“ಫ್ರಂ ದೇವರು ಟು ಡೆವಿಲ್ಲು”

Most read

ಮನುಷ್ಯನೊಬ್ಬ ಮಾನಸಿಕವಾಗಿ ದುರ್ಬಲನಾದಾಗ ದೇವರು-ದಿಂಡರುಗಳ ಮೊರೆ ಹೋಗುವುದು ಸಹಜ. ಆದರೆ ಈ ಸ್ಥಿತಿಯನ್ನು ಒಂದು ವ್ಯಸನವನ್ನಾಗಿಸುವ ವ್ಯವಸ್ಥೆ ಯಾವುದು? ಕಷ್ಟಗಳೆಂಬ ಕೊಳೆಯನ್ನು ತೊಳೆದುಕೊಳ್ಳಲು ಹೋಗುವ ವ್ಯಕ್ತಿಯೊಬ್ಬ ಅದೇಕೆ ಆ ರಾಡಿಯಲ್ಲೇ ಶಾಶ್ವತವಾಗಿ ಇದ್ದುಬಿಡುತ್ತಾನೆ? ಈ ನಿಗೂಢ ಹಾದಿಯಲ್ಲಿ ಯಾಕೆ ತನ್ನ ಸರ್ವಸ್ವವನ್ನೇ ಕಳೆದುಕೊಳ್ಳುತ್ತಾನೆ? – ಪ್ರಸಾದ್‌ ನಾಯ್ಕ್, ದೆಹಲಿ.

Vulnerability!

ಆಂಗ್ಲಭಾಷೆಯಲ್ಲಿ ಹೀಗೊಂದು ಚಂದದ ಪದವಿದೆ. ಕನ್ನಡಕ್ಕೆ ಇದನ್ನು ಯಥಾವತ್ತಾಗಿ, ಪರಿಣಾಮಕಾರಿಯಾಗಿ ಅನುವಾದ ಮಾಡುವುದು ಕಷ್ಟವೇ. ಆದರೂ ಈ ಪದವನ್ನು ಮಾನಸಿಕವಾಗಿ ದುರ್ಬಲರಾಗಿಬಿಡುವ ಪರಿಸ್ಥಿತಿ, ಭಾವನಾತ್ಮಕವಾಗಿ ಬಹಳ ಸೂಕ್ಷ್ಮ ಸ್ಥಿತಿಯನ್ನು ತಲುಪುವುದು ಅಂತೆಲ್ಲ ಒಟ್ಟಾರೆಯಾಗಿ ಅರ್ಥೈಸಿಕೊಳ್ಳಬಹುದು.

ಈ ಬಾರಿ ನಾನು ಈ ಪದದ ಬೆನ್ನುಬೀಳಲೂ ಒಂದು ಕಾರಣವಿದೆ. ಇದಕ್ಕೆ ಪೂರಕವಾಗಿ ಕತೆಯೊಂದನ್ನು ಹೇಳುತ್ತೇನೆ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ಆಯೋಜಿಸಲಾಗಿದ್ದ ನ್ಯೂ ಏಜ್ ಆಧ್ಯಾತ್ಮಿಕ ನಾಯಕರ ಚಿಕ್ಕ ಔತಣಕೂಟವೊಂದರಲ್ಲಿ ನಾನು ಪಾಲ್ಗೊಂಡಿದ್ದೆ. ಆ ಸಭೆಗೆ “ಏಂಜೆಲಿಕ್ ಹೀಲಿಂಗ್” ಎಂಬ ವಿಧಾನದಲ್ಲಿ ಪರಿಹಾರಗಳನ್ನು ಹೇಳುವ ನ್ಯೂ ಏಜ್ ಯುವಸಾಧಕಿಯೊಬ್ಬರು ಅತಿಥಿಯಾಗಿ ಆಗಮಿಸಿದ್ದರು. ನನ್ನ ತಂದೆ ಅಫಘಾನಿಸ್ತಾನ ಮತ್ತು ತಾಯಿ ಇಂಗ್ಲೆಂಡ್ ಮೂಲದವರು ಎಂದು ಹೇಳುತ್ತಿದ್ದ ಆಕೆ ನೋಡಲು ಥೇಟು ಪಾಶ್ಚಾತ್ಯರಂತೆಯೇ ಕಾಣುತ್ತಿದ್ದರು. ಇನ್ನು ಬದುಕಿನ ಹಲವು ವರ್ಷಗಳನ್ನು ಅವರು ಪಶ್ಚಿಮದ ದೇಶಗಳಲ್ಲೇ ಕಳೆದಿರುವ ಕಾರಣದಿಂದಾಗಿ ಅವರ ಇಂಗ್ಲಿಷ್ ಉಚ್ಚಾರಣೆಯಲ್ಲೂ ದಟ್ಟ ವಿದೇಶಿ ಛಾಯೆಯಿತ್ತು.

