ನೌಟಂಕಿ ಬೀಸಿದ ಮಾಯಾಜಾಲದಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ದೇಶಪ್ರೇಮವೆಂಬ ಪೈನ್ ಕಿಲ್ಲರ್ ತಗೊಂಡಾಗಿದೆ. ಈಗ ಬೆಲೆ ಎಷ್ಟು ಏರಿದರೂ ನೋವಿನ ಅರಿವು ಆಗುತ್ತಿಲ್ಲ. ಆದರೆ ನೋವು ನಿವಾರಕದ ಅತಿಯಾದ ಬಳಕೆ ಕಿಡ್ನಿಯನ್ನು ಹಾನಿಗೊಳ ಪಡಿಸುತ್ತದೆ ಎಚ್ಚರವಿರಲಿ ವೃಂದಾ ಹೆಗ್ಡೆ, ಉಪನ್ಯಾಸಕರು.
ಬೆಲೆ ಏರಿಕೆ ಎಂಬುದು ಒಂದು ಸ್ಥಾಯೀಭಾವ. ಯಾವಾಗಲೂ ಬೆಲೆಏರಿಕೆ, ಹಣದುಬ್ಬರ ಈ ಎರಡು ಶಬ್ದಗಳಿಗೆ ವೃತ್ತಪತ್ರಿಕೆಗಳಲ್ಲಿ ಖಾಯಂಸ್ಥಾನ. ರಾಮ ರಾಜ್ಯ (!?) (Welfare state) ಕಲ್ಪನೆಯಲ್ಲಿ ಪ್ರಜೆಗಳ ವರಮಾನ ಜಾಸ್ತಿಯಾಗಿ ನಂತರ ಸಮಾನಾಂತರವಾಗಿ ಬೆಲೆ ಏರಿಕೆಯಾಗುವುದು. ಆದರೆ ‘ರಾಮರಾಜ್ಯ’ ಎಂಬುದು ತನ್ನ ಅರ್ಥವನ್ನು ಬದಲಾಯಿಸಿಕೊಂಡು ಯಾವುದೋ ಕಾಲವಾಯಿತು ಬಿಡಿ. ನಿಜಾರ್ಥದ ಅರ್ಥಶಾಸ್ತ್ರೀಯ ಕಾರ್ಲ್ ಮಾರ್ಕ್ಸ್‌ನ ವೆಲ್ಫೇರ್ ಸ್ಟೇಟ್ ಕೂಡಾ ಯೂಟೋಪಿಯಾನೇ ಆಗಿದೆ. ಮೊದಲು ಬೆಲೆ ಏರಿ ಅದರ ಝಳ ಜನರಿಗೆ ತಾಗಿ ಅವರು ಬೊಬ್ಬೆ ಹೊಡೆಯುವವರೆಗೆ ಪ್ರಭುತ್ವ ವರಮಾನ ಏರಿಕೆಯನ್ನು ಮುಂದೂಡುತ್ತಾ ಹೋಗುತ್ತದೆ. ಅಸಂಘಟಿತ, ಕೂಲಿಕಾರ್ಮಿಕರ ಸಮಸ್ಯೆಗೆ ಹೋಲಿಸಿದರೆ ಸಂಘಟಿತ, ವರಮಾನ ಪಡೆಯುವ ಗುಂಪಿನವರ ಸಮಸ್ಯೆ ನಗಣ್ಯ. ವರಮಾನ ಏರಿಕೆಯ ಜೇನುತುಪ್ಪ ನಿಧಾನವಾಗಿ ಇಳಿದು ನೆಲಕ್ಕೆ ಬೀಳುವವರೆಗೆ ಕೂಲಿಕಾರ್ಮಿಕರು, ತಾತ್ಕಾಲಿಕ ನೌಕರರು ಕಾಯಬೇಕು. ಅದಕ್ಕಾಗಿ ಪ್ರತಿಭಟನೆ, ಮುಷ್ಕರ ಹಮ್ಮಿಕೊಳ್ಳಬೇಕು. ಹೀಗೆಲ್ಲಾ ಇರುವಾಗ ಬೆಲೆ ಏರಿಕೆಯೆಂಬ ಸ್ಥಾಯೀಭಾವ ಕೂಡಾ ತನ್ನ ಪಾತ್ರ ಬದಲಾಯಿಸಿಕೊಳ್ಳುತ್ತಾ ಇರುತ್ತದೆ. ಒಂದು ಬಾರಿ ಝಳ ಜಾಸ್ತಿ ಇದ್ದರೆ ಇನ್ನೊಂದು ಬಾರಿ ಝಳ ಅಷ್ಟೊಂದು ಇರುವುದಿಲ್ಲ. ಆದರೆ ಇತ್ತೀಚೆಗೆ ಈ ಸ್ಥಾಯೀಭಾವ ಸ್ಟೇಜ್ ಹತ್ತಿ ನೌಟಂಕಿ ಶುರು ಮಾಡಿತು. ಉದಾಹರಣೆಗೆ ಎಲ್ ಪಿ ಜಿ ಗ್ಯಾಸ್ ಬೆಲೆ ಏರಿಕೆಯತ್ತ ನೋಡುವ.
