ನವದೆಹಲಿ: ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ ಎಂದು ರಾಯಿಟರ್ಸ್ ಸಂಸ್ಥೆ ವರದಿ ಮಾಡಿದೆ.
ರೂ. 72,237 ಕೋಟಿ ಲಂಚದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್ ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್ ಸಲ್ಲಿಸಿದ್ದರು. ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪವು ಇವರ ಮೇಲಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ 75 ಸಾವಿರ ಕೋಟಿ ಸಂಗ್ರಹಿಸುವ ಬಾಂಡ್ ಬಿಡುಗಡೆ ಮಾಡುವ ಪ್ರಸ್ತಾವನೆಯಿಂದ ಅದಾನಿ ಗ್ರೀನ್ ಕಂಪನಿ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ.
ಆದರೆ ಗೌತಮ್ ಅದಾನಿ ಸೇರಿದಂತೆ ತನ್ನ ನಿರ್ದೇಶಕರ ವಿರುದ್ಧ ಅಮೆರಿಕ ನ್ಯಾಯ ಮತ್ತು ಭದ್ರತೆ ಹಾಗೂ ವಿನಿಮಯ ಆಯೋಗವು ಆಪಾದಿಸಿರುವ ವಂಚನೆ ಹಾಗೂ ಲಂಚ ಆರೋಪ ಸುಳ್ಳುಎಂದು ಅದಾನಿ ಗ್ರೀನ್ ಸ್ಪಷ್ಟನೆ ನೀಡಿದೆ. ಕಂಪನಿ ನಿರ್ದೇಶಕರ ಮೇಲಿನ ಆರೋಪಗಳು ಆಧಾರ ರಹಿತವಾಗಿವೆ. ಅವುಗಳನ್ನು ನಿರ್ಲಕ್ಷಿಸಬೇಕು ಎಂದು ಹೇಳಿದ್ದು ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದೆ.
ಇವುಗಳು ಕೇವಲ ಆರೋಪಗಳಾಗಿದ್ದು, ಸಾಬೀತಾಗದ ಹೊರತು ಅವರನ್ನು ನಿರಪರಾಧಿಗಳೆಂದು ಭಾವಿಸಲಾಗುತ್ತದೆ ಎಂದು ಅಮೆರಿಕ ನ್ಯಾಯ ಇಲಾಖೆಯ ಹೇಳಿಕೆಯನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಅದಾನಿ ಸಮೂಹವು ಆಡಳಿತ, ಪಾರದರ್ಶಕತೆ ಮತ್ತು ನಿಯಂತ್ರಣಗಳ ಉನ್ನತ ಮಾನದಂಡಗಳನ್ನು ಸದಾ ಕಾಪಾಡಿಕೊಂಡು ಬಂದಿದೆ. ನಮ್ಮದು ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಎಲ್ಲಾ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ ಎಂದು ನಮ್ಮ ಪಾಲುದಾರರಿಗೆ, ಉದ್ಯೋಗಿಗಳಿಗೆ ಭರವಸೆ ನೀಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರವಾಲ್ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಲೋತ್ರಾ ಮತ್ತು ಸೌರಬ್ ಅಗರವಾಲ್ ಅವರು ಲಂಚ ನೀಡಿರುವುದು ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.