ಅಂದು ಸಭೆಯಲ್ಲಿ ಕೆಲವು ಪ್ರಾರ್ಥನೆಗಳನ್ನು ಪಠಿಸುತ್ತಾ, ಅವರು ವಿಚಿತ್ರವೊಂದನ್ನು ತೋರಿಸಿದರು. ಕೊನೆಗೆ ಪ್ರಾರ್ಥನೆಯು ಮುಗಿಯುವ ಹೊತ್ತಿಗೆ ನಮಗೆ ಕಂಡಿದ್ದೇನೆಂದರೆ ಹವಾನಿಯಂತ್ರಿತ ಕೊಠಡಿಯಲ್ಲೂ ಅವರು ಸಣ್ಣಗೆ ಬೆವರುತ್ತಿದ್ದರು. ಸಾಕಷ್ಟು ತಂಪಾಗಿದ್ದ ಆ ಕೊಠಡಿಯಲ್ಲಿ, ಕೇವಲ ಮೇಣದ ಬತ್ತಿಯೊಂದರ ಪರಿಣಾಮದಿಂದ ಅವರು ಬೆವರುವುದು ಸಹಜವೇನೂ ಆಗಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ಅವರ ಮತ್ತು ಕೆಲ ಕಾಣದ ದೈವಿಶಕ್ತಿಗಳ ನಡುವೆ ವಿನಿಮಯವಾಗುತ್ತಿದ್ದ ಚೈತನ್ಯದ (ಎನರ್ಜಿಯ) ಪರಿಣಾಮವೇ ಇದು ಎಂಬುದಾಗಿ ಇದಕ್ಕೊಂದು ಹಿನ್ನೆಲೆಯನ್ನೂ ಅವರು ಕೊಟ್ಟರು. ಈ ಘಟನೆಯು ನನ್ನನ್ನು ಗಾಢವಾಗಿ ಪ್ರಭಾವಿಸದಿದ್ದರೂ, ತಕ್ಕಮಟ್ಟಿನ ಕುತೂಹಲವೊಂದನ್ನು ಹುಟ್ಟಿಸಿದ್ದಂತೂ ಸತ್ಯವಾಗಿತ್ತು.

ಇದಾದ ಒಂದೆರಡು ವರ್ಷಗಳ ನಂತರ ಈ ಘಟನೆಯ ಕುರಿತಾಗಿ ನನ್ನ ಗೆಳೆಯನೊಬ್ಬನಲ್ಲಿ ಹೇಳಿಕೊಂಡಿದ್ದೆ. ಅದು ಆತನ ಪಾಲಿಗೆ ಸವಾಲಿನ ದಿನಗಳಾಗಿದ್ದವು. ಕಣ್ಣುಹಾಯಿಸಿದಲ್ಲೆಲ್ಲಾ ಕಷ್ಟಗಳೇ. ಹೀಗಾಗಿ ಈ ಕತೆಯನ್ನು ಕೇಳಿದವನೇ ನನ್ನನ್ನು ಆಕೆಯಿರುವಲ್ಲಿಗೆ ಕರೆದುಕೊಂಡು ಹೋಗು ಎಂದು ದುಂಬಾಲು ಬಿದ್ದ. ವಿಚಿತ್ರವೆಂದರೆ ಆಕೆಯ ಬಗ್ಗೆ ನನಗಿಂತ ಅವನಿಗೇ ಹೆಚ್ಚು ನಂಬಿಕೆ ಹುಟ್ಟಿದಂತಿತ್ತು. ಹೀಗಾಗಿ ವಿಧಿಯಿಲ್ಲದೆ ಒಪ್ಪಿಕೊಂಡೆ. ಒಂದೆರಡು ದಿನಗಳ ತಲಾಶೆಯ ನಂತರ ಆಕೆಯ ವಿಳಾಸ ಮತ್ತು ಅಪಾಯಿಂಟ್‍ಮೆಂಟ್ ಸಿಕ್ಕಿತು. ಆಗಲಿ, ಒಂದು ಕೈ ನೋಡೇಬಿಡೋಣ ಎಂದು ಇಬ್ಬರೂ ಹೊರಟೆವು.

