ಬೆಂಗಳೂರು: ಮಕ್ಕಳ ಸುರಕ್ಷತೆಗೆ ಶಾಲೆಗಳಲ್ಲಿ ಪ್ರತಿದಿನ ಪಾಲಿಸಬೇಕಾದ 25 ಅಂಶಗಳನ್ನು ಪಟ್ಟಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಹೊಣೆಯನ್ನು ಮುಖ್ಯಶಿಕ್ಷಕರೇ ನಿಭಾಯಿಸಬೇಕು ಎಂದೂ ಸ್ಪಷ್ಟಪಡಿಸಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ಸೇರಿದಂತೆ ಹಲವು ಶಾಲೆಗಳಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಮಕ್ಕಳ ಸುರಕ್ಷತೆಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಪಟ್ಟಿಯನ್ನು ಶಿಕ್ಷಣ ಹಕ್ಕು ಕಾಯ್ದೆ, ಕರ್ನಾಟಕ ಮಕ್ಕಳ ಸುರಕ್ಷತಾ ನೀತಿ ಅನ್ವಯ ಸಿದ್ಧಪಡಿಸಲಾಗಿದೆ.
ಮಕ್ಕಳ ಸುರಕ್ಷತೆಯ ಕುರಿತು ಇದುವರೆಗೂ ಹಲವು ಸುತ್ತೋಲೆ ಹೊರಡಿಸಿದರೂ, ಲೋಪಗಳು ಮರುಕಳಿಸುತ್ತಲೇ ಇವೆ. ಹಾಗಾಗಿ, ಮುಖ್ಯಶಿಕ್ಷಕರು ಶಾಲೆ ಆರಂಭವಾಗುತ್ತಿದ್ದಂತೆ ಕೆಲ ಪ್ರಾಥಮಿಕ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ಸೂಚನಾ ಫಲಕದಲ್ಲಿ ಬರೆಸಬೇಕು. ಸಹ ಶಿಕ್ಷಕರ ಸಹಾಯ ಪಡೆಯಬೇಕು. ಸುರಕ್ಷತಾ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಮುಂದೆ ಲೋಪಗಳು ಕಂಡು ಬಂದರೆ ಅವರನ್ನೇ ನೇರ ಹೊಣೆ ಮಾಡಲಾಗುವುದು. ಬಿಇಒ, ಡಿಡಿಪಿಐ ಸೇರಿದಂತೆ ಮೇಲಧಿಕಾರಿಗಳು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.