Thursday, September 19, 2024

ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ |ಭಾಗ 1

Most read

ಚುನಾವಣಾ ಆಯುಕ್ತರ ಆಯ್ಕೆಯ ನಿರ್ಧಾರ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತಿದ್ದುಪಡಿಯನ್ನು ರದ್ದು ಮಾಡಿ ಮೊದಲಿದ್ದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿ ಎಂದು  ನ್ಯಾಯಾಧೀಶರು ಆದೇಶಿಸಿದರೆ ಚುನಾವಣಾ ಆಯೋಗದ ಮೇಲೆ ಜನರಿಗೆ ವಿಶ್ವಾಸಾರ್ಹತೆ ಮೂಡಬಹುದು. ಇಲ್ಲದೇ ಹೋದರೆ ಮತ್ತೆ ಮೋದಿ ಕೈಗೊಂಬೆ ಆಯುಕ್ತರೇ ನೇಮಕಗೊಂಡು ಚುನಾವಣಾ ವ್ಯವಸ್ಥೆ ಏಕಪಕ್ಷೀಯವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಾಗಾಗದಿರಲಿ ಎಂಬುದೇ ಎಲ್ಲಾ ಪ್ರಜಾತಂತ್ರವಾದಿಗಳ ಬಯಕೆಯಾಗಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಹೌದು.. ಭಾರತ ಈಗ ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಪೂರಕವಾಗಿ ಹಿಂದುತ್ವವಾದಿ ಆರೆಸ್ಸೆಸ್ ಹಾಗೂ ಮೋದಿ ಸರಕಾರ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮೂಲಕವೇ ದೇಶ ಆಳುವ ಅಧಿಕಾರವನ್ನು ಗಳಿಸಲು ಸಾಧ್ಯವೆಂಬುದನ್ನು ಅರಿತಿದೆ.  ಚುನಾವಣೆ ಮೂಲಕವೇ ಹೇಗೆ ಬಹುಮತ ಪಡೆಯಬೇಕು ಎಂಬುದರ ನೀಲಿ ನಕ್ಷೆಯನ್ನು ಅದು ರೆಡಿ ಮಾಡಿಕೊಂಡಿದೆ. ಹಿಂದೂರಾಷ್ಟ್ರ ನಿರ್ಮಾಣಕ್ಕೆ ಇರುವ ಅಡೆತಡೆಗಳೆಲ್ಲವನ್ನೂ ಒಂದೊಂದಾಗಿ ನಿವಾರಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ. ಅದರ ಭಾಗವಾಗಿ ಮೋದಿ ಸರಕಾರದ ಕೈಗೊಂಬೆಯಾಗುವಂತಹ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಿಕೊಂಡು ಚುನಾವಣಾ ಫಲಿತಾಂಶವನ್ನು ತಮ್ಮಕಡೆ ವಾಲಿಸಿಕೊಳ್ಳುವ ಹಾಗೂ ಮುಂಬರುವ  ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವುದೇ ಮೋದಿ ಹಾಗೂ ಆರೆಸ್ಸೆಸ್ಸಿನ ಕುಟಿಲ ತಂತ್ರಗಾರಿಕೆಯಾಗಿದೆ. 