ಆ ವಿಲಾಸಿ ಬಂಗಲೆಯು ದೆಹಲಿಯ ಅತ್ಯಂತ ಶ್ರೀಮಂತವೆನಿಸಿಕೊಂಡ ವಠಾರವೊಂದರಲ್ಲಿತ್ತು. ಪಾರ್ಕಿಂಗ್ ಗ್ಯಾರೇಜಿನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಎರಡು ಚಂದದ ಕಾರುಗಳು ತಾವಿರುವುದೇ ಬಂಗಲೆಯ ಶೋಭೆಯನ್ನು ಹೆಚ್ಚಿಸಲು ಎಂಬಂತೆ ವಿರಮಿಸಿದ್ದವು. ಸಿಬ್ಬಂದಿಯೊಬ್ಬರು ನಮ್ಮನ್ನು ಅಲ್ಲಿ ಬರಮಾಡಿಕೊಂಡ ನಂತರ ಸ್ಟುಡಿಯೋ ಶೈಲಿಯ ಚಂದದ ಕೋಣೆಯೊಂದಕ್ಕೆ ಕರೆದೊಯ್ಯಲಾಯಿತು. ಹಲವು ಬಣ್ಣ-ವಿಚಿತ್ರ ವಸ್ತುಗಳೊಂದಿಗೆ, ಸಿನಿಮೀಯ ಶೈಲಿಯಲ್ಲಿ ಅಲಂಕೃತವಾಗಿದ್ದ ಆ ಕೋಣೆಯು ಬಾಲಿವುಡ್ ಸಿನೆಮಾಗಳಲ್ಲಿ ಬರುವ ಕ್ರಿಸ್ಟಲ್ ರೀಡರ್ ಗಳ ವಿಕ್ಷಿಪ್ತ ಕೋಣೆಯನ್ನೇ ಹೋಲುವಂತಿತ್ತು. ಮುಂದೆ ನಡೆದ ಸುಮಾರು ಮೂವತ್ತು ನಿಮಿಷಗಳ ಸೆಷನ್ನಿನಲ್ಲಿ ಹಲವು ಪ್ರಶ್ನೋತ್ತರಗಳು ನಡೆದವು. ಕೊನೆಗೆ ಶುಲ್ಕವೆಂದು ಏಳು ಸಾವಿರ ರೂಪಾಯಿಗಳನ್ನು ಕೂಡ ಕೇಳಲಾಯಿತು. ಆ ಕಾಲಕ್ಕೆ, ಅರ್ಧತಾಸಿನ ಚರ್ಚೆಯೊಂದಕ್ಕೆ ಅದು ದೊಡ್ಡ ಮೊತ್ತವೇ.

ಇದರಿಂದ ನಿನಗೆ ನಿಜಕ್ಕೂ ಪ್ರಯೋಜನವಾಯಿತೇ ಎಂದು ನಾನು ನಂತರ ಆತನ ಬಳಿ ಕೇಳಿದ್ದೆ. ಆರಂಭಿಕ ಹಂತದಲ್ಲೇನೋ ಹೌದೆಂದು ಒಪ್ಪಿಕೊಂಡಿದ್ದ. ನಂತರ ಅಂಥದ್ದೇನಿಲ್ಲ ಅಂತಲೂ ಹೇಳಿದ್ದ. ಸಾಮಾನ್ಯವಾಗಿ ಈ ಬಗೆಯ ವಿಚಾರಗಳಲ್ಲಿ ಫಲಿತಾಂಶಗಳನ್ನು ನಿಖರವಾಗಿ ಅಳೆಯುವುದು ಕಷ್ಟವಾದ್ದರಿಂದ ಸ್ಪಷ್ಟವಾಗಿ ಏನೂ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಆಗಿದ್ದೇನೆಂದರೆ ನನ್ನ ಗೆಳೆಯ ಆ ಕಾಲಘಟ್ಟದಲ್ಲಿ ಬಹಳ ನೊಂದುಕೊಂಡಿದ್ದ, ಮಾನಸಿಕವಾಗಿ ದುರ್ಬಲನಾಗಿದ್ದ. ಆ ಸಂಕಷ್ಟದ ಅವಧಿಯಲ್ಲಿ ಈಕೆ ಒಂದು ಭರವಸೆಯಂತೆ ಕಂಡಿದ್ದಳು. ಈ ನಂಬಿಕೆಯು ಅದೆಷ್ಟು ಫಲ ಕೊಟ್ಟಿತು ಎಂಬುದನ್ನು ನಂಬಿದವರಷ್ಟೇ ಹೇಳಬಲ್ಲರು.

