಿ ಆಧಾರಿತ ಗಣತಿಯನ್ನು ಭಾರತದಲ್ಲಿ ಆರಂಭಿಸಿದ್ದರು. 1931 ರಲ್ಲಿ ದಾಖಲಾದ ಜಾತಿಗಣತಿಯೇ ಕೊನೆಯದು. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಾದ್ಯಂತ ಜಾತಿಗಣತಿ ಸಮೀಕ್ಷೆ ಮಾಡಿಸುವ ಸಾಹಸಕ್ಕೆ ಯಾವ ಸರಕಾರಗಳೂ ಮುಂದಾಗಲಿಲ್ಲ. 2011 ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಜಾತಿಗಣತಿ ಮಾಡಿಸಿದರೂ ಅದನ್ನು ಮಂಡಿಸಲು ಸ್ವಪಕ್ಷೀಯರೇ ಬಿಡಲಿಲ್ಲ.

ಸಂವಿಧಾನದ 1948 ರ ಕಾಯಿದೆಯ ಪ್ರಕಾರ ಜನಗಣತಿ ಹಾಗೂ ಜಾತಿಗಣತಿ ಸಮೀಕ್ಷೆ ಮಾಡಿಸುವುದು ಕೇಂದ್ರ ಸರಕಾರದ ವಿಶೇಷಾಧಿಕಾರ. ರಾಜ್ಯ ಸರಕಾರಗಳಿಗೆ ಸ್ವತಂತ್ರವಾಗಿ ಸಮೀಕ್ಷೆ ನಡೆಸಲು ಕಾನೂನಾತ್ಮಕ ಅಧಿಕಾರವಿಲ್ಲ. ಹೀಗಾಗಿ ಬಿಹಾರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ  ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯ ಹೆಸರಲ್ಲಿ ಜಾತಿಗಣತಿಯನ್ನು ನಡೆಸಲಾಗಿದೆ. ಆದರೆ ರಾಜ್ಯ ಸರಕಾರಗಳು ನಡೆಸಿರುವ ಇಂತಹ ಸಮೀಕ್ಷೆಗಳನ್ನೇ ಪ್ರಧಾನಿ ಮೋದಿಯವರು ಕಟು ಮಾತುಗಳಲ್ಲಿ ವಿರೋಧಿಸಿದ್ದರು. “ಇದು ದೇಶವನ್ನು ಒಡೆಯುವ ಪ್ರಯತ್ನ, ರಾಷ್ಟ್ರೀಯ ಏಕತೆಗೆ ಧಕ್ಕೆ” ಎಂದು ತಮ್ಮ ವಿರೋಧಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದರು. ಸಾಮಾಜಿಕ ನ್ಯಾಯದ ವಿರೋಧಿಗಳು ಹಾಗೂ ಯಥಾಸ್ಥಿತಿವಾದಿಗಳು “ಜಾತಿಗಣತಿಯು ಜಾತಿವಾದವನ್ನು ಉತ್ತೇಜಿಸುತ್ತದೆ, ರಾಜಕೀಯ ಪಕ್ಷಗಳ ಮತಬ್ಯಾಂಕ್ ಸೃಷ್ಟಿಗಾಗಿ ದುರುಯೋಗವಾಗುತ್ತದೆ, ಸಾಮಾಜಿಕ ಸಮಾನತೆಗೆ ಅಡ್ಡಿಯಾಗುತ್ತದೆ, ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ” ಎಂಬ ವಾದವನ್ನು ಮುಂದಿಡುತ್ತಾರೆ.

ಹಾಗಾದರೆ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳದೇ ಯಾವ ಮಾನದಂಡದಲ್ಲಿ ಸರಕಾರಿ ನೀತಿಗಳನ್ನು ರೂಪಿಸುವುದು? ಯೋಜನೆಗಳ ಸೌಲಭ್ಯಗಳನ್ನು ಹಂಚಿಕೆ ಮಾಡುವುದು? ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವುದು? ಜಾತಿಗಣತಿಯ ಉದ್ದೇಶವೇ ಹಿಂದುಳಿದ ಜಾತಿ ಸಮುದಾಯಗಳ ಜನಸಂಖ್ಯೆ ಆಧರಿಸಿ ಸೂಕ್ತ ಮೀಸಲಾತಿಯನ್ನು ಹಂಚಿಕೆ ಮಾಡುವುದಾಗಿದೆ. ಸರಕಾರಿ ಯೋಜನೆಗಳ ಸೌಲಭ್ಯಗಳನ್ನು ಶೋಷಿತ ಸಮುದಾಯಗಳಿಗೆ ಹಂಚಿಕೆ ಮಾಡುವುದಾಗಿದೆ. ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗಗಳಲ್ಲಿ ಪಾಲು ನೀಡುವುದಾಗಿದೆ, ದುರ್ಬಲ ವರ್ಗದವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದಾಗಿದೆ. ಸಾಮಾಜಿಕ ರಚನೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾಗಿದೆ.