ಕಾಡು ಕಡಿಮೆ ಆಗಿ ಉರುವಲಿನ ಅಭಾವವನ್ನೆದುರಿಸಲು ಶುರು ಮಾಡಿದ ಮೇಲೆ ಎಲ್ ಪಿ ಜಿ ಗ್ಯಾಸ್ ಮೇಲಿನ ಅವಲಂಬನೆ ಜಾಸ್ತಿಯಾಯಿತು. ಎಲ್ಲಾ ಬಡವರು, ಹಳ್ಳಿಯವರು ಹತ್ತಿರದ ಪಟ್ಟಣದ ಗ್ಯಾಸ್ ಆಫೀಸಿಗೆ ಎಡತಾಕಲು ಶುರು ಮಾಡಿದರು. ಅಡುಗೆ ಮನೆಗಳ ಸ್ವರೂಪ ಬದಲಾಯಿತು. ಒಲೆಗಾಗಿ ಕಟ್ಟೆ ಹಾಕಿಕೊಂಡರು. ನಿಂತು ಅಡಿಗೆ ಮಾಡುವ ವ್ಯವಸ್ಥೆ. ಇದನ್ನು ಆಧುನೀಕರಣ, ಅಭಿವೃದ್ಧಿ ಎಂದೆಲ್ಲಾ ವ್ಯಾಖ್ಯಾನಿಸಲಾಯಿತು. ಹೆಣ್ಣು ಮಕ್ಕಳಿಗೆ ಶ್ರಮದ ಹೊರೆ ಕಡಿಮೆ ಆಯಿತೆಂದೂ , ಕೆಲಸವಿಲ್ಲದ ಹೆಣ್ಣು ಮಕ್ಕಳು ಬೊಜ್ಜು ಬೆಳೆಸಿಕೊಂಡರೆಂದೂ ವ್ಯಂಗ್ಯಪೂರಿತ ಜೋಕುಗಳು ಬಂದವು. ಎಸ್ಸಿ ಎಸ್ಟಿ ಗಳವರಿಗೆ ಫ್ರೀ ಗ್ಯಾಸ್ ಎಂದು ಉಳಿದವರ ಹೊಟ್ಟೆಯಲ್ಲಿ ಬೆಂಕಿ ಬಿತ್ತು. ಪ್ರಥಮ ಬಾರಿಗೆ ಒಂದು ಸಣ್ಣ ಸಿಂಗಲ್ ಒಲೆ, (ಒಂದ್ ಗಡಿಯಾರ ಇದ್ದಂಗೈತಿ. ಹಗೂರ ಅಂದ್ರೆ ಹಗೂರ. ಮೂರ್ ದಿನ ತಡ್ಯದಿಲ್ಲ ಅದು. ಹೊಸಾದು ತಗಳದೇ ಒಂದೂವರೆ ಸಾವಿರ ಕೊಟ್ಟು ಅಂದಿದ್ದ ಮಂಜ), ಒಂದು ರೆಗ್ಯುಲೇಟರ್, ಒಂದು ಸಿಲಿಂಡರ್ ಅಷ್ಟೇ ಫ್ರೀ. ಮುಂದೆ ಅವರೂ ಇವರಷ್ಟೇ ಕೊಟ್ಟು ಖರೀದಿಸಬೇಕು ಎಂಬುದು ಗಣನೆಗೆ ಬರಲಿಲ್ಲ. ಫ್ರೀ ಎಂಬ ಮಾಯಾವಿಯ ಮಾಯಕಾರತೆಯೇ ಹಾಗೆ. ಫ್ರೀ ಇಲ್ಲದವರಿಗೆ ದೊಡ್ಡದಾಗಿ, ಇದ್ದವರಿಗೆ ಚಿಕ್ಕದಾಗಿಯೇ ಕಾಣುವುದು. ನಡುವಿನ ನಿಜ ಯಾರಿಗೂ ಕಾಣುವುದಿಲ್ಲ. ಈಗ ನೌಟಂಕಿ ವೀಕ್ಷಿಸೋಣ.