ತನ್ನ ಸೇವಾವಧಿಯಲ್ಲಿ ಅತ್ಯುಚ್ಚ ಹುದ್ದೆಯನ್ನು ಅಲಂಕರಿಸಿದ್ದ ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಕುಖ್ಯಾತ ದೇವಮಾನವನೊಬ್ಬನ ಕಟ್ಟರ್ ಅನುಯಾಯಿಯಾಗಿದ್ದರು. ವಿದ್ಯಾವಂತ, ಸರಳ, ಸಜ್ಜನ ವ್ಯಕ್ತಿಯಾಗಿದ್ದ ಅವರಿಗೆ ಈತನೇ ಭಗವಂತನಾಗಿದ್ದ. ಹೀಗಾಗಿ ನಾನು ಕೂಡ ಅದೆಷ್ಟೋ ತಾಸುಗಳ ಕಾಲ ಬಾಬಾರ ಸತ್ಸಂಗ-ಪ್ರವಚನಗಳನ್ನು ಮುಲಾಜಿಗೆ ಬಿದ್ದು ಕೇಳಿದ್ದೆ. ಈ ನಡುವೆ ಅವರಿಗೆ ಬಹುದೊಡ್ಡ ಆಘಾತವೊಂದನ್ನು ನೀಡುವ ಘಟನೆಯೊಂದು ನಡೆದುಹೋಯಿತು. ಅದೇನೆಂದರೆ ಅತ್ಯಾಚಾರವನ್ನೂ ಸೇರಿದಂತೆ ಬಾಬಾನ ಕೆಲವು ಕ್ರಿಮಿನಲ್ ಪ್ರಕರಣಗಳು ಕೊನೆಯ ಹಂತವನ್ನು ತಲುಪಿ, ಇನ್ನೇನು ತೀರ್ಪು ಬರುವುದು ಬಹುತೇಕ ಖಚಿತವಾಯಿತು. ಈ ಬಾರಿ ಬಾಬಾ ಜೈಲು ಪಾಲಾಗುವುದು ಪಕ್ಕಾ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳೆಲ್ಲ ಬಾಯಿಬಡಿದುಕೊಂಡವು.

ನಾಳೆಯೇ ಬಹುನಿರೀಕ್ಷಿತ ತೀರ್ಪು ಹೊರಬೀಳಲಿದೆ ಎಂಬ ಘೋಷಣೆಯಾಗುತ್ತಿದ್ದಂತೆ ನಾವಿಬ್ಬರು ದಿನವಿಡೀ ಸುದ್ದಿವಾಹಿನಿಗಳಿಗೆ ಅಂಟಿಕೊಂಡಿದ್ದೆವು. ಇತ್ತ ಕ್ಷಣಕ್ಷಣದ ಬೆಳವಣಿಗೆಗಳು ಥ್ರಿಲ್ಲರ್ ಸಿನೆಮಾದಂತೆ ರೋಚಕ ತಿರುವು ಪಡೆದುಕೊಳ್ಳುವುದು ಕೂಡ ಮುಂದುವರಿದಿತ್ತು. ಸಿರ್ಸಾ ಸೇರಿದಂತೆ ಹರಿಯಾಣದ ಹಲವು ಭಾಗಗಳು ಅಕ್ಷರಶಃ ಯಾವುದೇ ಕ್ಷಣದಲ್ಲಿ ಸಿಡಿಯಬಹುದಾದ ಟೈಂ-ಬಾಂಬುಗಳಾಗಿಬಿಟ್ಟಿದ್ದವು. ಹಲವೆಡೆ ದಂಗೆಗಳಾದವು. ಪ್ರಾಣಹಾನಿ, ಆಸ್ತಿಪಾಸ್ತಿಗಳ ಹಾನಿಗಳೆಲ್ಲವೂ ಆದವು. ಕೊನೆಗೆ ಹಲವರ ಲೆಕ್ಕಾಚಾರದಂತೆ ದೇವಮಾನವನು ಅಪರಾಧಿಯೆಂಬುದು ಸಾಬೀತಾಗಿ ದೊಡ್ಡಮಟ್ಟಿನ ಶಿಕ್ಷೆಯೂ ಆಯಿತು. ಇತ್ತ ನ್ಯಾಯಾಲಯದ ತೀರ್ಪನ್ನು ಕೇಳಿದಾಕ್ಷಣ ದೇವಮಾನವನು ನಿಂತಲ್ಲೇ ಕುಸಿದುಬಿದ್ದ, ಕಣ್ಣೀರಿಟ್ಟ ಎಂಬ ಸುದ್ದಿಗಳೆಲ್ಲ ವರದಿಯಾದವು.