ಭಾರತದಲ್ಲಿ ಚುನಾವಣೆಗಳನ್ನು ನಡೆಸುವ ಹಾಗೂ ನಿಯಂತ್ರಿಸುವ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ ಕೇಂದ್ರ ಚುನಾವಣಾ ಆಯೋಗ. ಈ ಸಂಸ್ಥೆಗೆ ಮೊದಲು ಒಬ್ಬರೇ ಆಯುಕ್ತರು ಇರುತ್ತಿದ್ದರು. ಟಿ.ಎನ್.ಶೇಷನ್ ರವರಂತವರು ಚುನಾವಣಾ ಆಯುಕ್ತರಾಗಿದ್ದಾಗ ರಾಜಕೀಯ ಪಕ್ಷಗಳಿಗೆ ಸಿಂಹಸ್ವಪ್ನವಾಗಿದ್ದರು. ಹೀಗಾಗಿ ಮುಖ್ಯ ಆಯುಕ್ತರ ಪ್ರಭಾವವನ್ನು ಕಡಿಮೆ ಮಾಡಲು ಅವರ ಜೊತೆಗೆ ಇನ್ನಿಬ್ಬರು ಆಯುಕ್ತರನ್ನು ನೇಮಿಸುವ ತಿದ್ದುಪಡಿ ತರಲಾಯಿತು. ಮೋದಿಯವರ ವಿರುದ್ಧದ ನಿರ್ಣಯ ತೆಗೆದುಕೊಂಡರು ಎಂಬ ಕಾರಣಕ್ಕೆ ಕಿರುಕುಳಕ್ಕೆ ಒಳಗಾಗಿದ್ದ ಆಯುಕ್ತರಲ್ಲಿ ಒಬ್ಬರಾಗಿದ್ದ ಅನೂಪ್ ಚಂದ್ರ ಪಾಂಡೆಯವರು ಈಗ ಚುನಾವಣಾ ಆಯೋಗದಿಂದ ನಿವೃತ್ತರಾಗಿದ್ದಾರೆ. ಇನ್ನೊಬ್ಬ ಆಯುಕ್ತರಾಗಿದ್ದ ಅರುಣ್ ಗೋಯಲ್ ರವರು ಇತ್ತೀಚೆಗೆ ಯಾವುದೇ ಕಾರಣ ಹೇಳದೇ ರಾಜೀನಾಮೆ ಕೊಟ್ಟಿದ್ದು ಮಾರ್ಚ್ 9 ರಂದು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಈಗ ಉಳಿದಿರೋದು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ ರವರೊಬ್ಬರೇ. ಈಗ ಖಾಲಿ ಇರುವ ಆಯುಕ್ತರ ಸ್ಥಾನಕ್ಕೆ  ನೇಮಕಾತಿ ಮಾಡಿದ್ದರ ಹಿಂದಿನ ಹುನ್ನಾರಗಳನ್ನು ತಿಳಿಯಬೇಕಿದೆ.

“ಪ್ರಧಾನಿ ನೇತೃತ್ವದ ಆಯುಕ್ತರ ಆಯ್ಕೆಯ ತ್ರಿಸದಸ್ಯ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು (ಸಿಜೆಐ) ಸದಸ್ಯರಾಗಿರಬೇಕು ಹಾಗೂ ಈ ಮೂವರು ಸದಸ್ಯರ ಶಿಫಾರಸ್ಸಿನಂತೆ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡಬೇಕು” ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ರವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2023 ಮಾರ್ಚ್ 2 ರಂದು ತೀರ್ಪು ನೀಡಿತ್ತು. ಹಾಗೂ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಕುರಿತು ಸಂಸತ್ತು ಹೊಸ ಕಾನೂನನ್ನು ರೂಪಿಸುವವರೆಗೂ ಈ ತೀರ್ಪು ಜಾರಿಯಲ್ಲಿರುತ್ತದೆ ಎಂದೂ ಹೇಳಿತ್ತು. 

