ಬೆಂಗಳೂರು: ಕರ್ನಾಟಕದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು, ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶಿ ಭಾಷಾ ಪ್ರಯೋಗಾಲಯಗಳ ಮೂಲಕ ವಿದೇಶಿ ಭಾಷಾ ತರಬೇತಿಯನ್ನು ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಘೋಷಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಶುಕ್ರವಾರ ಹೊಸ ಫಿಸಿಯೋಥೆರಪಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ, ಡಾ. ಪಾಟೀಲ್, ಕೌಶಲ್ಯಪೂರ್ಣ ದಾದಿಯರು ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರಿಗೆ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿದೇಶಿ ಭಾಷಾ ಒತ್ತಿ ಹೇಳಿದರು.
“ತರಬೇತಿ ಪಡೆದ ದಾದಿಯರು ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ ಜರ್ಮನಿ, ಇಟಲಿ, ಜಪಾನ್ ಮತ್ತು ಯುಎಇ ಆಸ್ಪತ್ರೆಗಳಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಈ ದೇಶದವರು ನಮ್ಮನ್ನು ಸಂಪರ್ಕಿಸಿದ್ದಾರೆ. ಈ ಆಸ್ಪತ್ರೆಗಳಿಗೆ ಅವರ ಸ್ಥಳೀಯ ಭಾಷೆ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಸಚಿವರು ಹೇಳಿದರು.
ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ಜರ್ಮನ್, ಜಪಾನೀಸ್, ಇಟಾಲಿಯನ್ ಮತ್ತು ಇಂಗ್ಲಿಷ್ ಕಲಿಯುವ ಆಯ್ಕೆಯನ್ನು ಹೊಂದಿರುತ್ತಾರೆ, ಅವರು ವಿದೇಶಿ ಉದ್ಯೋಗಾವಕಾಶಗಳಿಗೆ ತಮ್ಮನ್ನು ತಾವು ಸಿದ್ಧಗೊಳಿಸಿಗೊಳ್ಳುತ್ತಾರೆ ಎಂದು ಡಾ. ಪಾಟೀಲ್ ವಿವರಿಸಿದರು.
ಕಳಪೆ ಗುಣಮಟ್ಟದ ಪ್ಯಾರಾ ಮೆಡಿಕಲ್ ಕಾಲೇಜು ಮುಚ್ಚಲ ಕ್ರಮ:
ಕಳಪೆ ಗುಣಮಟ್ಟದ ಪ್ಯಾರಾಮೆಡಿಕಲ್, ಜಿಎನ್‌ಎಂ ಮತ್ತು ನರ್ಸಿಂಗ್ ಕಾಲೇಜುಗಳನ್ನು ಮುಚ್ಚುವ ಅಗತ್ಯವಿದೆ. ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಬೋಧನೆ ಮತ್ತು ಅತ್ಯಾಧುನಿಕ ಮೂಲಸೌಕರ್ಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ವೃತ್ತಿಪರ ವೈದ್ಯಕೀಯ ಕಾಲೇಜುಗಳು ತಮ್ಮ ಕ್ಯಾಂಪಸ್‌ಗಳಲ್ಲಿ ಸಂಬಂಧಿತ ಆರೋಗ್ಯ ವಿಜ್ಞಾನ ಕೋರ್ಸ್‌ಗಳನ್ನು ಪರಿಚಯಿಸಬೇಕು ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಎಸ್. ಕುಬೇರ್ ಮತ್ತು ಕಲಬುರಗಿ ಸಂಸದರೂ ಮತ್ತು ಸಂಸ್ಥೆಯ ಖಜಾಂಚಿಗಳೂ ಆದ ರಾಧಾಕೃಷ್ಣ ದೊಡ್ಡಮನಿ ಹಾಜರಿದ್ದರು.