ಈಗಿನ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ವಿಚಿತ್ರ ಸನ್ನಿವೇಶ ಶುರು ಆಯ್ತು. ಗ್ಯಾಸ್ ಬೆಲೆ ನಿಧಾನವಾಗಿ ಏರತೊಡಗಿತು. ಮೊದಲಿಗೆ ಸಬ್ಸಿಡಿ ಹಣ ನಿಮ್ಮ ಅಕೌಂಟಿಗೆ ಬರುತ್ತದೆ ಎಂದರು. ಬಂತು ಕೂಡಾ. ಹಾಗಾಗಿ ಬೆಲೆ ಏರಿಕೆಯ ಝಳ ತಾಗಲೇ ಇಲ್ಲ. ಮೊಬೈಲ್ ಫೋನ್ ಇದ್ದು ಅದನ್ನು ಸಮರ್ಥವಾಗಿ ಬಳಸಲು ಬರುವವರು, ಬ್ಯಾಂಕಿನಲ್ಲಿ ಖಾತೆ ಹೊಂದಿದವರು, ಬ್ಯಾಂಕಿನ ವ್ಯವಹಾರ ಅಲ್ಪ ಸ್ವಲ್ಪ ಅರಿತವರು ಠಣ್ ಎಂದು ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಬೀಳುತ್ತಿದ್ದಂತೇ ಸ್ವರ್ಗದಿಂದ ನಾಣ್ಯ ಬಿದ್ದಂತೆ ಸಂಭ್ರಮಿಸಿದರು. ತಾವೇ ಕೊಟ್ಟ ಹಣ ಅದು ಎಂಬುದು ಮರೆವೆಗೆ ಸರಿದಿತ್ತು. ಇನ್ನು ಇದ್ಯಾವುದರ ಅರಿವಿರದವರ, ದೈನಂದಿನ ಜಂಜಾಟದಲ್ಲಿ ಮುಳುಗಿದವರ, ಒಲೆ ಊದುವುದು ತಪ್ಪಿ ತಾನೂ ತಾನು ಕೆಲಸ ಮಾಡುವ ಮನೆಯ ಮೇಡಮ್ಮ ಸ್ಟೈಲಾಗಿ ಚಿಟಿಕೆ ಹೊಡೆದಂಗೆ ಬೆಂಕಿ ಹತ್ತಿಸುವುದನ್ನು ಇಮಿಟೇಟ್ ಮಾಡುತ್ತಾ ಎಂಜಾಯ್ ಮಾಡಲೂ ಸಮಯವಿರದವರ (ಬಹುಸಂಖ್ಯಾತರು ಇವರು) ಕಡೆಗೆ ಬರೋಣ.
ಓಹ್ ಮರೆತಿದ್ದೆ. ಇದರ ನಡುವೆ ಒಂದು ಸೀನ್ ಬರುತ್ತದೆ. ಈ ಸೀನು ಬಹಳಾ ಮುಖ್ಯವಾದದ್ದು. ಯುಗದ ರೂಪವನ್ನೇ ಬದಲಾಯಿಸಿದ್ದು. ಇಲ್ಲಿ ತಮಟೆ ಅಲ್ಲ ಕಹಳೆಯ ಮೂಲಕ ಒಂದು ಅನೌನ್ಸ್‌ಮೆಂಟ್ ಆಗುತ್ತದೆ. ದೇಶಕ್ಕಾಗಿ ಸಬ್ಸಿಡಿ ಬಿಡಿ. ಅದಕ್ಕಾಗಿ ಅಲ್ಲಿ ಒತ್ತಿ ಇಲ್ಲಿ ಒತ್ತಿ… ಹೀಗೆ. ಕೆಲವರು ಬೇರೆಯವರಿಗೆ ಕಾಣಿಸುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಿ ಇಲ್ಲಿ ಒತ್ತಿ ಎದೆಯುಬ್ಬಿಸಿಕೊಂಡು ದೇಶಕ್ಕಾಗಿ ಎಂದು ಸಣ್ಣ ಭಾಷಣ ಒಗೆದು ಕೃತಾರ್ಥರಾದರು.
