ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಪಟ್ಟಣದ ಬಳಿಯ ಅಡಕಮಾರಹಳ್ಳಿಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಜೀವ ದಹನವಾಗಿ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ದುರಂತ ವರದಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮನೆಯೊಳಗಿನ ಎಲ್ ಪಿಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಮೃತರನ್ನು ನಾಗರಾಜು (50) ಮತ್ತು ವರ್ಷದ ಶ್ರೀನಿವಾಸ್ (50) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅಭಿಷೇಕ್ ಗೌಡ, ಶಿವಶಂಕರ್, ಲಕ್ಷ್ಮಿದೇವಿ ಮತ್ತು ಬಸನಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿ ಮೂಲದ ನಾಗರಾಜು ಅವರು ಪತ್ನಿ ಲಕ್ಷ್ಮಿದೇವಿ ಮತ್ತು ಮಕ್ಕಳಾದ ಅಭಿಷೇಕ್ ಗೌಡ ಮತ್ತು ಬಸನ ಗೌಡ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗ್ಯಾಸ್ ಖಾಲಿಯಾಗಿದ್ದಾಗ ಅಭಿಷೇಕ್ ಮತ್ತೊಂದು ಸಿಲಿಂಡರ್ ಗೆ ಕನೆಕ್ಷನ್ ಕೊಟ್ಟಿದ್ದ. ಆದರೆ ಗ್ಯಾಸ್ ಸೋರಿಕೆಯಾಗುತ್ತಿದ್ದದ್ದನ್ನು ಗಮನಿಸಿರಲಿಲ್ಲ. ಕೆಲ ಸಮಯದ ನಂತರ ದೇವರ ಫೋಟೊ ಮುಂದೆ ದೀಪ ಹಚ್ಚಿದಾಗ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಗೆ ಲಕ್ಷ್ಮಿದೇವಿ ಮತ್ತು ಬಸನಗೌಡ ತಪ್ಪಿಸಿಕೊಂಡಿದ್ದಾರೆ. ಆದರೆ, ನಾಗರಾಜು ಮತ್ತು ಅಭಿಷೇಕ್ ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ನೆರೆಮನೆಯ ಶ್ರೀನಿವಾಸ್ ಮತ್ತು ಮನೆ ಮಾಲೀಕ ಶಿವಶಂಕರ್ ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದ್ದಾರೆ. ದುರಂತವೆಂದರೆ, ನಾಗರಾಜು ಮತ್ತು ಅಭಿಷೇಕ್ ಅವರನ್ನು ಉಳಿಸಲು ಪ್ರಯತ್ನಿಸುವಾಗ, ಶ್ರೀನಿವಾಸ್ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಅದೃಷ್ಟವಶಾತ್ ಅಭಿಷೇಕ್ ಬೆಂಕಿಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರಬಂದಿದ್ದಾರೆ. ಗಾಯಗೊಂಡವರನ್ನು ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.