ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಇಳಿಕೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY)ಯ ಫಲಾನುಭವಿಗಳಿಗೆ 2024-25 ರ ಅಂತ್ಯದವರೆಗೆ 14.2 ಕೆಜಿ ಸಿಲಿಂಡರ್‌ಗೆ 300 ರೂಪಾಯಿ ಅಡುಗೆ ಅನಿಲ ಸಬ್ಸಿಡಿಯನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಲು ಕೇಂದ್ರವು ಅನುಮೋದನೆ ನೀಡಿದ ಒಂದು ದಿನದ ನಂತರ ಮೋದಿ ಬೆಲೆಯಲ್ಲಿ ಕಡಿತ ಮಾಡಿದ ಘೋಷಣೆಯನ್ನು ಮಾಡಿದ್ದಾರೆ.
ಸಿಲಿಂಡರ್ ಬೆಲೆ ಕಡಿತ ಕುರಿತಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಮಹಿಳಾ ದಿನಾವಣೆಯ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಇದರಿಂದ ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯೂ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ, ಗ್ಯಾಸ್ ಸಿಲಿಂಡರ್ ದರವನ್ನು ಕೈಗೆಟುಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಇದು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಈಸ್ ಆಫ್ ಲಿವಿಂಗ್ ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.