ಆದರೆ ಈ ರೀತಿ ಆಗುವುದು ಸಕಲ ಸವಲತ್ತು ಸಂಪನ್ಮೂಲಗಳಲ್ಲಿ ಸಿಂಹಪಾಲನ್ನು ಪಡೆದಿರುವ ಹಾಗೂ ಪಡೆಯುತ್ತಿರುವ ಪ್ರಬಲ ಜಾತಿ ಜನಾಂಗದ ನಾಯಕರುಗಳಿಗೆ ಹಾಗೂ ಆಯಾ ಜಾತಿಗಳ ಮಠಮಾನ್ಯರಿಗೆ ಬೇಕಾಗಿಲ್ಲ. ಆದ್ದರಿಂದ ಜಾತಿಗಣತಿಯನ್ನು ಇವರು ಒಪ್ಪುವುದಿಲ್ಲ. “ಶತಾಯ ಗತಾಯ ಜಾತಿಗಣತಿ ಆಗಬಾರದು, ಸವಲತ್ತು ಸಂಪನ್ಮೂಲಗಳು ಜಾತಿಜನಸಂಖ್ಯೆಗಳ ಆಧಾರದಲ್ಲಿ ಹಂಚಿಕೆ ಆಗಬಾರದು, ಉನ್ನತ ಶಿಕ್ಷಣ ಹಾಗೂ ವೈಟ್ ಕಾಲರ್ ಉದ್ಯೋಗಗಳು ಪ್ರಬಲ ಜಾತಿಯವರ ಪಾಲಾಗಬೇಕು. ಕೆಳ ತಳ ಸಮುದಾಯಗಳು ಉನ್ನತ ಶಿಕ್ಷಣ ಪಡೆಯಲಾಗದೆ ಪೌರಕಾರ್ಮಿಕರೋ ಇಲ್ಲಾ ಅಸಂಘಟಿತ ಕೂಲಿಕಾರ್ಮಿಕರಾಗಿ ಉಳ್ಳವರ ಸೇವೆ ಮಾಡಿಕೊಂಡೇ ಬಿದ್ದಿರಬೇಕು”. ಅದಕ್ಕಾಗಿಯೇ ಜಾತಿಗಣತಿಗೆ ಸ್ವಾತಂತ್ರ್ಯಾನಂತರದಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಇದೀಗ ಕರ್ನಾಟಕದಲ್ಲಿ ಹೇಗಾದರೂ ಮಾಡಿ ಜಾತಿಗಣತಿಯ ಮಂಡನೆಯನ್ನು ತಡೆಯುವ ಪ್ರಯತ್ನ ಮುಂದುವರೆದಿದೆ.