ಟಿ.ಎನ್ ಶೇಷನ್

ಆದರೆ ಪ್ರಧಾನಿಯವರ ಸರ್ವಾಧಿಕಾರಿ ತೀರ್ಮಾನಕ್ಕೆ ಅಂಕುಶ ಹಾಕಬಹುದಾದ ಈ ತೀರ್ಪು ಮೋದಿಯವರಿಗೆ ಅಪಥ್ಯವಾಗಿತ್ತು. ಸುಪ್ರೀಂ ಕೋರ್ಟನ್ನು ಚುನಾವಣೆ ಆಯುಕ್ತರ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡುವ ಪ್ರಯತ್ನಕ್ಕೆ ಲೋಕಸಭೆಯನ್ನು ಬಳಸಿಕೊಳ್ಳಲಾಯಿತು. ಲೋಕಸಭೆಯಲ್ಲಿ ಗಲಾಟೆ ಮಾಡಿದರು ಎನ್ನುವ ಕಾರಣಕ್ಕೆ ಹಲವಾರು ವಿರೋಧ ಪಕ್ಷಗಳ ಸಂಸದರನ್ನು ಅಮಾನತ್ತು ಮಾಡಲಾದ ಸಮಯ ನೋಡಿಕೊಂಡು, ಸಂಸತ್ತನ್ನು ಯಾಮಾರಿಸಿ ಸೂಕ್ತ ಚರ್ಚೆ ಇಲ್ಲದೇ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯಲಾಯ್ತು.  ಹೀಗಾಗಿ “ಚುನಾವಣಾ ಆಯುಕ್ತರ ನೇಮಕ, ಸೇವಾ ಷರತ್ತು ಅವಧಿ” ಕಾಯ್ದೆಯ ಸೆಕ್ಷನ್ 7 ಮತ್ತು 8 ಕ್ಕೆ  ತಿದ್ದುಪಡಿ ತಂದ ಮೋದಿ ಸರಕಾರ ಆಯುಕ್ತರ ಆಯ್ಕೆಯ ಸಮಿತಿಯಲ್ಲಿ ಸಿಜೆಐ ರವರನ್ನೇ ಕೈಬಿಟ್ಟಿತು. ಪ್ರಧಾನಮಂತ್ರಿ, ಪ್ರಧಾನಿಯೇ ನಾಮನಿರ್ದೇಶನ ಮಾಡುವ ಸಂಪುಟ ದರ್ಜೆಯ ಸಚಿವ ಹಾಗೂ ವಿರೋಧ ಪಕ್ಷದ ನಾಯಕ ಈ ಮೂವರು ಆಯುಕ್ತರ ಆಯ್ಕೆ ಸಮಿತಿಯ ಸದಸ್ಯರಾಗಿರಬೇಕು ಎಂಬ ಹೊಸ ನಿಯಮವನ್ನು 2024 ಜನವರಿ 2 ರಿಂದ ಜಾರಿ ಮಾಡಲಾಯಿತು. ಹಾಗೂ “ನಿವೃತ್ತ ಹಾಗೂ ಹಾಲಿ ಮುಖ್ಯ ಚುನಾವಣಾ ಆಯುಕ್ತರುಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಅಥವಾ ಸಿವಿಲ್ ಮೊಕದ್ದಮೆಗಳನ್ನು ನ್ಯಾಯಾಲಯ ನಡೆಸುವುದನ್ನು ಈ ತಿದ್ದುಪಡಿ ಮಸೂದೆಯಲ್ಲಿ ನಿಷೇಧಿಸಲಾಗಿತ್ತು. ಅಂದರೆ ‘ಚುನಾವಣಾ ಆಯುಕ್ತರು ಎಂತಹುದೇ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಕ್ರಮಗಳನ್ನು ತೆಗೆದುಕೊಂಡರೂ ಯಾವ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ’ ಎನ್ನುವ ಸರ್ವಾಧಿಕಾರಿ ನಿಲುವನ್ನು ಮೋದಿ ಸರಕಾರ ತೆಗೆದುಕೊಂಡಿತ್ತು.

ಅರುಣ್‌ ಗೋಯೆಲ್

ಮೂವರು ಸದಸ್ಯರಲ್ಲಿ ಇಬ್ಬರು ಯಾರ ಹೆಸರನ್ನು ಆಯುಕ್ತರ ಸ್ಥಾನಕ್ಕೆ ಸೂಚಿಸುತ್ತಾರೋ ಅವರು ಆಯುಕ್ತರಾಗುತ್ತಾರೆ. ವಿರೋಧ ಪಕ್ಷದ ನಾಯಕ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ತಮ್ಮ ಅಣತಿಯಂತೆ ನಡೆಯುವವರನ್ನೇ ಆಯುಕ್ತರನ್ನಾಗಿಸಿ ತಮ್ಮ ಪರವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳುವುದೇ ಈ ತಿದ್ದುಪಡಿ ಹಿಂದೆ ಮೋದಿಯವರ ತಂತ್ರಗಾರಿಕೆ ಇತ್ತು. ಇನ್ನೇನು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕಿದೆ. ಅಷ್ಟರಲ್ಲಿ ಖಾಲಿ ಇರುವ ಇಬ್ಬರು ಆಯುಕ್ತರನ್ನು ಆಯ್ಕೆ ಮಾಡಬೇಕಿತ್ತು.  ಪ್ರಧಾನಿ ನೇತೃತ್ವದ ಸಮಿತಿಯು ನೂತನ ಚುನಾವಣಾ ಆಯುಕ್ತರ ಹೆಸರನ್ನು ಅಂತಿಮ ಗೊಳಿಸಲು ಮಾರ್ಚ್ 15 ರಂದು ಸಭೆ ಸೇರಬೇಕಾಗಿತ್ತು. ಮತ್ತೆ ಮೋದಿಯವರ ಆಜ್ಞಾವರ್ತಿ ವ್ಯಕ್ತಿಗಳನ್ನೇ ಆಯುಕ್ತರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಮೋದಿ ಸರಕಾರಕ್ಕೆ ಇದು ಅಗತ್ಯವಾಗಿತ್ತು

ಆದರೆ.. 2023 ರ ತೀರ್ಪಿಗೆ ವಿರುದ್ಧವಾದ ಈ ತಿದ್ದುಪಡಿಯನ್ನು ವಿರೋಧಿಸಿ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ನಾಯಕಿ ಜಯಾ ಠಾಕೂರ್ ರವರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ‘ಹೊಸ ತಿದ್ದುಪಡಿ ಕಾಯಿದೆ ಪ್ರಕಾರ ಚುನಾವಣಾ ಆಯುಕ್ತರನ್ನು ನೇಮಕಾತಿ ಮಾಡದಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕು’ ಎಂದು ಮನವಿ ಸಲ್ಲಿಸಿದ್ದರು. ಆಯ್ಕೆ ಸಮಿತಿಯಿಂದ ಸಿಜೆಐ ರವರನ್ನು ಕೈಬಿಟ್ಟ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದರು. ತಿದ್ದುಪಡಿಗೆ ಮುಂಚೆ ಸುಪ್ರೀಂ ಕೋರ್ಟ್ ತೀರ್ಪಿಗನುಗುಣವಾಗಿ ಇದ್ದ ಕಾಯ್ದೆಯ ಅನುಸಾರ ಆಯುಕ್ತರ ನೇಮಕಾತಿ ಆಗಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ( ಎಡಿಆರ್) ಎನ್ನುವ ಸ್ವಯಂ ಸೇವಾ ಸಂಸ್ಥೆಯ ಪರವಾಗಿ “ಸಶಕ್ತ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಆಯೋಗವನ್ನು ರಾಜಕೀಯ ಹಸ್ತಕ್ಷೇಪಗಳಿಂದ ದೂರವಿಡಬೇಕು” ಎಂದು ವಕೀಲರಾದ ಪ್ರಶಾಂತ ಭೂಷಣ್ ರವರು ನ್ಯಾಯಲಯಕ್ಕೆ  ಮನವಿ ಮಾಡಿದ್ದರು. ಈ ಎಲ್ಲಾ ಅರ್ಜಿಗಳನ್ನು ತುರ್ತು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟಿನ ನ್ಯಾಯಪೀಠವು ಪ್ರತಿಕ್ರಿಯೆ ನೀಡಿ ಅದಕ್ಕೆ ಮಾರ್ಚ್ 15 ರಂದು ಸಮಯ ನಿಗದಿಪಡಿಸಿತು. 

ಇದು ಮೋದಿ ಸರಕಾರಕ್ಕೆ ನುಂಗಲಾರದ ತುತ್ತಾಯಿತು. ಚುನಾವಣಾ ಬಾಂಡ್ ವಿವರ ಬಿಡುಗಡೆ ಮಾಡಲೇಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಅರಗಿಸಿ ಕೊಳ್ಳುವುದೇ ಮೋದಿಯವರಿಗೆ ಕಷ್ಟ ಆಗಿರುವಾಗ, ಆಯುಕ್ತರ ನೇಮಕಾತಿ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ತಡೆ ನೀಡಬಹುದು ಇಲ್ಲವೇ ಅಮಾನತ್ತಿನಲ್ಲಿಡಬಹುದು ಎನ್ನುವ ಆತಂಕ ಎದುರಾಯಿತು. ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಗುವ ಮುಂಚೆಯೇ ಆಯುಕ್ತರ ನೇಮಕಾತಿ ಮಾಡಿ ಮುಗಿಸಲೆಂದು ಮಾರ್ಚ್ 15ಕ್ಕೆ ನಿಗದಿಯಾಗಿದ್ದ ಆಯುಕ್ತರ ಆಯ್ಕೆ ಸಭೆಯನ್ನು ಒಂದು ದಿನ ಮುಂಚೆಯೇ ಕರೆದ ಪ್ರಧಾನಿಗಳು ಚುನಾವಣಾ ಆಯುಕ್ತರನ್ನಾಗಿ ಮಾಜಿ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಹಾಗೂ ಸುಖಬೀರ್ ಸಂಧು ಅವರನ್ನು ನೇಮಕ ಮಾಡಿ ಕಾನೂನು ಸಚಿವಾಲಯದ ಮೂಲಕ ಅಧಿಸೂಚನೆ ಹೊರಡಿಸಿದರು.  

ಜ್ಞಾನೇಶ್ ಕುಮಾರ್ ಹಾಗೂ ಸುಖಬೀರ್ ಸಂಧು

ಹೀಗೆ ತರಾತುರಿಯಲ್ಲಿ ಮಾಡಲಾದ ಆಯ್ಕೆ ಪ್ರಕ್ರಿಯೆಯಲ್ಲಿ ಅಂದುಕೊಂಡ ಆತಂಕವೇ ನಿಜವಾಯ್ತು. ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿಯವರನ್ನು ಯಾಮಾರಿಸಲಾಯ್ತು. ಅದು ಹೇಗೆಂದರೆ.. ಆಯುಕ್ತರಾಗಬಹುದಾದ ಸಂಭವನೀಯರ ಪಟ್ಟಿಯನ್ನು ಚೌಧರಿಯವರು ಕೇಳಿದ್ದರು. ಸಭೆಗೆ ಒಂದು ದಿನದ ಮುಂಚೆ 212 ಹೆಸರುಗಳುಳ್ಳ ಪಟ್ಟಿಯನ್ನು ಒದಗಿಸಲಾಗಿತ್ತು. ಇಷ್ಟೊಂದು ಜನರ ಪಟ್ಟಿಯನ್ನು ಪರಿಶೀಲಿಸಿ ಪ್ರತಿಯೊಬ್ಬರ ಹಿನ್ನೆಲೆಯನ್ನು ಅಧ್ಯಯನ ಮಾಡಿ ಸೂಕ್ತವಾದ ಇಬ್ಬರನ್ನು ಕೇವಲ ಒಂದು ದಿನದಲ್ಲಿ ಆಯ್ಕೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿಗಳ ಬಳಿ ಕೇವಲ ಐದು ಜನರ ಪಟ್ಟಿ ಇತ್ತು. ಆ ಪಟ್ಟಿಯನ್ನೂ ಸಹ ನಾಮಕಾವಸ್ತೆ 10 ನಿಮಿಷಗಳ ಮುಂಚೆ ಚೌಧರಿಯವರಿಗೆ ನೀಡಲಾಗಿತ್ತು. ಇದೆಲ್ಲವನ್ನೂ ವಿರೋಧಿಸಿದ ವಿರೋಧ ಪಕ್ಷದ ಸದಸ್ಯ ಚೌಧರಿಯವರು ತಮ್ಮ ಅಸಮ್ಮತಿಯನ್ನು ದಾಖಲಿಸಿದರು. ಪ್ರಧಾನಿಗಳು ತಮಗೆ ಬೇಕಾದವರ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದರು. ಆಯುಕ್ತರಾಗಿ ಆಯ್ಕೆಯಾದವರಿಗೂ ಮೋದಿ ಸರಕಾರಕ್ಕೂ ಪೂರ್ವಭಾವಿ ಸಂಬಂಧಗಳಿದ್ದವು. ಜ್ಞಾನೇಶ್ ಕುಮಾರ್ ಅವರು ಗೃಹ ಸಚಿವಾಲಯದಲ್ಲಿದ್ದಾಗ ಕಾಶ್ಮೀರದ ವಿಶೇಷ ಸ್ಥಾನಮಾನವಾಗಿದ್ದ 370 ವಿಧಿಯ ರದ್ಧತಿ ಕುರಿತು ಮೇಲ್ವಿಚಾರಣೆ ನಡೆಸಿ ಯಶಸ್ವಿಯಾಗಿದ್ದರಾದ್ದರಿಂದ ಈಗ ಚುನಾವಣಾ ಆಯೋಗದ ಭಾಗವಾಗಿ ಆಯ್ಕೆ ಮಾಡಲಾಯ್ತು.‌