ಇದ್ಯಾವುದರ ಪರಿವೇ ಇಲ್ಲದ ನಮ್ಮ ರತ್ನಕ್ಕ ಒಂದು ದಿನ ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆಗೆ ಪೇಟೆ ಮಧ್ಯದಲ್ಲಿ ಸಿಕ್ಕಳು. ಉದ್ದಕ್ಕೆ ಬಲೆ ಹೊಡೆಯುವ ಕೋಲಿನಂತೆ ಇರುವ ರತ್ನ ತನ್ನಂತೇ ಇರುವ ಅಪೌಷ್ಟಿಕತೆಯಿಂದ ಬಡಕಲಾದ ಮಗನ ಕೈ ಹಿಡಿದು ಮೇಡಮ್ಮಾ ಮೇಡಮ್ಮಾ ಎಂದು ಕೂಗಿ ಕರೆದು ರಸ್ತೆ ಮಧ್ಯದಲ್ಲಿ ನಿಲ್ಲಿಸಿದಳು. ‘ಗ್ಯಾಸ್ ಹಣ ಹಾಕ್ತ್ರಂಬ್ರಲಾ ಬ್ಯಾಂಕಿಗೆ ? ಅದ್ನ್ ತಕಂಡ್ ಈ ಮಾಣಿಗ್ ಸಾಲೀ ಬ್ಯಾಗು ಕೊಡ್ಸಕಂತ ಬಂದಿ. ಬ್ಯಾಂಕವ್ರ್ ನಿನ್ ದುಡ್ ಬರ್ಲೇ ಇಲ್ಲ.. ಗ್ಯಾಸ್ ಆಫೀಸಿಗೆ ಹೋಗ್ ವಿಚಾರ್ಸು ಅಂತ್ರಲಾ ಎಂತಾ ಮಾಡುದು? ಎಲ್ಲಿತ್ತ್ ಆ ಆಪೀಸು?’ ಬೆವರು ಒರೆಸಿಕೊಳ್ಳುತ್ತಾ ಕೇಳಿದಳು. ‘ಅಯ್ಯೋ ಮಾರಾಯ್ತಿ ಆ ಆಪೀಸು ಗಣಪತಿ ಕೆರೆ ದಾಟಿ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಇದೆಯಲ್ಲೇ’ ಎಂದು ನಾನೂ ವ್ಯಥೆ ಪಡುವ ಹೊತ್ತಿಗೆ ಒಬ್ಬ ಸಾಮಾಜಿಕ ಕಾರ್ಯಕರ್ತನಂತೆ ಪೋಸು ಕೊಡುವವ ಸಿಕ್ಕ. ಅವನಿಗೆ ವಿವರಿಸಿಯಾಯ್ತು. ‘ಅಯ್ಯೋ ರತ್ನಕ್ಕ ನೀವು ಯಾವಾಗಲೋ ಫೋನ್ ನಲ್ಲಿ ನನಗೆ ಸಬ್ಸಿಡಿ ಬೇಡ ಅಂತ ಬಟನ್ ಒತ್ತಿದ್ದೀರಿ. ಅದಕ್ಕೇ ಬರಲಿಲ್ಲ ಅದು. ಮುಂದೆ ಬರುವುದೂ ಇಲ್ಲ. ಬೇಕಾದ್ರೆ ಒಂದ್ ದಾರಿ ಆಫೀಸಿಗೆ ಹೋಗಿ ವಿಚಾರಿಸಿ ‘ಅಂದ. ಅದಕ್ಕೆ ರತ್ನಕ್ಕ ‘ನಾನ್ ಫೋನ್ ಮುಟ್ಟೂದೇ ಇಲ್ಲ ಅದ್ಹೆಂಗ್ ಆಗತ್ತು?’ ಎಂದು ಸಣ್ಣ ಮುಖ ಮಾಡಿತು. ‘ನೀವ್ ಅಲ್ಲ, ಈಗ ನೋಡಿ ಫಾರ್ ಎಗ್ಜಾಂಪಲ್ ಮಕ್ಕಳ ಹತ್ತಿರ ಹೇಳಿ ಸಿಲಿಂಡ್ರು ಬುಕ್ ಮಾಡ್ಸ್ ತೀರಲಾ ಆವಾಗ ಅವ್ರೇ ಯಾರೋ ಬಟನ್ ಒತ್ತಿರ್ತಾರೆ ಬಿಡಿ. ನೋ ಡೌಟ್. ಏನ್ರೀ ಮೇಡಂ?’ ಎಂದು ಟೆಕ್ನಾಲಜಿಯನ್ನು ಅರೆದು ಕುಡಿದವರ ಧಾಟಿಯಲ್ಲಿ ಹೇಳಿದ. ‘ಈಗ್ ಎಂಥಾ ಮಾಡುದು? ಸುಮಾರ್ ಎರೆಡ್ಸಾವ್ರ ಇತ್ತಂತ್ಹೇಳಿ ಎಣ್ಸಿದ್ದೆ’ ಅಂತ ರತ್ನಕ್ಕ ಕಣ್ಣೀರು ತಂದ್ಕೊಳುವುದಕ್ಕೂ ಮಗ ” ನಂಗೊತ್ತಿಲ್ಲ ಅಮಾ ನಂಗ್ ಬ್ಯಾಗ್ ಬೇಕಂದ್ರೆ ಬೇಕು ‘ ಎಂದು ರಚ್ಚೆ ಹಿಡಿಯುವುದಕ್ಕೂ ಕರ್ಟನ್ ಬಿತ್ತು.
ಇದನ್ನೂ ಓದಿ- ಹಿಂದುತ್ವವಾದಿ ಬಾಂಧವ್ಯದಲಿ ಹಾದಿ ತಪ್ಪಿದ ನಾಲಿಗೆ
ಆದರೆ ನೌಟಂಕಿ ಮುಗಿಯಲಿಲ್ಲ. ಇದ್ದಕ್ಕಿದ್ದಂತೆ ಯಾರಿಗೂ (ಬಟನ್ ಒತ್ತಿದವರಿಗೂ ಒತ್ತದವರಿಗೂ) ಸಬ್ಸಿಡಿ ಇಲ್ಲ. ಎಲ್ಲರನ್ನೂ ದೇಶಪ್ರೇಮಿಗಳಾಗಿ ಬದಲಾಯಿಸುವುದರೊಂದಿಗೆ ಸ್ಟೇಜಿನ ಮೇಲಿನ ನೌಟಂಕಿ ಏನೋ ಮುಗಿಯಿತು. ಆದರೆ ಮುಗಿಯುವುದುಂಟೆ? ಎಲೆಕ್ಷನ್ ಹತ್ತಿರ ಬಂದಾಗ ಐವತ್ತೋ ನೂರೋ ಕಡಿಮೆ ಆಗುವುದು. ಯಾಮಾರಿದಿರೋ ಗೆದ್ದ ಮೇಲೆ ಇನ್ನೂರು ಜಾಸ್ತಿ.
ನೌಟಂಕಿ ಬೀಸಿದ ಮಾಯಾಜಾಲದಲ್ಲಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ದೇಶಪ್ರೇಮವೆಂಬ ಪೈನ್ ಕಿಲ್ಲರ್ ತಗೊಂಡಾಗಿದೆ. ಈಗ ಬೆಲೆ ಎಷ್ಟು ಏರಿದರೂ ನೋವಿನ ಅರಿವು ಆಗುತ್ತಿಲ್ಲ. ಆದರೆ ನೋವು ನಿವಾರಕ ದ ಅತಿಯಾದ ಬಳಕೆ ಕಿಡ್ನಿಯನ್ನು ಹಾನಿಗೊಳ ಪಡಿಸುತ್ತದೆ.
ಎಚ್ಚರವಿರಲಿ.
ವೃಂದಾ ಹೆಗ್ಡೆ
ಉಪನ್ಯಾಸಕರು
ಇದನ್ನೂ ಓದಿ- ಕುಮಾರಸ್ವಾಮಿಯವರೇ, ನಮ್ಮ ತಾಯಂದಿರು ದಾರಿ ತೋರುವವರೇ ಹೊರತು, ದಾರಿ ತಪ್ಪುವವರಲ್ಲ