‘ಗಣೇಶನನ್ನು ಬಂಧಿಸಿದ ಪೊಲೀಸರು’ ಎಂದು ಹುಯಿಲೆಬ್ಬಿಸಿದ ಸಂಘ ಪರಿವಾರ: ಇನ್ನಷ್ಟು ಕೋಮುಗಲಭೆಗೆ ಸಂಚು

Most read

ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ, ಗಲಭೆ ಆರಂಭವಾದ ನಂತರ ಗಣೇಶ ಮೂರ್ತಿಯನ್ನು ರಸ್ತೆಯಲ್ಲೇ ಏಕಾಂಗಿಯಾಗಿ ಬಿಡಲಾಗಿತ್ತು. ಗಲಭೆಯ ನಡುವೆ ಮೂರ್ತಿಗೆ ಯಾವುದೇ ಧಕ್ಕೆ ಆಗದಂತೆ ಪೊಲೀಸರು ರಕ್ಷಿಸಿ, ಇನ್ನಷ್ಟು ಅನಾಹುತ ತಪ್ಪಿಸಿದ್ದರು.

ಆದರೆ ಪೊಲೀಸರು ಮೂರ್ತಿಯನ್ನು ರಕ್ಷಿಸಿದ್ದನ್ನೇ ತಿರುಚಿ, ಪೊಲೀಸರು ಭಗವಾನ್ ಗಣೇಶನನ್ನು ಬಂಧಿಸಿ ಕರೆದೊಯ್ದರು ಎಂದು ಸಂಘಪರಿವಾರದ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರಲ್ಲದೆ ಇನ್ನಷ್ಟು ಕೋಮುಗಲಭೆ ಪ್ರಚೋದನೆ ನೀಡುತ್ತಿದ್ದಾರೆ.

ವಿಶ್ವಹಿಂದೂ ಪರಿಷತ್ ನ ಗಿರೀಶ್ ಭಾರದ್ವಾಜ್ ಎಂಬ ವ್ಯಕ್ತಿ ಗಣೇಶ ಮೂರ್ತಿಯನ್ನು ಪೊಲೀಸ್ ರಿಸರ್ವ್ ವ್ಯಾನ್ ನಲ್ಲಿ‌ ಸಂರಕ್ಷಿಸಿ ಇಟ್ಟುಕೊಂಡಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ, ” ಹಿಂದೂ ಕಾರ್ಯಕರ್ತರ ಜೊತೆ ಭಗವಾನ್ ಗಣೇಶನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಗಣೇಶನನ್ನು ಬಂಧಿಸಲಾಗಿದೆ” ಎಂದು ಬರೆದುಕೊಂಡಿದ್ದಾನೆ.‌ ಜೊತೆಗೆ ಹಿಂದೂ ದ್ವೇಷಿ ಸಿದ್ಧರಾಮಯ್ಯ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾನೆ.

ಈ ಪೋಸ್ಟ್ 4323 ರೀಪೋಸ್ಟ್ ಆಗಿದ್ದು, 8900ಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. ವೃತ್ತಿಯಿಂದ ವಕೀಲನೂ ಆಗಿರುವ ಗಿರೀಶ್ ಭಾರದ್ವಾಜ್ ಈ ಕೋಮುಪ್ರಚೋದಕ ಪೋಸ್ಟ್ ಮಾಡಿದ‌ ನಂತರ ಹಲವು ಬಲಪಂಥೀಯ ಹ್ಯಾಂಡಲ್ ಗಳಲ್ಲಿ ಇದೇ ರೀತಿಯ ಪೋಸ್ಟ್ ಗಳು ಕಂಡುಬಂದಿವೆ. ಕರ್ನಾಟಕ ಬಿಜೆಪಿ ಖಾತೆಯಲ್ಲೂ ಇದೇ ಧಾಟಿಯ ಪೋಸ್ಟ್ ಕಾಣಿಸಿಕೊಂಡಿದೆ.

ಕ್ರೇಜಿಮಂತ್ರ‌ ಎಂಬ ಕಂಪೆನಿ ನಡೆಸುವ ಗುಜರಾತ್ ಮೂಲದ ವಿಕ್ರಮ್ ಪ್ರತಾಪ್ ಸಿಂಗ್ ಎಂಬಾತ ಇದೇ ವಿಷಯ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಹಿಂದೂಗಳೇ, ಈ ಚಿತ್ರಗಳು ಕರ್ನಾಟಕದ್ದು. ಅವರು ನಮ್ಮ ಗಣೇಶ ಭಗವಾನ್ ನನ್ನೂ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹೌದು ಇದು ಇಂಡಿಯಾ, ಹಿಂದು ಬಹುಸಂಖ್ಯಾತರ ದೇಶ. 83% ಹಿಂದೂಗಳು. ಇದನ್ನು ನೋಡಿ ನನ್ನ ರಕ್ತ‌ಕುದಿಯುತ್ತಿದೆ. ನಿಮಗೂ ರಕ್ತ ಕುದಿಯುವುದಿಲ್ಲವೇ? ಇದು ಕರ್ನಾಟಕ ಸರ್ಕಾರದ ಅಂತ್ಯದ ಆರಂಭ” ಎಂದು ಕೋಮುಗಲಭೆಗೆ ಪ್ರಚೋದನೆ‌ ನೀಡುವ ಧಾಟಿಯಲ್ಲಿ ಬರೆದುಕೊಂಡಿದ್ದಾನೆ.

ಒಂದೊಮ್ಮೆ ಗಲಭೆ ಸಂಭವಿಸುವಾಗ ರಸ್ತೆಯಲ್ಲಿ ಅನಾಥವಾಗಿ ಉಳಿದಿದ್ದ ಗಣೇಶ ಮೂರ್ತಿಯನ್ನು ಪೊಲೀಸರು ರಕ್ಷಿಸದೇ ಹೋಗಿದ್ದರೆ ಅದಕ್ಕೆ ಅಪಾಯವಾಗುವ ಸಂಭವವಿತ್ತು. ಹಾಗೇನಾದರೂ ಆಗಿದ್ದರೆ ಗಲಭೆ ಮತ್ತಷ್ಟು ಕೈಮೀರಿ ಹೋಗುತ್ತಿತ್ತು. ಹೀಗಿರುವಾಗ ಪೊಲೀಸರು ಮೂರ್ತಿಯನ್ನು ರಕ್ಷಿಸಿದ್ದು ತಪ್ಪೇ? ಮೂರ್ತಿ ರಕ್ಷಿಸಿದ್ದನ್ನು “ಗಣೇಶನ ಬಂಧನ” ಎಂದು ಬಿಂಬಿಸುತ್ತಿರುವ ಹಿಂದೆ ದೊಡ್ಡ ಮಟ್ಟದ ಕೋಮುಗಲಭೆ ಎಬ್ಬಿಸುವ ಪಿತೂರಿ ಇರಬಹುದೇ ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಇಂಥ ಸಮಾಜಘಾತಕ‌ಶಕ್ತಿಗಳ ವಿರುದ್ಧ ಪೊಲೀಸರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ.

More articles

Latest article