ಬಿಜೆಪಿ ಪಕ್ಷದವರ ಸಂಕಟ ಮತಾಂಧತೆಯದ್ದಾಗಿದೆ. ಜಾತಿಗಣತಿ ಸಮೀಕ್ಷೆ ಬಹಿರಂಗವಾದರೆ ಎಲ್ಲಿ ಮುಸ್ಲಿಂ ಸಮುದಾಯದವರ ಜನಸಂಖ್ಯೆ ಹೆಚ್ಚಾಗುತ್ತದೋ, ಎಲ್ಲಿ ಹಿಂದೂಗಳ ಪಾಲನ್ನು ಮುಸಲ್ಮಾನರ ಜೊತೆ ಹಂಚಿಕೊಳ್ಳಬೇಕಾಗುತ್ತದೋ, ಸರಕಾರಿ ಸವಲತ್ತುಗಳನ್ನು ಬಳಸಿಕೊಂಡು ಎಲ್ಲಿ ಆರ್ಥಿಕವಾಗಿ ಮುಸಲ್ಮಾನರು ಸಬಲರಾಗಿ ಹಿಂದುತ್ವಕ್ಕೆ ಧಕ್ಕೆ ತರುತ್ತಾರೋ ಎನ್ನುವುದು ಮನುವಾದಿ ಬಿಜೆಪಿಗರ ಆತಂಕ. ಅದರ ಜೊತೆಗೆ ಬಿಜೆಪಿ  ಹಾಗೂ ಅದರ ಮಾತೃಸಂಸ್ಥೆ ಆರೆಸ್ಸೆಸ್ ಚಾತುರ್ವರ್ಣ್ಯ ಮನುವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ದಲಿತ ಶೂದ್ರ ಆದಿವಾಸಿಗಳ ಜನಸಂಖ್ಯೆ ಪ್ರಮಾಣ ಹೆಚ್ಚಾಗಿದ್ದು ಜಾತಿಗಣತಿಯ ಮೂಲಕ ಬಹಿರಂಗವಾದರೆ ಹಿಂದುತ್ವವಾದಿ ವೈದಿಕಶಾಹಿಗಳ ಹಿತಾಸಕ್ತಿಗೆ ಧಕ್ಕೆ ಬರುತ್ತದೆ. ದಲಿತ ಶೂದ್ರ ಸಮುದಾಯದವರು ಮೀಸಲಾತಿ ಪಡೆದು, ಉಚಿತ ಉನ್ನತ ಶಿಕ್ಷಣ ಗಳಿಸಿ ಉತ್ತಮ ಉದ್ಯೋಗಗಳನ್ನು ಪಡೆದು ಮೇಲ್ಜಾತಿಗಳ ಸಮಸಮನಾಗಿ ಬೆಳೆದು ಸವಾಲು ಹಾಕಿದರೆ ಅದು ಶ್ರೇಣಿಕೃತ ಸಮಾಜದ ರಚನೆಗೆ ಅಪಾಯಕಾರಿಯಾಗುವಂತಹುದು. ಹೀಗಾಗಿ ಬಿಜೆಪಿಯಾಗಲಿ ಅದರ ಸೂತ್ರ ಹಿಡಿದಿರುವ ಸಂಘ ಹಾಗೂ ಅದರ ಪರಿವಾರಿಗರು ಜಾತಿಗಣತಿಯನ್ನು ಆಂತರ್ಯದಲ್ಲಿ ಪ್ರಬಲವಾಗಿ ವಿರೋಧಿಸುತ್ತಾರೆ. ಬಹಿರಂಗದಲ್ಲಿ ಸಾಮಾಜಿಕ ನ್ಯಾಯದ ಮಾತನ್ನೂ ಉಚ್ಚರಿಸುತ್ತಾರೆ. ಜಾತಿಗಣತಿ ಬೇಕು ಆದರೆ ಅದು ವೈಜ್ಞಾನಿಕವಾಗಿರಬೇಕು ಎನ್ನುತ್ತಾರೆ. ಅದೆಷ್ಟೇ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿದರೂ ಸರಿಯಾದ ಸಮೀಕ್ಷೆ ಮಾಡಲಾಗಿಲ್ಲ ಎಂದು ಆರೋಪ ಮಾಡಿ ಜನಗಣತಿ ಮಂಡನೆ ಆಗದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೂ ಜಾತಿಗಣತಿಯ ವಿರುದ್ಧ ಲಿಂಗಾಯತ, ಒಕ್ಕಲಿಗರಂತಹ ಪ್ರಬಲ ಜಾತಿಯವರನ್ನು ಎತ್ತಿ ಕಟ್ಟುವ ಹುನ್ನಾರವನ್ನೂ ಮಾಡಲಾಗುತ್ತಿದೆ.

