ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆ: ಕಾಂಗ್ರೆಸ್‌ ಭರವಸೆ

Most read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ‘ತೀರ್ಥ ಯಾತ್ರೆ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌, ಸದ್ಯಕ್ಕೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಕರೆದೊಯ್ಯುವ ಯಾವುದೇ ಯೋಜನೆಗಳಿಲ್ಲ. ಆದ್ದರಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ತಾರತಮ್ಯ ಮಾಡದೆ ಉಚಿತ ‘ತೀರ್ಥ ಯಾತ್ರೆ’ ಯೋಜನೆಯನ್ನು ಅನುಷಾನಗೊಳಿಸುತ್ತೇವೆ ಎಂದು  ಹೇಳಿದ್ದಾರೆ.

ನಮ್ಮ ಸರ್ಕಾರ ಸ್ವಂತ ಖರ್ಚಿನಲ್ಲಿ ಹಿರಿಯ ನಾಗರಿಕರಿಗೆ ಸಾರನಾಥ ಬುದ್ಧ ವಿಹಾರ, ಬೋಧಗಯಾ ಟೆಂಪಲ್ (ಬಿಟಿ), ನಾಗಪುರ ದೀಕ್ಷಾಭೂಮಿ ಸೇರಿದಂತೆ ಇತರೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆಗಳನ್ನು ಆಯೋಜಿಸಲಿದೆ ಎಂದು ಉದಿತ್‌ ರಾಜ್‌ ಭರವಸೆ ನೀಡಿದ್ದಾರೆ. 2019ರಲ್ಲಿ ಎಎಪಿ ಸರ್ಕಾರವು ದೇಶದಾದ್ಯಂತ ಇರುವ ತೀರ್ಥಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಹಿರಿಯ ನಾಗರಿಕರಿಗಾಗಿ ‘ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ’ಯನ್ನು ಆರಂಭಿಸಿತ್ತು.

ದೆಹಲಿ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಅಯೋಧ್ಯೆ ರಾಮಮಂದಿರ, ದ್ವಾರಕಾಧೀಶ ದೇವಾಲಯ, ಪುರಿ, ವಾರಣಾಸಿ, ವೈಷ್ಣೋದೇವಿ ಧಾಮ, ಅಜ್ಮೀರ್ ಷರೀಫ್, ರಾಮೇಶ್ವರಂ, ಶಿರಡಿ, ತಿರುಪತಿ ಬಾಲಾಜಿ, ಅಮೃತಸರ ಸೇರಿದಂತೆ 15 ಸ್ಥಳಗಳಿಗೆ ಉಚಿತ ತೀರ್ಥಯಾತ್ರೆಯನ್ನು ಆಯೋಜಿಸುತ್ತಿದೆ. 70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

More articles

Latest article