ಸಹಜವಾಗಿ ಬಾಬಾನ ಅನುಯಾಯಿಗಳಿಗೆ ಆಘಾತವಾಗಿತ್ತು. ತಾವು ನಂಬಿದ ಭಗವಂತನಿಗೆ ಹೀಗಾಗಲಿದೆಯೆಂದು ಅವರು ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ. ಇತ್ತ ನನ್ನ ಸಹೋದ್ಯೋಗಿಯೂ ಹಲವು ದಿನಗಳ ಕಾಲ ಆಳವಾದ ಮೌನವೊಂದಕ್ಕೆ ಜಾರಿಬಿಟ್ಟರು. ಇಂಥದ್ದೊಂದು ಬೆಳವಣಿಗೆಗೆ ಹೇಗೆ ಪ್ರತಿಕ್ರಯಿಸುವುದೆಂದೇ ಅವರಿಗೆ ಬಹುಷಃ ತಿಳಿದಿರಲಿಲ್ಲ. ತಮ್ಮ ಆಂತರ್ಯದಲ್ಲಿ ವೈಯಕ್ತಿಕ ನಂಬಿಕೆ ಮತ್ತು ನೈಜಸ್ಥಿತಿಯ ನಡುವೆ ನಡೆಯುತ್ತಿದ್ದ ಮಾನಸಿಕ ಜಿದ್ದಾಜಿದ್ದಿಯು ಅವರ ಪಾಲಿಗೆ ವಾರಗಟ್ಟಲೆ ಮುಂದುವರೆದಿತ್ತು. ಕೊನೆಗೂ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲೇ ಇಲ್ಲ. ಮೌನ ಶಾಶ್ವತವಾಗಿಬಿಟ್ಟಿತು. ಅಂದಹಾಗೆ ಬಾಬಾ ಸದ್ಯ ಜೈಲುಪಾಲಾಗಿದ್ದರೂ ಆತನ ಸಂಘ-ಸಂಸ್ಥೆ-ಮಂದಿರಗಳು ಇಂದಿಗೂ ಸಕ್ರಿಯವಾಗಿವೆ.

ಇದು ನನ್ನ ಸಹೋದ್ಯೋಗಿಯೊಬ್ಬರ ಕತೆಯಲ್ಲ. ಜಗತ್ತಿನಾದ್ಯಂತ ಇಂತಹ ಘಟನೆಗಳು ಹಲವಾರು ಬಾರಿ ನಡೆದಿವೆ. ರಜನೀಶರು ಪುಣೆಯ ಆಶ್ರಮವನ್ನು ಬಿಟ್ಟು, ಸದ್ದಿಲ್ಲದೆ ಅಮೆರಿಕಾಗೆ ಪುರ್ರೆಂದು ಹಾರಿಹೋದಾಗ ಆಶ್ರಮದಲ್ಲಿ ಅವರು ಕಟ್ಟಿದ್ದ ಇಡೀ ಇಕೋ-ಸಿಸ್ಟಮ್ ಸ್ತಬ್ದವಾಗಿಬಿಟ್ಟಿತ್ತು. ಮುಂದೆ ಅಮೆರಿಕಾದ ಒರೆಗಾನ್ ಕಮ್ಯೂನಿನಿಂದ ಓಶೋ ರಾತ್ರೋರಾತ್ರಿ ಪರಾರಿಯಾದಾಗಲೂ ಅಲ್ಲಿದ್ದ ಅದೆಷ್ಟೋ ಭಕ್ತರು, ಅನುಯಾಯಿಗಳು ಕಂಗಾಲಾಗಿಬಿಟ್ಟಿದ್ದರು. ಅನಾಥಪ್ರಜ್ಞೆಯು ಅವರನ್ನು ಇನ್ನಿಲ್ಲದಂತೆ ಕಾಡಿದ್ದಲ್ಲದೆ, ಬದುಕಿನ ಜಟಕಾಬಂಡಿಯು ಏಕಾಏಕಿ ಕೀಲುಮುರಿದು ಉರುಳಿಬಿದ್ದಂತೆ ಭಾಸವಾಗಿತ್ತು.

ಹೀಗಾಗುವುದಕ್ಕೂ ಕಾರಣಗಳಿವೆ. ಇಂತಹ ಕಲ್ಟ್ ಗುಂಪುಗಳಲ್ಲಿ ಸದಸ್ಯರಾದ ನಂತರ ಹೊರಜಗತ್ತಿನೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಳ್ಳುವಂತೆ ಅನುಯಾಯಿಗಳಿಗೆ ಹೇಳಲಾಗುತ್ತದೆ. ಅವರ ಬಳಿ ಬಾಕಿ ಉಳಿದಿರುವಷ್ಟು ಆರ್ಥಿಕ ಮೂಲಗಳನ್ನು ಧಾರ್ಮಿಕ ಸಂಸ್ಥೆಗೆ ದಾನ ಮಾಡಿಸಿಕೊಳ್ಳಲಾಗುತ್ತದೆ. ಕಮ್ಯೂನ್ ಗಳಲ್ಲಿ ದಿನರಾತ್ರಿಗಳ ಪರಿವೆಯಿಲ್ಲದಂತೆ ದುಡಿಸಿಕೊಳ್ಳಲಾಗುತ್ತದೆ. ಆಯಾ ಗುಂಪುಗಳ ನಾಯಕರ ಆಣತಿಯನ್ನು ಪಾಲಿಸುವುದೊಂದೇ ಬದುಕಿನ ಧ್ಯೇಯ ಎಂಬ ಭ್ರಮೆಯು ಕ್ರಮೇಣ ಗಟ್ಟಿಯಾಗುವಂತೆ ಅವರ ದಿನಚರಿಯನ್ನು ರೂಪಿಸಲಾಗುತ್ತದೆ. ಅನುಯಾಯಿಗಳು ಆಯಾ ಸಮುದಾಯವನ್ನು ಬಿಟ್ಟು ಬೇರೆಲ್ಲೂ ಹೋಗದಂತೆ, ಒಳಗಿನ ಗುಟ್ಟುಗಳು ಹೊರಜಗತ್ತಿಗೆ ಬಯಲಾಗದಂತೆ ನೋಡಿಕೊಳ್ಳಲು ಬೆದರಿಕೆ-ದೌರ್ಜನ್ಯಗಳಂತಹ ಅಪಾಯಕಾರಿ ತಂತ್ರಗಳನ್ನು ಕೂಡ ಹಿಂಜರಿಕೆಯಿಲ್ಲದೆ ಬಳಸಲಾಗುತ್ತದೆ. 

ರಜನೀಶರ ಒರೆಗಾನ್ ಆಶ್ರಮದ ಅವನತಿಯ ನಂತರ ಅಲ್ಲಿದ್ದ ಬಹುತೇಕ ಅನುಯಾಯಿಗಳಿಗೆ ಹೊರಜಗತ್ತಿಗೆ ಮರಳಿ ಹೇಗೆ ಬದುಕುವುದೆಂದೇ ತಿಳಿಯದಾಗಿತ್ತು. ಏಕೆಂದರೆ ಆ ಹಂತದಲ್ಲಿ ಇವರೆಲ್ಲ ತಮ್ಮ ಸ್ವಂತ ಬುದ್ಧಿ, ಕುಟುಂಬ-ಗೆಳೆಯರು-ಹಿತೈಷಿಗಳ ಬಳಗ, ಜೇಬಿನಲ್ಲಿದ್ದ ಒಂದಿಷ್ಟು ಕಾಸು, ದೈಹಿಕ-ಮಾನಸಿಕ ಆರೋಗ್ಯ, ಸಾಮಾನ್ಯ ಜ್ಞಾನ… ಹೀಗೆ ಎಲ್ಲವನ್ನೂ ಖಾಲಿಯಾಗಿಸಿ ಟೊಳ್ಳುಗೊಂಬೆಯಂತಾಗಿರುತ್ತಿದ್ದರು. ವಿಚಿತ್ರವೆಂದರೆ ಇದೇ ಸಿದ್ಧಮಾದರಿಯನ್ನು ಹಲವು ಬಗೆಯ ಕಮ್ಯೂನ್ ವ್ಯವಸ್ಥೆಗಳಲ್ಲೂ ನಾವು ಸಾಮಾನ್ಯವಾಗಿ ಕಾಣಬಹುದು. ಹೀಗೆ ಭಕ್ತಿ-ಶರಣಾಗತಿಯ ಹೆಸರಿನಲ್ಲಿ ತಮ್ಮ ಮೆದುಳನ್ನು ಅಡವಿಟ್ಟುಕೊಂಡು ತಮ್ಮ ಸರ್ವಸ್ವವನ್ನೂ ಬರಿದಾಗಿಸಿಕೊಂಡು ಬದುಕುವ ಅನುಯಾಯಿಗಳಿಗೆ, ತಮ್ಮ ನಾಯಕರು ಹಟಾತ್ತನೆ ಕೈಬಿಟ್ಟರೆ ಹೇಗಾಗಬೇಡ!  

ಇದರ ಮತ್ತಷ್ಟು ಆಳಕ್ಕಿಳಿದರೆ ಬಹಳಷ್ಟು ಕುಖ್ಯಾತ ಸಮುದಾಯಗಳಲ್ಲಿ ಅನುಯಾಯಿಗಳಿಂದ ದಿನಕ್ಕೆ ಬರೋಬ್ಬರಿ ಇಪ್ಪತ್ತು ತಾಸುಗಳಷ್ಟು ಕಾಲ ಸೇವೆಯ ಹೆಸರಿನಲ್ಲಿ ಜೀತ ಮಾಡಿಸುವುದನ್ನು, ಯಂತ್ರಗಳಂತೆ ದುಡಿದರೂ ವ್ಯವಸ್ಥಿತವಾಗಿ ನೀರು-ಆಹಾರ ಪೂರೈಕೆ ಮಾಡದಿರುವುದನ್ನು, ಕೋಟ್ಯಾಂತರ ಡಾಲರುಗಳ ದೇಣಿಗೆಯ ಸಂಗ್ರಹವಿದ್ದರೂ ಅವಶ್ಯಕತೆಯಿದ್ದಾಗ ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದನ್ನು, ಲಿಂಗ-ವಯಸ್ಸಿನ ಬೇಧವಿಲ್ಲದೆ ವಿಚಿತ್ರ ಲೈಂಗಿಕ ಸಾಹಸಗಳಲ್ಲಿ ಬಳಸಿಕೊಳ್ಳುವುದನ್ನು, ಹಲವು ರೂಪಗಳಲ್ಲಿ ದೈಹಿಕ-ಮಾನಸಿಕ ದೌರ್ಜನ್ಯ ಮಾಡುವುದನ್ನು, ಷಡ್ಯಂತ್ರ-ಕೊಲೆ-ದಂಗೆಗಳಿಗೆ ಪ್ರೇರೇಪಿಸುವುದನ್ನು… ಹೀಗೆ ಬಹಳಷ್ಟು ವಿಕೃತಿಗಳನ್ನು ಕೂಡ ನಾವು ಗಮನಿಸಬಹುದು.

ಈ ಕಥಾನಕವನ್ನು vulnerability ಎಂಬ ಪದದೊಂದಿಗೆ ಆರಂಭಿಸಿದ್ದೆ. ಅದ್ಯಾವುದೋ ಒಂದು ಕೆಟ್ಟ ಘಳಿಗೆ, ಸವಾಲಿನ ಕಾಲಘಟ್ಟ. ಮನುಷ್ಯನೊಬ್ಬ ಮಾನಸಿಕವಾಗಿ ಸೋತು ಹೋಗಿರುತ್ತಾನೆ. ಭರವಸೆಯ ಬೆಳಕಿನಂತೆ ಏನಾದರೂ ಕಂಡರೆ ಥಟ್ಟನೆ ಅದಕ್ಕೆ ಅಂಟಿಕೊಂಡುಬಿಡುತ್ತಾನೆ. ಮುಂದೆ ಇದಕ್ಕೆ ಅಂಟಿಕೊಂಡೇ ಇರುವಂತೆ ಅಲ್ಲಿಯ ವ್ಯವಸ್ಥೆಗಳು ಆತನನ್ನು ಅನಿವಾರ್ಯತೆಗೆ ತಳ್ಳುತ್ತವೆ. ಅದು ಬೇರೆ ಮಾತು. ಆದರೆ ತನಗೆ ಆಸರೆಯಾಗಿ ಹರಸುವ, ದೈವಿಕ ಶಕ್ತಿಯಿರುವ ಕೈ ಒಂದಿದೆ ಎಂಬ ಅಂಶವೊಂದೇ ಆ ಹೊತ್ತಿಗೆ ಸಾಕೆನಿಸಿಬಿಡುತ್ತದೆ. ವಿಪರ್ಯಾಸವೆಂದರೆ ಬಹಳಷ್ಟು ಬಾರಿ ಅದು ಭಸ್ಮಾಸುರನ ಕೈಯೆಂಬುದು ಅರಿವಾಗುವುದು ತಮ್ಮ ಮತ್ತು ಸುತ್ತಲಿನ ಜಗತ್ತು ಬೂದಿಯಾದ ನಂತರವೇ.

