ಬೆಂಗಳೂರು: ಇತ್ತೀಚೆಗಷ್ಟೇ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇದೀಗ ಅಂತಹುದೇ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಈ ಆರೋಪ ಮಾಡಿದ್ದಾರೆ. ಇವರು ಈಗಾಗಲೇ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುನಿರತ್ನ ಅವರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡಿರುವುದಕ್ಕೆ ಸಾಕ್ಷಿಗಳಿವೆ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ.
ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಮಾತನಾಡಿ ಮುನಿರತ್ನ ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿರುವುದಕ್ಕೆ ನಮ್ಮ ಬಳಿ ಆಡಿಯೋ, ವೀಡಿಯೋ ದಾಖಲೆ ಇದೆ. ನನ್ನ ಅಶ್ಲೀಲ ವೀಡಿಯೋ ಮಾಡಲು ಮುನಿರತ್ನ ಷಡ್ಯಂತ್ರ ಮಾಡಿದ್ದರು. ಕೊನೆಗೆ ನಾನು ನನ್ನ ಹೆಂಡತಿ ಇರುವುದನ್ನು ಚಿತ್ರೀಕರಿಸಲು ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಪ್ರಯತ್ನ ಪಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ. ನಮ್ಮ ಮನೆ ಕೆಲಸದವರಿಗೆ ಹಣದ ಅಮಿಷವೊಡ್ಡಿ ನಮ್ಮ ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಮುನಿರತ್ನ ಸಂಚು ರೂಪಿಸಿದ್ದರು. ಅವರು ಹೇಳಿದಂತೆ ಕೇಳದೆ ಇದ್ದಿದ್ದಕ್ಕೆ ಕೊಲೆಗೂ ಸಂಚು ಹೂಡಿದ್ದರು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಎಸ್ಐಟಿಗೆ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಮುನಿರತ್ನ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದಾರೆ.