ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಮತ್ತು ವಿವಿಧ ಸಮುದಾಯಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ. ಈ ಸಮಾರಂಭ ನ.10, ಭಾನುವಾರ ಉಡುಪಿಯ ಯುಬಿಎಂಸಿ ಆಡಿಟೋರಿಯಂನಲ್ಲಿ ಸಂಜೆ 6 ಗಂಟೆಗೆ ಜರುಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಗಳೂ ಹಾಗೂ ತಿರುವಳ್ಳೂರ್ ಲೋಕಸಭಾ ಕ್ಷೇತ್ರದ ಸಂಸದರಾದ ಸಸಿಕಾಂತ್ ಸೆಂತಿಲ್ ಅವರಿಗೆ ಮಾನವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಉದ್ಯಮಿ, ಸಮಾಜ ಸೇವಕರು ಹಗೂ ದುಬೈನ ನ್ಯಾಶ್ ಇಂಜಿನಿಯರಿಂಗ್ ಸಂಸ್ಥೆಯ ಮುಖ್ಯಸ್ಥ ಹಾಜಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ಸೇವಾ ರತ್ನ ಮತ್ತು ಸಾಮಾಜಿಕ ಹೋರಾಟಗಾರರು ಮತ್ತು ಕ್ರೈಸ್ತ ಧರ್ಮ ಗುರು ಫಾ. ವಿಲಿಯಂ ಮಾರ್ಟಿಸ್ ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.
ಸನ್ಮಾನಕ್ಕೆ ಭಾಜನರಾಗುತ್ತಿರುವ ಇತರ ಸಾಧಕರೆಂದರೆ ಜನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರ್, ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಅಣ್ಣಪ್ಪ ನೆಕ್ರೆ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸರಸು ಡಿ.ಬಂಗೇರ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ದ.ಕ. ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಿಳಾ ಮಹಾಜನ ಸಂಘ ಮಾಜಿ ಅಧ್ಯಕ್ಷೆ ಸರಳಾ ಬಿ.ಕಾಂಚನ್ ಮತ್ತು ಕುಂದಾಪುರದ ಸಮಾಜ ಸೇವಕರಾದ ಕೆ.ಎಚ್. ಹಸೈನಾರ್ ಕೋಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ.
ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಯನಪೋಯ ವಿಶ್ವವಿದ್ಯಾಲಯ ಕುಲಪತಿ ವೈ. ಅಬ್ದುಲ್ಲಾ ಕುಂಙ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮಹಮದ್ ಯಾಸಿನ್ ಮಲ್ಪೆ ಪ್ರಾಸ್ತಾವಿಕ ಮತ್ತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ, ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಯು.ಟಿ. ಇಫ್ತಿಕಾರ್, ಪ್ರಸಾದ್ ರಾಜ್ ಕಾಂಚನ್, ಅಫ್ರೋಜ್ ಅಸಾದಿ, ಹಾಜಿ ಅಬ್ದುಲ್ಲಾ ಕಾರ್ಕಳ, ಕೆ.ಫಣಿರಾಜ್, ಸುಂದರ್ ಮಾಸ್ತರ್, ಗ್ರೇಸಿ ಕೊಯಿಲೋ ಮತ್ತು ಡಾ. ಫಿರ್ದೌಸ್ ಉಪಸ್ಥಿತರಿರುತ್ತಾರೆ.