ಖ್ಯಾತ ಬಾಲಿವುಡ್ ಚಿತ್ರ “ಪಿ.ಕೆ”ಯಲ್ಲಿ ಕೂಡ ಇವೆಲ್ಲವನ್ನು ಒಂದು ಬಗೆಯ ಸಪೋರ್ಟ್ ಸಿಸ್ಟಮ್ ಗೆ ಹೋಲಿಸಲಾಗಿದೆ. “ಈ ದುರಿತಕಾಲದಲ್ಲಿ ದೇವರುಗಳೆಂಬ ಸಪೋರ್ಟ್ ಸಿಸ್ಟಮ್ ಒಂದೇ ಮನುಷ್ಯನಿಗೆ ನೆರಳಾಗಿ ಸದ್ಯ ಉಳಿದಿರುವುದು. ಅದನ್ನು ಕೂಡ ಅವರಿಂದ ಕಸಿದುಕೊಂಡು ಜನಸಾಮಾನ್ಯರನ್ನು ಅನಾಥರನ್ನಾಗಿಸುತ್ತೀರಾ?”, ಎಂದು ಸಾರ್ವಜನಿಕ ಭಾಷಣವೊಂದರಲ್ಲಿ ತಪಸ್ವಿ ಮಹಾರಾಜ್ ಎಂಬ ದೇವಮಾನವನ ಪಾತ್ರವು ದಾರ್ಷ್ಟ್ಯದ ದನಿಯಲ್ಲಿ ಕೇಳುತ್ತದೆ. ಮನುಷ್ಯನೊಬ್ಬ ಮಾನಸಿಕವಾಗಿ ದುರ್ಬಲನಾದಾಗ ದೇವರು-ದಿಂಡರುಗಳ ಮೊರೆ ಹೋಗುವುದು ಸಹಜ. ಆದರೆ ಈ ಸ್ಥಿತಿಯನ್ನು ಒಂದು ವ್ಯಸನವನ್ನಾಗಿಸುವ ವ್ಯವಸ್ಥೆ ಯಾವುದು? ಕಷ್ಟಗಳೆಂಬ ಕೊಳೆಯನ್ನು ತೊಳೆದುಕೊಳ್ಳಲು ಹೋಗುವ ವ್ಯಕ್ತಿಯೊಬ್ಬ ಅದೇಕೆ ಆ ರಾಡಿಯಲ್ಲೇ ಶಾಶ್ವತವಾಗಿ ಇದ್ದುಬಿಡುತ್ತಾನೆ? ಈ ನಿಗೂಢ ಹಾದಿಯಲ್ಲಿ ಯಾಕೆ ತನ್ನ ಸರ್ವಸ್ವವನ್ನೇ ಕಳೆದುಕೊಳ್ಳುತ್ತಾನೆ?

ಜುಲೈ 02, 2024 ರಲ್ಲಿ ಉತ್ತರಪ್ರದೇಶದ ಹತ್ರಾಸ್ ಎಂಬ ಸ್ಥಳದಲ್ಲಿ ಬರೋಬ್ಬರಿ ನೂರಿಪ್ಪತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದು ಆ ಸ್ವಯಂಘೋಷಿತ ದೇವಮಾನವನನ್ನು ನೋಡಿ ಕಣ್ತುಂಬಿಕೊಳ್ಳಲು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು ಮತ್ತು ಆತ ನಡೆದ ನೆಲದಿಂದ ಪಾದಧೂಳಿಯನ್ನು ಕಣ್ಣಿಗೊತ್ತಿಕೊಳ್ಳುವ ಭರದಲ್ಲಿ ಭೀಕರ ಕಾಲ್ತುಳಿತವಾಯಿತು ಎಂಬ ವರದಿಗಳು ಬರುತ್ತಿವೆ. ಅದಕ್ಕಿಂತಲೂ ಹೆಚ್ಚಿನ ಆತಂಕದ ಸಂಗತಿಯೆಂದರೆ ಈ ಘಟನೆಯನ್ನು ಮುಚ್ಚಿಹಾಕಲು ಸಾಕ್ಷ್ಯನಾಶದ ಪ್ರಯತ್ನಗಳು ಕೂಡ ಆಯೋಜಕರಿಂದ ನಡೆದಿವೆ ಎಂಬ ಭಯಾನಕ ಅಂಶ. 

ನಮ್ಮ ಬುದ್ಧಿ, ಪ್ರಜ್ಞೆ ಮತ್ತು ಬದುಕಿನ ಸ್ಟೇರಿಂಗ್ ವ್ಹೀಲ್ ನಮ್ಮ ಕೈಯಲ್ಲಿರುವಷ್ಟು ದಿನ ಎಲ್ಲವೂ ಸುರಕ್ಷಿತವೇ. ಅದು ಸದಾ ನಮ್ಮ ಕೈಯಲ್ಲೇ ಭದ್ರವಾಗಿರಲಿ!

ಪ್ರಸಾದ್ನಾಯ್ಕ್‌, ದೆಹಲಿ  

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- http://“ಸೆಲೆಬ್ರಿಟಿ ಮೋಹವೆಂಬ ರಹಸ್ಯ ಲೋಕ” https://kannadaplanet.com/the-secret-world-of-celebrity-infatuation/

More articles

Latest article