ಹೋಗಲಿ, ಈ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅದಕ್ಕೆ ಜಾತಿಗಣತಿ ಮಾಡಿಸಲಾಗಿಲ್ಲ, ಮಾಡಿಸಿದ್ದರೂ ಅದು ಸಮರ್ಪಕವಾಗಿರಲಿಲ್ಲ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ವಾಜಪೇಯಿ ನೇತೃತ್ವದ ಸರಕಾರ ಹಾಗೂ ಮೋದಿ ನಾಯಕತ್ವದ ಸರಕಾರ 15 ವರ್ಷಗಳ ಕಾಲ ಈ ದೇಶವನ್ನು ಆಳಿವೆ ಹಾಗೂ ಈಗಲೂ ಆಳುತ್ತಿವೆ. ಹಾಗಾದರೆ ಯಾಕೆ ಇಲ್ಲಿಯವರೆಗೂ ಜಾತಿಗಣತಿ ಸಮೀಕ್ಷೆ ಮಾಡಿಸುವ ಕನಿಷ್ಠ ಪ್ರಯತ್ನವನ್ನೂ ಬಿಜೆಪಿ ನೇತೃತ್ವದ ಸರಕಾರ ಮಾಡಿಲ್ಲ?. ಕರ್ನಾಟಕದಲ್ಲೂ ಬಿಜೆಪಿ ನೇತೃತ್ವದ ಸರಕಾರ ಇತ್ತಲ್ವಾ, ಆಗಲಾದರೂ ವೈಜ್ಞಾನಿಕವಾಗಿ ಜಾತಿಗಣತಿ ಸಮೀಕ್ಷೆ ಮಾಡಿಸಿ ಎಲ್ಲಾ ಜಾತಿಜನಾಂಗಗಳಿಗೂ ಜನಸಂಖ್ಯೆ ಆಧರಿಸಿ ಸಾಮಾಜಿಕ ನ್ಯಾಯವನ್ನು ಹಂಚಿಕೆ ಮಾಡಬಹುದಾಗಿತ್ತಲ್ವಾ? ಯಾಕೆ ಮಾಡಲಾಗಿಲ್ಲ? ಹೋಗಲಿ ರಾಜ್ಯದ ಬಿಜೆಪಿ ಪಕ್ಷದವರು ಹಾಗೂ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಅವರು ಅಂದುಕೊಂಡಂತೆ ಅತ್ಯಂತ ವೈಜ್ಞಾನಿಕವಾಗಿಯೇ ದೇಶಾದ್ಯಂತ ಜಾತಿಗಣತಿ ಸಮೀಕ್ಷೆ ಮಾಡಿಸಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತರಲಿ ಬೇಡ ಎನ್ನುವವರು ಯಾರು? ಹತ್ತು ವರ್ಷಕ್ಕೊಮ್ಮೆ ಕೇಂದ್ರ ಸರಕಾರ ಜನಗಣತಿ ಮಾಡಿಸಬೇಕೆಂದು ಸಂವಿಧಾನವೇ ಹೇಳುತ್ತದೆ. ಹದಿಮೂರು ವರ್ಷ ಕಳೆದರೂ ಇನ್ನೂ ಜನಗಣತಿಯನ್ನೇ ಮಾಡಿಸಲಾಗದ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಜಾತಿಗಣತಿ ಮಾಡಿಸಲು ಸಾಧ್ಯವೇ?

ಹೋಗಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಯತ್ನವನ್ನಾದರೂ ಮಾಡಿದೆಯಲ್ಲಾ.‌ ಬಿಜೆಪಿ ಆಡಳಿತದ ಯಾವ ಸರಕಾರಗಳೂ ಮಾಡಲಾಗದ ಜಾತಿಯಾಧಾರಿತ ದತ್ತಾಂಶವನ್ನು ಸಂಗ್ರಹಿಸಿದೆಯಲ್ಲಾ, ಅದನ್ನಾದರೂ ಮಂಡನೆ ಮಾಡಲು ವಿರೋಧ ಯಾಕೆ? ಆಯ್ತು. ಶೇಕಡಾ ಹತ್ತರಷ್ಟು ತಪ್ಪು ಮಾಹಿತಿಗಳೇ ಇವೆ ಎಂದೇ ನಂಬೋಣ. ಇನ್ನು ಸ್ವಲ್ಪ ಜನರು ಗಣತಿಯ ವ್ಯಾಪ್ತಿಗೆ ದಕ್ಕಿಲ್ಲವೆಂದೇ ಅಂಬೋಣ. ಅದಕ್ಕಾಗಿ 165 ಕೋಟಿ ರೂಪಾಯಿಗಳಷ್ಟು ಹಣವನ್ನು ವ್ಯಯಿಸಿ, ಸಹಸ್ರಾರು ಜನರು ಶ್ರಮವಹಿಸಿ ಸಂಗ್ರಹಿಸಿದ ದತ್ತಾಂಶದ ಸಮೀಕ್ಷೆಯನ್ನು ಯಾಕೆ ಸಾರಾಸಗಟಾಗಿ ತಳ್ಳಿ ಹಾಕುವುದು?. ದೇವನೂರು ಮಹಾದೇವ ಅವರು ಹೇಳಿರುವಂತೆ ಬಿಟ್ಟು ಹೋಗಿರುವ ಜಾತಿಗಳ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ಜಾತಿ ಸಮೀಕ್ಷೆ ವರದಿಯನ್ನು ಒಪ್ಪಿಕೊಳ್ಳ ಬಹುದು. ಆದರೆ ಪರ ವಿರೋಧದ ಗೊಂದಲಗಳನ್ನು ಸೃಷ್ಟಿಸಿ ಜಾತಿಗಣತಿ ವರದಿಯನ್ನೇ ತಿರಸ್ಕರಿಸಿ ಎನ್ನುವುದು ಅಕ್ಷಮ್ಯ.

ರಾಜಕೀಯ ಕಾರಣ ಅಕಾರಣಗಳು ಏನೇ ಇರಲಿ, ದೇಶಾದ್ಯಂತ  ಜಾತಿಗಣತಿ ಆಗಲೇ ಬೇಕಿದೆ. ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿ ಸಕಲ ಅವಕಾಶಗಳು, ಸರಕಾರಿ ಯೋಜನೆಗಳು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಎಲ್ಲವೂ ಜಾತಿವಾರು ಹಂಚಿಕೆಯಾಗಲೇ ಬೇಕಿದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರು ಮುಂದೆ ಬರಬೇಕಿದೆ. ಸಾಮಾಜಿಕ ನ್ಯಾಯ ಎಲ್ಲರ ಹಕ್ಕಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲಾದರೂ ಜಾತಿಗಣತಿ ವರದಿ ಜಾರಿಯಾಗಬೇಕಿದೆ. ಲೋಪ ದೋಷ ನ್ಯೂನತೆಗಳಿದ್ದರೆ ಸರಿಪಡಿಸಬಹುದಾಗಿದೆ. ಪ್ರಬಲ ಜಾತ್ಯಸ್ತರ ವಿರೋಧವನ್ನು ಕೆಳ ತಳ ಹಿಂದುಳಿದ ಜಾತಿ ಜನಾಂಗದವರು ತೀವ್ರವಾಗಿ ವಿರೋಧಿಸಲೇ ಬೇಕಿದೆ. ಸಾಮಾಜಿಕ ನ್ಯಾಯ ಎನ್ನುವುದು ಸುಮ್ಮನೇ ದಕ್ಕುವುದಲ್ಲ, ಅದು ಶೋಷಿತ ಸಮುದಾಯಗಳ ಹಕ್ಕೂ ಆಗಿದೆ. ಕೊಡದೇ ಇದ್ದರೆ ಹೋರಾಟಗಳಿಂದಾದರೂ ಕಿತ್ತುಕೊಳ್ಳಬೇಕಿದೆ. ಜಾತಿಗಣತಿ ಮಂಡನೆಯಾಗುವ ಮುನ್ನವೇ ಖಂಡನೆ ಮಾಡುವ ಜಾತಿಗ್ರಸ್ಥ ಪ್ರಬಲ ಜಾತಿಯ ನಾಯಕರು ಹಾಗೂ ಆ ಜಾತಿ ಮಠ ಪೀಠದವರ ವಿರುದ್ಧ ಶೋಷಿತ ಜಾತಿ ವರ್ಗದವರು ಸಂಘಟಿತ ಹೋರಾಟವನ್ನು ರೂಪಿಸಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಸಮಕಾಲೀನ ರಾಜಕಾರಣದ ಜಿಜ್ಞಾಸೆಗೆ ರಂಗರೂಪ : ಅಶ್ವತ್ಥಾಮ ನಾಟ್‍ಔಟ್

More articles

Latest article