ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಿ; ಸಚಿವ ಕುಮಾರಸ್ವಾಮಿ ಪತ್ರ

Most read

ರಾಮನಗರ: ಬಿಡದಿಯ ಕೇತಗಾನಹಳ್ಳಿಯಲ್ಲಿ ಕಾನೂನು ಬಾಹಿರವಾಗಿ ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಈ ಮನವಿ ಮಾಡಿಕೊಂಡಿದ್ದಾರೆ.

ಬಿಡದಿಯ ಕೇತಗಾನಹಳ್ಳಿ ಸರ್ವೆ ನಂಬರ್ 7ರಲ್ಲಿ 5 ಎಕರೆ 20 ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ಗುರುತಿಸಿ ಹುಡುಕಿಕೊಡುವಂತೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  “ರಾಮನಗರ ತಾಲೂಕು ಬಿಡದಿ ಹೋಬಳಿಯ ಕೀತಿಗಾನಹಳ್ಳಿ ಗ್ರಾಮದ ಸರ್ವೇ ನಂ. 7,8,9,10,16,17 ಮತ್ತು 79ರಲ್ಲಿ ಭೂ ಒತ್ತುವರಿ ಆಗಿದ್ದರೆ ಸರ್ವೇ ನಡೆಸಿ ವರದಿ ನೀಡುವಂತೆ ರಾಜ್ಯ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿಯಷ್ಟೇ. ಘನ ನ್ಯಾಯಾಲಯದ ಸೂಚನೆಯಂತೆ ತಮ್ಮ ಸಮೀಕ್ಷಾ ತಂಡ ದಿನಾಂಕ 18-02-2025ರ ಮಂಗಳವಾರ ಮೇಲ್ಕಂಡ ಎಲ್ಲಾ ಸರ್ವೇ ನಂ.ಗಳು ಸೇರಿದಂತೆ ನಾನು ಅನುಭವದಲ್ಲಿರುವ ಸರ್ವೇ ನಂ. 7-8ರಲ್ಲಿಯೂ ಸರ್ವೇ ನಡೆಸಲಾಗಿದೆ. ಸರ್ವೇ ನಂ.7-8ರಲ್ಲಿ ಮಾತ್ರ ನಾನು ಪಹಣಿ ದಾಖಲೆ ಹೊಂದಿದ್ದು, ಸರ್ವೇ ನಂ.7ರಲ್ಲಿ 5.20 ಎ/ಗುಂಟೆ ಜಮೀನನ್ನು ಕೇತಿಗಾನಹಳ್ಳಿ ಗ್ರಾಮದ ಕಂವೀರಯ್ಯ, ದೇವರಾಜು, ದೊಡ್ಡಯ್ಯ, ಸಾವಿತ್ರಮ್ಮ ಕೋಮ್ ಹನುಮೇಗೌಡ, ದೇವರಾಜು ಅವರಿಂದ ಖರೀದಿ ಮಾಡಿದ್ದು, ಆ ಪೈಕಿ ಕೇವಲ 1.15 ಎ/ಗುಂಟೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ತಾವುಗಳು ಹುಡುಕಿಕೊಡಬೇಕಾಗಿ ವಿನಂತಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇತಿಗಾನಹಳ್ಳಿ ಗ್ರಾಮದ ಸರ್ವೇ ನಂ. 8ರಲ್ಲಿ ಗೇರುವಪ್ಪ ಬಿನ್ ಕವನಯ್ಯ ಹಾಗೂ ಇತರರು, ಸಾವಿತ್ರಮ್ಮ ಹನುಮೇಗೌಡ, ದೊಡ್ಡಯ್ಯ ಬಿನ್ ಕೆಂಚಪ್ಪ ಗಂಗಪ್ಪ ಬಿನ್ ಬಸಪ್ಪ, ಗೋವಿಂದಯ್ಯ ಅವರುಗಳಿಂದ 8.17 ಎ/ಗುಂಟೆ ಜಮೀನನ್ನು ಖರೀದಿ ಮಾಡಿರುತ್ತೇನೆ. ಪಹಣಿ ದಾಖಲೆ ಪ್ರಕಾರವೂ 8.17 ಎ/ಗುಂಟೆ ಜಮೀನು ನನ್ನ ಅನುಭವದಲ್ಲಿದ್ದು, ನನಗೆ ಆ ಜಮೀನಿನ ಹಕ್ಕು ಕ್ರಯ ಮತ್ತು ದಾನದ ಮೂಲಕ ದೊರೆತಿರುತ್ತದೆ. ಅಂದಿನಿಂದಲೂ ಸದರಿ ಜಮೀನಿನಲ್ಲಿ ಸ್ವತಃ ನಾನೇ ಅನುಭವದಲ್ಲಿರುತ್ತೇನೆ. ಇದಿಷ್ಟು ಜಮೀನನ್ನು ಮೀರಿ ಯಾವುದೇ ಹೆಚ್ಚುವರಿ ಜಮೀನು ಕಾನೂನುಬಾಹಿರವಾಗಿ ನನ್ನ ಅನುಭವದಲ್ಲಿದ್ದರೆ ಅದನ್ನು ನೀವು ಕಾನೂನು ಪ್ರಕಾರ ವಶಕ್ಕೆ ತೆಗೆದುಕೊಳ್ಳಬಹುದು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

More articles

Latest article