ಕೆರೆಗೆ ಈಜಲೆಂದು ತೆರಳಿದ ನಾಲ್ಕು ಮಕ್ಕಳು ನೀರುಪಾಲಾದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ನಡೆದಿದೆ. ಜೀವನ್ (13), ಸಾತ್ವಿಕ್ (11), ಪೃಥ್ವಿ (12) ಹಾಗೂ ವಿಶ್ವ (12) ಸಾವನ್ನಪ್ಪಿದ ಮಕ್ಕಳು.
ಒಟ್ಟು ಐದು ಬಾಲಕರು ಕೆರೆಯೊಂದರಲ್ಲಿ ಈಜಲು ತೆರಳಿದ್ದರು. ಕೆರೆಗೆ ತೆರಳಿದ್ದ ಐವರಲ್ಲಿ ಬದುಕುಳಿದಿದ್ದ ಓರ್ವ ಚಿರಾಗ್ ಎಂಬ ಬಾಲಕ, ಸಮೀಪದಲ್ಲಿದ್ದವರಿಗೆ ಸುದ್ದಿ ತಿಳಿಸಿದ್ದಾನೆ. ಸ್ಥಳೀಯರು ಬರುವಷ್ಟರಲ್ಲಿ ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿದ್ದರು.
ನಂತರ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದು, ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಶೋಧಕಾರ್ಯ ನಡೆಸಿ, ನಾಲ್ಕೂ ಮಕ್ಕಳ ಮೃತದೇಹವನ್ನು ಕರೆಯಿಂದ ಹೊರ ತೆಗೆದಿದ್ದಾರೆ.