ಇದನ್ನೂ ಓದಿಬಿಜೆಪಿಗೆ 400 ಸ್ಥಾನ ಸಿಗುವುದು ಸಾಧ್ಯವೇ?

“ಸಭೆಯಲ್ಲಿ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯ ಕಾರ್ಯವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆ ಹಾಗೂ ಆಯ್ಕೆ ಕುರಿತು ನನ್ನ ಅಸಮ್ಮತಿಯನ್ನು ದಾಖಲಿಸಿದ್ದೇನೆ” ಎಂದು ಚೌಧರಿಯವರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಆಯುಕ್ತರ ಆಯ್ಕೆಯ ನಂತರ ಸುದ್ದಿಗಾರರ ಜತೆ ಮಾತಾಡಿದ ಚೌಧರಿಯವರು “ನನ್ನನ್ನು ಔಪಚಾರಿಕವಾಗಿ ಮಾತ್ರ ಸಭೆಗೆ ಕರೆಯಲಾಗಿತ್ತು. ಆಯ್ಕೆ ಸಮಿತಿಯಲ್ಲಿ ಸಿಜೆಐ ಇದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ನಾನು ಯಾವುದೇ ಹೆಸರನ್ನೂ ಸೂಚಿಸಲಿಲ್ಲ. ಸರಕಾರ ತನಗೆ ಬೇಕಾದವರನ್ನು ಆಯ್ಕೆ ಮಾಡಿದೆ” ಎಂದು ಹೇಳಿದರು. ಆಯ್ಕೆ ಸಮಿತಿಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿದ್ದೇ ಈ ಕಾರಣಕ್ಕೆ. ಕೊನೆಗೂ ಮೋದಿಯವರು ಅಂದುಕೊಂಡಂತೆಯೇ ಆಯಿತು. 

ಆಯುಕ್ತರ ಆಯ್ಕೆಯ ನಿರ್ಧಾರ ಈಗ ಇನ್ನೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತಿದ್ದುಪಡಿಯನ್ನು ರದ್ದು ಮಾಡಿ ಮೊದಲಿದ್ದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿ ಎಂದು  ನ್ಯಾಯಾಧೀಶರು ಆದೇಶಿಸಿದರೆ ಚುನಾವಣಾ ಆಯೋಗದ ಮೇಲೆ ಜನರಿಗೆ ವಿಶ್ವಾಸಾರ್ಹತೆ ಮೂಡಬಹುದು. ಇಲ್ಲದೇ ಹೋದರೆ ಮತ್ತೆ ಮೋದಿ ಕೈಗೊಂಬೆ ಆಯುಕ್ತರೇ ನೇಮಕಗೊಂಡು ಚುನಾವಣಾ ವ್ಯವಸ್ಥೆ ಏಕಪಕ್ಷೀಯವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಾಗಾಗದಿರಲಿ ಎಂಬುದೇ ಎಲ್ಲಾ ಪ್ರಜಾತಂತ್ರವಾದಿಗಳ ಬಯಕೆಯಾಗಿದೆ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು

More articles

Latest article